ಗುಬ್ಬಿ
ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿನಂತೆ ಹಳ್ಳಿಗಳಿಂದ ನಗರ ಪ್ರದೇಶದತ್ತ ಉದ್ಯೋಗ ಹರಸಿ ಗುಳೆ ಹೋಗಿದ್ದ ಯುವಕರು ಮರಳಿ ಗೂಡಿಗೆ ಬಂದಂತೆ ತಮ್ಮ ಸ್ವಗ್ರಾಮದಲ್ಲೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ತಾಲ್ಲೂಕಿನ ಹೊದಲೂರು ಗ್ರಾಮದ ಯುವಕರ ಗುಂಪು ಯಶಸ್ಸು ಕಂಡಿದ್ದಾರೆ.
ಲಾಕ್‍ಡೌನ್ ಆದೇಶದ ನಂತರದಲ್ಲಿ ಉದ್ಯೋಗ ಕಳೆದುಕೊಂಡು ನಗರದಲ್ಲಿ ಜೀವನ ಮಾಡಲಾಗದೆ ಕಷ್ಟಪಟ್ಟು ಮೊದಲ ಹಂತದ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಮ ಸೇರಿದ ಯುವಕರು ಕೆಲ ದಿನ ನಿರುದ್ಯೋಗ ಸಮಸ್ಯೆ ಅನುಭವಿಸಿದರು. ನಂತರದಲ್ಲಿ ಕೃಷಿ ಆಧಾರಿತ ಉದ್ಯೋಗದಿಂದ ಅನ್ನ ದುಡಿದುಕೊಳ್ಳಬಹುದು ಎಂಬ ದಿಟ್ಟ ನಿಲುವು ತಾಳಿದ ಹೊದಲೂರು ಗ್ರಾಮದ ಏಳು ಮಂದಿ ಯುವಕರ ಗುಂಪು ಕೃಷಿ ಹೊಂಡ, ಇಂಗು ಗುಂಡಿ, ಬದು ನಿರ್ಮಾಣ, ಬಾಳೆ, ಅಡಕೆ, ತೆಂಗು ಗುಂಡಿ ಹೀಗೆ ಅನೇಕ ಕೃಷಿ ಆಧಾರಿತ ಕೆಲಸ ಮಾಡಲು ಮುಂದಾದರು.
ಕೃಷಿ ತೊರೆದು ನಗರದತ್ತ ಬದುಕು ಕಟ್ಟಿಕೊಳ್ಳಲು ಕನಿಷ್ಠ ವಿದ್ಯಾರ್ಹತೆಗೆ ತಕ್ಕಂತೆ ಕಾರ್ಖಾನೆಗಳಲ್ಲಿ ಕೂಲಿ ಕೆಲಸ ಮಾಡಿ, ಹತ್ತಾರು ವರ್ಷ ದುಡಿದರೂ ಉಳಿತಾಯ ಎಂಬುದು ಕನಸಾಗಿತ್ತು. ಕೊರೋನಾ ವೈರಸ್ ಬಂದು ನಗರದಲ್ಲಿದ್ದ ಗ್ರಾಮೀಣ ಯುವಕರಿಗೆ ಬುದ್ದಿ ಕಲಿಸಿದೆ. ಲಾಕ್‍ಡೌನ್ ಆದೇಶ ಜಾರಿಯಾದ ತಕ್ಷಣದಲ್ಲೆ ಉದ್ಯೋಗ ಕಳೆದುಕೊಂಡು ಪರದಾಡುವಂತಾಯಿತು. ನಾಲ್ಕು ಕಾಸು ಉಳಿತಾಯವಿಲ್ಲದೆ ಸ್ವಗ್ರಾಮಕ್ಕೆ ಮರಳಿ ತಮ್ಮ ಪೋಷಕರಿಗೆ ಹೊರೆಯಾದೆವು ಎಂಬ ಭಾವನೆ ಕಾಡತೊಡಗಿತು. ಈ ಸಂದರ್ಭದಲ್ಲಿ ಯುವಕರ ಕೈ ಹಿಡಿದ ಕೃಷಿ ಸಂಬಂಧಿತ ನರೇಗಾ ಉದ್ಯೋಗವು ಗ್ರಾಮದಲ್ಲೇ ಬದುಕು ಕಟ್ಟಿಕೊಡುತ್ತಿದೆ.
ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾದ ಯುವಕರು ಕಲ್ಯಾಣಿ ಮಾದರಿಯಲ್ಲಿ ಹೊಂಡ ನಿರ್ಮಿಸಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಮರು ಚಾಲನೆ ನೀಡಿದಂತಾಗಿದೆ. ಈ ಕಾರ್ಯಕ್ಕೆ ಗ್ರಾಮದ ರೈತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಗಾರ್ಮೆಂಟ್ಸ್‍ನಲ್ಲಿ ಉದ್ಯೋಗ ಮಾಡುತ್ತಿದ್ದ ಗಂಗಾಧರ್ ಈ ಹುಡುಗರ ಗುಂಪು ಕಟ್ಟಿಕೊಂಡು ಕೃಷಿ ಚಟುವಟಿಕೆಗೆ ಪೂರಕವಾದ ಉದ್ಯೋಗ ಹುಡುಕಿ ಮಾಡುತ್ತಿದ್ದಾರೆ. ಸ್ವಗ್ರಾಮದಲ್ಲೆ ದಿನವಿಡೀ ದುಡಿದು ಹಣ ಉಳಿತಾಯ ಮಾಡುವತ್ತಾ ಸಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಒಟ್ಟಾರೆ ಕೃಷಿಯಲ್ಲೆ ಬದುಕು ಕಾಣಬಹುದು ಎಂದು ಮನದಟ್ಟು ಮಾಡಿಕೊಂಡ ಗ್ರಾಮೀಣ ಯುವಕರು ನಗರದತ್ತ ಮರಳಿ ಹೋಗಬಾರದು ಎಂಬ ಪಾಠ ಕಲಿತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ