ಹುಳಿಯಾರು
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳಿಗೆ ಈಗ ಚಾಲನೆ ದೊರೆತಿದೆ. ಹುಳಿಯಾರು ಪಟ್ಟಣದ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿಗಳು ಭರದಿಂದ ಸಾಗುತ್ತಿವೆ.
ವಿಶಾಖಪಟ್ಟಣಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 234 ಕಾಮಗಾರಿಯು ಪಟ್ಟಣದಲ್ಲಿ ಅರ್ಧಕ್ಕೆ ನಿಂತಿದ್ದ ಪರಿಣಾಮ ಧೂಳು, ಕೊಳಚೆ ನೀರಿನ ಸಮಸ್ಯೆಯಿಂದ ಪ್ರಯಾಣಿಕರು ಹೈರಾಣಾಗಿದ್ದರು. ಬಹಳ ಕಿರಿದಾಗಿದ್ದ ರಸ್ತೆಯಲ್ಲಿ ಎದುರಾದ ವಾಹನಗಳಿಗೆ ಜಾಗ ಕೊಡಲು ಸಾಧ್ಯವಾಗದೆ ಬಹಳಷ್ಟು ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತಿತ್ತು. ಲಾಕ್ ಡೌನ್ ತೆರವಿನ ನಂತರದ ದಿನದಲ್ಲಿ ಈ ಕಾಮಗಾರಿ ಭರದಿಂದ ಸಾಗಿದ್ದು, ಪಟ್ಟಣದ ನಿವಾಸಿಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಇದರ ಜೊತೆಗೆ ಪಟ್ಟಣದ ಮುಖ್ಯ ರಸ್ತೆಗಳಾದ ರಾಜ್ ಕುಮಾರ್ ರಸ್ತೆ ಹಾಗೂ ಪೇಟೆ ಬೀದಿ ರಸ್ತೆಗಳ ಸಿಸಿ ರಸ್ತೆ ಕಾಮಗಾರಿಯೂ ಆರಂಭವಾಗಿದೆ. ಈ ರಸ್ತೆಗಳಿಗೆ ಲಾಕ್‍ಡೌನ್ ಘೋಷಣೆಯ ಕೆಲ ದಿನಗಳ ಹಿಂದಷ್ಟೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇನ್ನೇನು ಕಾಮಗಾರಿ ಆರಂಭವಾಗಬೇಕು ಅನ್ನುವಷ್ಟರಲ್ಲಿ ಲಾಕ್‍ಡೌನ್‍ನಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ತೀವ್ರ ನಿರಾಸೆ ಮೂಡಿಸಿತ್ತು. ಈಗ ಈ ಎರಡೂ ರಸ್ತೆ ಕಾಮಗಾರಿಯ ಜೊತೆಗೆ ವಾಸವಿ ಶಾಲೆ ರಸ್ತೆಯ ಕಾಮಗಾರಿ ಆರಂಭವಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಹರ್ಷ ತಂದಿದೆ.
ಹುಳಿಯಾರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 150 ಎ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಕಾಮಗಾರಿಗೆ ಮರಗಳ ತೆರವು ಕಾರ್ಯ ನಡೆಯುತ್ತಿದೆ. ಅಣೆಕಟ್ಟೆ ರಸ್ತೆಯ ಕಾಮಗಾರಿಯೂ ಸಹ ಆರಂಭವಾಗಿದೆ. ಬಾಣವಾರ ರಸ್ತೆಯ ಅಗಲೀಕರಣವೂ ಸಹ ಭರದಿಂದ ಸಾಗಿದ್ದು, ಕೊರಟಗೆರೆಯ ಬಳಿ ಡಾಂಬರೀಕರಣ ಮಾಡಲಾಗುತ್ತಿದೆ. ಒಟ್ಟಾರೆ ಲಾಕ್‍ಡೌನ್ ನಿಂದ ಸ್ಥಗಿತಗೊಂಡಿದ್ದ ರಸ್ತೆ ಕಾಮಗಾರಿಗಳೆಲ್ಲವೂ ಪುನಃ ಆರಂಭಗೊಂಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








