ಹುಳಿಯಾರು :
ಜಿಲ್ಲೆಯಲ್ಲೇ ಸೀಲ್‍ಡೌನ್ ಆಗಿರುವ ಏಕೈಕ ಪ್ರದೇಶವಾದ ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಇಲ್ಲಿನ ನಿವಾಸಿಗಳ ಕಷ್ಟ ಕೇಳೋರಿಲ್ಲದೆ ಜನರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.
ಹೌದು ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ದಂಡು ಸಿಂಗಾಪುರ ಗ್ರಾಮಕ್ಕೆ ಭೇಟಿ ನೀಡಿ 14 ದಿನಗಳ ಕಾಲ ಸೀಲ್‍ಡೌನ್ ಮಾಡಿ ನಿರ್ಭಂಧಿತ ವಲಯವೆಂದು ಘೋಷಿಸಿದರು. ಪರಿಣಾಮ ಸೋಂಕು ಇತರರಿಗೆ ಹರಡದಿರಲಿ ಎಂಬ ಉದ್ದೇಶದಿಂದ ಸೋಂಕಿತ ಮನೆಗಳವರು ಹೊರ ಬರದಂತೆ ಹಾಗೂ ಉಳಿದ ಪ್ರದೇಶದವರು ನಿರ್ಭಂಧಿತ ವಲಯದೊಳಗೆ ಪ್ರವೇಶಿಸದಂತೆ ಗ್ರಾಮದ ಎಲ್ಲಾ ದಿಕ್ಕಿಗೂ ಕಾವಲು ಹಾಕಲಾಯಿತು.
ಹಾಗಾಗಿ ಊರಿನ ಜನ ಮನೆಯೊಳಗೆ ಸೇರಿಕೊಂಡರು. ಗ್ರಾಮಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ಅಂಗಡಿಗಳೂ ಬಾಗಿಲು ಹಾಕಿದವು. ಸೊಪ್ಪು, ತರಕಾರಿ ಮಾರಾಟಕ್ಕೆ ಬರುತ್ತಿದ್ದವರೂ ಬಾರದಾದರು. ಮುಂಜಾಗೃತಿ ಇಲ್ಲದೇ ಅಗತ್ಯ ತಯಾರಿಗೆ ಕಾಲವಕಾಶ ನೀಡದೆ ಧಿಡೀರ್ ಸೀಲ್‍ಡೌನ್ ಮಾಡಿದ್ದರಿಂದ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ದಿನಸಿ ದಿನೇ ದಿನೇ ಖಾಲಿಯಾಗುತ್ತಿದೆ. ನಿತ್ಯದ ಸಾಂಬಾರ್‍ಗೆ ಅಗತ್ಯವಾದ ಸೊಪ್ಪು, ತರಕಾರಿ ಇಲ್ಲದಾಗಿದೆ. ಮನೆಯಿಂದ ಹೊರ ಬಂದರೆ ಕೊರೊನಾ ಭಯದ ಜೊತೆಗೆ ಪೊಲೀಸರ ಕಾಟ. ಹಾಗಾಗಿ ಮನೆಯೊಳಗೆ ಸಂಕಷ್ಟದ ಜೀವನ ನಡೆಸುವಂತಾಗಿದೆ.
ಇನ್ನು ಕೊರೊನಾ ಸೋಂಕು ತಗುಲಿ ಕುಟುಂಬದ ಮುಖ್ಯಸ್ಥರೆ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿರುವವರ ಮನೆಯ ಸ್ಥಿತಿಯಂತೂ ಹೇಳತೀರದಾಗಿದೆ. ಸೀಲ್‍ಡೌನ್ ಆದ ಪ್ರದೇಶದ ವಾಸಿಗಳಿಗೆ ಎಲ್ಲ ಬಗೆಯ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಿನ ನಿವಾಸಿಗಳ ಬೇಕು, ಬೇಡಗಳ ಬಗ್ಗೆ ಗಮನಹರಿಸಬೇಕು. ಅಗತ್ಯ ವಸ್ತುಗಳನ್ನು ತಂದುಕೊಡಬೇಕು. ಆದರೆ, ಸಿಂಗಾಪುರದ ಸೀಲ್‍ಡೌನ್ ಪ್ರದೇಶಗಳಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಸೀಲ್‍ಡೌನ್ ಮಾಡಿ ಹೋದ ಸಿಬ್ಬಂದಿ ಅತ್ತ ತಿರುಗಿಯೂ ನೋಡಿಲ್ಲ. ಗ್ರಾಮದ ಜನರ ಅಗತ್ಯತೆಗಳನ್ನು ಕೇಳೋರೆ ಇಲ್ಲ ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ವ್ಯಾಪಕವಾಗಿದೆ.
ಗ್ರಾಮ ಪಂಚಾಯ್ತಿಯಿಂದ ನಿತ್ಯ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು ಬಿಟ್ಟರೆ ಇತರೆ ಇಲಾಖೆಗಳಿಂದ ಯಾವುದೇ ಸ್ಪಂದನೆ ಇಲ್ಲದಾಗಿದೆ. ದಿನಸಿಕಿಟ್ ಕೊಡುವಂತೆ ಗ್ರಾಪಂಗೆ ಮನವಿ ಮಾಡಿದರೂ ಆರ್ಥಿಕ ಸಮಸ್ಯೆ ಮುಂದಿಟ್ಟು ಕೆಲ ಮನೆಗಳಿಗೆ ಮಾತ್ರ ಕೊಡುತ್ತೇವೆ ಎನ್ನುತ್ತಾರೆ. ಊರಿನ ಯುವಕರು ಇಂತಿಷ್ಟು ಹಣ ಸಂಗ್ರಹಿಸಿ ಗ್ರಾಪಂನೊಂದಿಗೆ ಕೈ ಜೋಡಿಸಲು ಮುಂದಾಗಿದ್ದರೂ ಎಲ್ಲಾ ಮನೆಗಳಿಗೂ ಕೊಡಲು ಸಾಧ್ಯವಾಗುತ್ತಿಲ್ಲ. ಇನ್ನೂ ತರಕಾರಿ, ಸೊಪ್ಪು ಸಹ ಕೊಡುವವರಿಲ್ಲ. ಇನ್ನಾದರೂ ಜಿಲ್ಲಾಡಳಿತ ಸೀಲ್‍ಡೌನ್ ಪ್ರದೇಶಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದೇ ಕಾದು ನೋಡಬೇಕಿದೆ.
” ಸಿಂಗಾಪುರದಲ್ಲಿ ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಆದರೆ, ಆಶಾ ಕಾರ್ಯಕರ್ತೆಯರು ಬಂದು ಆರೋಗ್ಯ ವಿಚಾರಿಸುವುದನ್ನು ಹೊರತುಪಡಿಸಿದರೆ ಆ ಪ್ರದೇಶದ ಮನೆಗಳಿಗೆ ಬೇಕಾದ ವಸ್ತುಗಳನ್ನು ತಂದುಕೊಡುವವರೇ ಇಲ್ಲದಂತಾಗಿದೆ. ನಿತ್ಯ ಕೋವಿಡ್ ಪರೀಕ್ಷಿಸಿ ಪಾಸಿಟಿವ್ ಬಂದವರನ್ನು ಕೋವಿಡ್ ಸೆಂಟರ್‍ಗೆ ದಾಖಲಾಗಿಸುತ್ತಾರೆ ವಿನಃ ಸೋಂಕಿತರ ಮನೆಯಲ್ಲಿ ಉಳಿದವರ ಪಾಡೇನು ಎಂದು ಯಾರೊಬ್ಬರೂ ಕೇಳುತ್ತಿಲ್ಲ”
-ದೇವಿಪ್ರಸಾದ್, ನಿವಾಸಿ, ಸಿಂಗಾಪುರ.
” ಜಿಲ್ಲಾಡಳಿತವೇ ಗ್ರಾಮಕ್ಕೆ ಬಂದು ಊರಿನ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಯಾರೂ ಹೊರ ಬಾರಬಾರದು ಎಂಬ ಆಜ್ಞೆಯನ್ನು ಅಧಿಕಾರಿಗಳು ಹೊರಡಿಸಿ ಹೋಗಿದ್ದಾರೆ. ಇದಾಗಿ ಮೂರ್ನಾಲ್ಕು ದಿನ ಕಳೆದಿದ್ದು, ಯಾರೊಬ್ಬರೂ ಇತ್ತ ತಿರುಗಿ ನೋಡಿಲ್ಲ. ನಿವಾಸಿಗಳ ಕಷ್ಟ, ಸುಖ ವಿಚಾರಿಸಿಲ್ಲ ಸೌಜನ್ಯಕ್ಕೂ ಒಂದು ಮಾಸ್ಕ್ ಸಹ ಕೊಟ್ಟಿಲ್ಲ. ಜನಸಂಪರ್ಕ ಇರುವ ಕೆಲವರು ಸ್ನೇಹಿತರಿಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಆದರೆ ಜನಸಂಪರ್ಕ ಇಲ್ಲದ ಬಡವರ ಪಾಡು ದೇವರಿಗೆ ಮುಟ್ಟಿದೆ”
-ಗಂಗಣ್ಣ, ನಿವಾಸಿ, ಸಿಂಗಾಪುರ
“ಊರಿನ ಗ್ರಾಮಸ್ಥರು 100 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿಕಿಟ್ ಕೊಡಿ ಎಂದು ಕೇಳುತ್ತಿದ್ದಾರೆ. ನಮ್ಮ ಪಂಚಾಯ್ತಿಯಲ್ಲಿ ಅನುದಾನದ ಕೊರತೆಯಿದೆ. ಹಾಗಾಗಿ ಇಪ್ಪತ್ತೈದು ಕುಟುಂಬಗಳಿಗೆ ಮಾತ್ರ ಕೊಡುತ್ತೇವೆ. ಅತೀ ಬಡವರ ಪಟ್ಟಿ ಮಾಡಿ ಎಂದು ಅಂಗನವಾಡಿ ಕಾರ್ಯಕರ್ತೆಗೆ ತಿಳಿಸಿದ್ದೇನೆ. ಬಡವರ ಸಂಖ್ಯೆಯೂ ಇಪ್ಪತ್ತೈದಕ್ಕೂ ಹೆಚ್ಚಾದರೆ ತಹಸೀಲ್ದಾರ್ ಅವರ ಗಮನಕ್ಕೆ ತರುತ್ತೇವೆ. ಊರಿನವರೂ ಸಹ ಹಣ ಸಂಗ್ರಹ ಮಾಡಿ ದಿನಸಿಕಿಟ್ ಕೊಡುತ್ತೇವೆ ಎನ್ನುತ್ತಿದ್ದಾರೆ. ಅವರ ಸಹಕಾರವನ್ನು ಸಹ ಪಡೆದು ಶೀಘ್ರ ನೆರವಿಗೆ ಮುಂದಾಗಲಾಗುವುದು.”
-ಗಂಗಾಧರಪ್ಪ, ಪಿಡಿಓ, ಯಳನಾಡು ಗ್ರಾಪಂ
ಎಚ್.ಬಿ.ಕಿರಣ್ ಕುಮಾರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ