ತುಮಕೂರು
ನಿರಂತರವಾಗಿ ತೈಲ ಬೆಲೆ ಹೆಚ್ಚಳವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ನಿಂದ ಸೋಮವಾರ ಪಕ್ಷದ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಕೋರೋನ ಸಂಕಷ್ಟದಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿರುವಾಗ ಸರಕಾರ ನಿರಂತರವಾಗಿ ತೈಲ ಬೆಲೆಗಳ ಹೆಚ್ಚಳ ಮಾಡುವ ಮೂಲಕ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದ ಅವರು,ಸರಕಾರ ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಕಳೆದ ಒಂದು ತಿಂಗಳಿಂದ ಕಚ್ಚಾ ತೈಲ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಬ್ಯಾರಲ್ಗೆ 40 ಡಾಲರ್ ಇದೆ.ಆದರೆ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಕಳೆದ 14 ದಿನಗಳಲ್ಲಿ 6-10 ರೂಗಳಿಗೆ ಹೆಚ್ಚಳವಾಗಿದೆ. ಇದರ ವಿರುದ್ದ ಪ್ರತಿಭಟನೆ ನಡೆಸಬೇಕು ಎಂದು ಅವಕಾಶ ಕೇಳಿದರೂ ಸರಕಾರಗಳು ಅನುಮತಿ ನೀಡದೆ,ಪ್ರತಿರೋಧದ ದ್ವನಿಗಳನ್ನು ಅಡಗಿಸುವ ಕೆಲಸ ಮಾಡುತ್ತಿವೆ.ನಮ್ಮ ಈ ಹೋರಾಟದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒಂದು ಸಂದೇಶ ರವಾನೆಯಾಗಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಮುರುಳೀಧರ ಹಾಲಪ್ಪ ಮಾತನಾಡಿ, 2012ರಲ್ಲಿ ಅಂದಿನ ಮನಮೋಹನ್ಸಿಂಗ್ ಸರಕಾರ ತೈಲ ಬೆಲೆಯನ್ನು 12ಪೈಸೆಗಳಷ್ಟು ಹೆಚ್ಚಳ ಮಾಡಿದ್ದನ್ನು ಖಂಡಿಸಿ, ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರಮೋದಿ 24 ಗಂಟೆಗಳ ಕಾಲ ಗುಜರಾತ್ ಬಂದ್ ನಡೆಸಿ, ಪ್ರಬಲವಾಗಿ ವಿರೋಧಿಸಿದ್ದರು.ಕಳೆದ 14 ದಿನಗಳಲ್ಲಿಒ ತೈಲ ಬೆಲೆ ಶೇ10-12ರಷ್ಟು ಹೆಚ್ಚಳವಾದರೂ ಜನರು ವಿರೋಧಿಸುತ್ತಿಸುತ್ತಿಲ್ಲ.ಕಳೆದ 2014 ರಿಂದ ಇಲ್ಲಿಯವರೆಗೂ ತೈಲಬೆಲೆಗಳ ಮೇಲೆ ವಿಧಿಸುವ ಸೇಸ್ನಿಂದಲೇ 17.80 ಲಕ್ಷ ಕೋಟಿ ರೂಗಳನ್ನು ಕೇಂದ್ರ ಸರಕಾರ ಸಂಗ್ರಹಿಸಿದೆ.ಕಚ್ಚಾತೈಲದ ಬೆಲೆ ಕಡಿಮೆಯಾದರೂ ಅದರ ಲಾಭ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ.ಇದು ಜನಸಾಮಾನ್ಯರಿಗೆ ತಲುಪಬೇಕು ಎಂದು ಆಗ್ರಹಿಸಿದರು.
ಜಿ.ಪಂ.ಸದಸ್ಯ ಹಾಗೂ ಡಿಸಿಸಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ನಿರಂತರವಾಗಿ ತೈಲಬೆಲೆ ಹೆಚ್ಚಳವಾದರೂ ಜನಸಾಮಾನ್ಯರಿಗೆ ಅದು ತಿಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರು ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ದಿಟ್ಟವಾಗಿ ಎದುರಿಸದಿದ್ದರೆ ಬಡವರಿಗೆ ಉಳಿಗಾಲವಿಲ್ಲ.ಬಡವರು, ಸ್ತ್ರೀಸಾಮಾನ್ಯರ ಪರವಾಗಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಕೇಂದ್ರದ ಅನ್ಯಾಯ ಜನಸಾಮಾನ್ಯರಿಗೆ ತಿಳಿಯಬೇಕೆಂದರೆ, ಅದರ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡಬೇಕು ಎಂದರು.
ನಗರಪಾಲಿಕೆ ಮೇಯರ್ ಫರೀಧಾ ಬೇಗಂ ಮಾತನಾಡಿ, ದೇಶವೇ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಇರುವಂತಹ ಸಂದರ್ಭದಲ್ಲಿ ನಿರಂತರವಾಗಿ ತೈಲ ಬೆಲೆಗಳ ಹೆಚ್ಚಳ ಸಮಂಜಸವಲ್ಲ. ಇದನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಅವರಿಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡುವ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧಪಕ್ಷಗಳು ಮಾಡಬೇಕಿದೆ ಎಂದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಆರ್.ನಾರಾಯಣ್, ಡಿ.ಟಿ.ವೆಂಕಟೇಶ್, ನರಸೀಯಪ್ಪ, ಪಾಲಿಕೆ ಸದಸ್ಯರಾದ ಸಯಯದ್ ನೈಯಾಜ್, ಟಿ.ಎಂ.ಮಹೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾರುದ್ರೇಶ್, ಮುಖಂಡರಾದ ಟಿ.ಎಸ್.ನಿರಂಜನ್, ಆಟೋರಾಜು, ಗೀತಮ್ಮ, ನಾಗಮಣಿ, ಮುಬೀನಾ,ಮಹಬೂಬ್ ಪಾಷ, ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








