ತುಮಕೂರು:
ಜಿಟಿ ಜಿಟಿ ಮಳೆಗೆ ರೈತರ ಬದುಕು ಹೈರಾಣು
ಅತಿವೃಷ್ಟಿ ಮತ್ತು ಅನಾವೃಷ್ಟಿಯ ನಡುವೆ ರೈತ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಒಂದಷ್ಟು ವರ್ಷಗಳ ಕಾಲ ಮಳೆ ಇಲ್ಲದೆ ರೈತ ಕಂಗಾಲಾಗಿ ಹೋದ. ಇತ್ತೀಚಿನ ವರ್ಷಗಳಲ್ಲಿ ಮಳೆಯಾಗುತ್ತಿದೆ. ಆದರೆ ಮಳೆಗೆ ತಕ್ಕ ಬೆಳೆ ಸಿಗುತ್ತಿಲ್ಲ. ಸಕಾಲಕ್ಕೆ ಮಳೆಯಾಗದೆ ಫಸಲು ಕೊಯ್ಲು ಮಾಡುವ ಅಥವಾ ಕಾಯಿ ಹಿಡಿಯುವ ಹಂತದಲ್ಲಿ ಮಳೆಯಾಗಿ ರೈತನಿಗೆ ನಿರೀಕ್ಷಿತ ಫಲ ಸಿಗದ ಸಂದರ್ಭಗಳೇ ಹೆಚ್ಚುತ್ತಿವೆ. ಈ ವರ್ಷವೂ ಅದೇ ಆಗಿದೆ. ಮಳೆ ಬಂದರೂ ಬೆಳೆ ಕೈ ಹಿಡಿಯದ ಪರಿಸ್ಥಿತಿಯಲ್ಲಿ ರೈತ ಇದ್ದಾನೆ.
ವಾರದಿಂದಲೂ ಮೋಡ ಮುಸುಕಿದ ವಾತಾವರಣ, ಜಿಟಿ ಜಿಟಿ ಮಳೆಯಿಂದಾಗಿ ರೈತರ ಬದುಕು ಹೈರಾಣಾಗಿದೆ. ಕೈಗೆ ಬಂದ ತುತ್ತನ್ನು ಬಾಯಿಗೆ ಇಟ್ಟುಕೊಳ್ಳಲಾಗದಂತಹ ಸ್ಥಿತಿಯಲ್ಲಿ ರೈತರು ಒದ್ದಾಡುತ್ತಿದ್ದಾರೆ. ಒಂದು ಕಡೆ ಮಳೆ ಬೀಳುತ್ತಿರುವುದರಿಂದ ಶೇಂಗಾ, ರಾಗಿ, ಮುಸುಕಿನ ಜೋಳ ಮೊಳಕೆಯೊಡಲಾರಂಭಿಸಿವೆ. ಕಟಾವು ಮಾಡೋಣವೆಂದರೆ ಮಳೆಯ ಕಾಟ, ಕಿತ್ತು ಎಲ್ಲಿ ಹಾಕಬೇಕು? ಬಿಡಿಸುವ ಬಗೆಯಾದರೂ ಹೇಗೆ? ಹಾಗೊಮ್ಮೆ ಬಿಡಿಸಿ ಹೊಣಗಿಸೋಣವೆಂದರೆ ಬಿಸಿಲೇ ಇಲ್ಲ ಹೀಗಾದರೆ ಏನು ಮಾಡುವುದು ಎನ್ನುತ್ತಾರೆ ರೈತರು. ಕೆಲವು ಭಾಗಗಳಲ್ಲಿ ಮುಂಚಿತವಾಗಿಯೇ ರಾಗಿ ಕೊಯ್ಲು ಆರಂಭಿಸಿದ್ದರು. ಹಿಂದೆಯೇ ಮಳೆ ಪ್ರಾರಂಭವಾಗಿ ಹೊಲದಲ್ಲಿಯೇ ರಾಗಿ ಫಸಲು ಕೊಳೆಯುವಂತಾಗಿದೆ. ಸತತವಾಗಿ ಮಳೆ ಬಂದು ರಾಗಿ ಫಸಲು ನೆನೆದರೆ ಅಲ್ಲಿಯೇ ಮೊಳಕೆಯೊಡೆಯುವ ಅಪಾಯವಿದೆ. ಇದು ರೈತರಿಗೆ ಎದುರಾಗಿರುವ ಆತಂಕ.
ಮೊಳಕೆಯೊಡೆಯುತ್ತಿರುವ ಶೇಂಗಾ, ರಾಗಿ
ಕೆಲವು ಕಡೆಗಳಲ್ಲಿ ರೈತರು ಈಗಾಗಲೇ ಶೇಂಗಾ ಬಳ್ಳಿ ಕಿತ್ತು ಹರಡಿದ್ದಾರೆ. ಸೋನೆ ಮಳೆಯಲ್ಲಿ ಇದನ್ನು ಹೇಗೆ ರಕ್ಷಿಸಬೇಕೆಂಬುದು ತಿಳಿಯುತ್ತಿಲ್ಲ. ತೇವಾಂಶಕ್ಕೆ ಮೊಳಕೆ ಹೊಡೆದು ಹಾಳುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಅನೇಕ ಮಂದಿ ರೈತರು ತಾವು ಕಟಾವು ಮಾಡಿದ ಜೋಳ, ರಾಗಿಯನ್ನು ಹೊಲಗಳಲ್ಲಿಯೇ ಕೂಡಿ ಹಾಕಿ ಪ್ಲಾಸ್ಟಿಕ್ ಪೇಪರ್ ಇಲ್ಲವೆ ಟಾರ್‍ಪಾಲ್‍ಗಳನ್ನು ಹೊದಿಸಿದ್ದಾರೆ. ಮಳೆ ಹೀಗೆಯೇ ಸುರಿಯುತ್ತಿದ್ದರೆ ಬೂಸ್ಟ್ ಬಂದು ಹಾಳಾಗುತ್ತವೆ. ಬೂಸ್ಟ್ ಬಂದ ರಾಗಿ ಹಾಗೂ ಜೋಳವನ್ನು ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ರೈತಾಪಿ ವರ್ಗ.
ಸೊಗಸಾಗಿ ಬೆಳೆದಿದ್ದ ತೊಗರಿ, ಅವರೆ, ಅಲಸಂದೆ, ಹುರಳಿ ಇವುಗಳೆಲ್ಲವೂ ಮಳೆಗೆ ನೆಲ ಕಚ್ಚಿವೆ. ಇವುಗಳಿಗೆ ನೀರು ಹೆಚ್ಚಾಗಿರುವುದರಿಂದ ಬೆಳೆಯಲಾಗದೆ ಬೆಳೆ ಕುಂಠಿತವಾಗಿ, ಕಾಳು ಕಡ್ಡಿಗೂ ಕುತ್ತು ಬರುತ್ತದೆ. ಚಳಿಗಾಲದ ಆರಂಭದ ಈ ಸಮಯದಲ್ಲಿ ಇಬ್ಬನಿ ಸುರಿಯುವುದು ಸಾಮಾನ್ಯ. ಕೆಲವು ಕಾಳುಕಡ್ಡಿ ಬೆಳೆ ಈ ಇಬ್ಬನಿ ಮೂಲಕವೇ ಉತ್ತಮ ಇಳುವರಿ ಕೊಡುವುದುಂಟು. ಮಳೆ ಬಂದರೆ ಎಡವಟ್ಟು. ಕಾಯಿ ಫಸಲು ಸರಿಯಾಗಿ ಕಟ್ಟುವುದಿಲ್ಲ. ಈ ಎಲ್ಲಾ ಆತಂಕಗಳು ಈಗ ಶುರುವಾಗಿವೆ.
ಜಾನುವಾರುಗಳ ಪಾಡು ಹೇಳತೀರದು
ಇನ್ನು ದನ ಕರು, ಕುರಿ ಮೇಕೆಗಳನ್ನು ಹೇಗೆ ಮೇಯಿಸುವುದು? ಮೇವು ಕುಯ್ದು ಹಾಕೋಣವೆಂದರೆ ನೀರಿನ ಮೇವು ತಿನ್ನುವುದಿಲ್ಲ. ಹೀಗಾದರೆ ಇವುಗಳನ್ನು ಹೇಗೆ ಸಾಕಬೇಕೆಂಬ ಚಿಂತೆಯಲ್ಲಿ ಸಾಕಾಣಿಕೆದಾರರು ಒದ್ದಾಡುತ್ತಿದ್ದಾರೆ. ಕುರಿಗಾಯಿಗಳ ಪಾಡಂತೂ ಹೇಳತೀರದು. ಜಿಟಿ ಜಿಟಿ ಮಳೆಯಲ್ಲೇ ಕುರಿ, ಮೇಕೆಗಳನ್ನು ಕೊಡೆ ಇಲ್ಲವೆ ಪ್ಲಾಸ್ಟಿಕ್ ಪೇಪರ್ ಹೊದ್ದಿಸಿಕೊಂಡು ಕಾಡು ಮೇಡುಗಳಲ್ಲಿ ಮೇಯಿಸುತ್ತಿದ್ದಾರೆ. ಈ ರೀತಿ ಮಳೆ ಬಂದರೆ ಕುರಿಗಳಿಗೆ ನಾನಾ ತರಹದ ರೋಗಗಳು ಹರಡುತ್ತವೆ. ವ್ಯವಸಾಯ ಬಿಟ್ಟು ಕುರಿ ಸಾಕಿ ಜೀವನ ಸಾಗಿಸೋಣವೆಂದರೆ ಈಗ ಅದಕ್ಕೂ ಕುತ್ತು ಬಂದಿದೆ ಎನ್ನುತ್ತಾರೆ ಕುರಿಗಾಹಿಗಳು.
ಅಡಕೆ ಬೆಳೆಗಾರರ ಸಂಕಷ್ಟ
ಇನ್ನು ತೋಟಗಾರಿಕೆ ಬೆಳೆಯಾದ ಅಡಿಕೆ ಬೆಳೆಗಾರರಂತೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಕೆಲವು ರೈತರು ಅಡಿಕೆ ಕಿತ್ತು ಅವುಗಳನ್ನು ಸುಲಿಸಲಾಗದೆ ನೂರಾರು ಮೂಟೆ ಅಡಕೆಯನ್ನು ಮನೆಯ ಮುಂದೆಯೇ ಸುರಿದುಕೊಂಡಿದ್ದಾರೆ. ಇತ್ತ ಅಡಕೆ ಸುಲಿಯುವುದಾಗಲಿ ಅಥವಾ ಬೇಯಿಸಲು ಬಹಳ ತೊಂದರೆ ಪಡುತ್ತಿದ್ದಾರೆ. ಬೇಯಿಸಿದ ಅಡಕೆಯನ್ನು ಒಣಗಿಸಲು ಬಿಸಿಲೇ ಇಲ್ಲ. ಈ ರೀತಿಯಾದರೆ ಮಾರುಕಟ್ಟೆಯಲ್ಲಿ ಇದರ ಬೆಲೆ ಕುಸಿದು ನಷ್ಟ ಅನುಭವಿಸಬೇಕಾಗುತ್ತದೆ. ಈ ಬಾರಿ ಅಡಕೆಗೆ ಒಳ್ಳೆಯ ದರವೇನೋ ಸಿಕ್ಕಿತ್ತು. ಆದರೆ ಜಿಟಿ ಜಟಿ ಮಳೆಯಿಂದ ಅಡಿಕೆ ಬೆಳೆಗಾರರು ಹಾಗೂ ಪಚ್ಚುಮಾರು ಮಾಡಿದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕೆಲವು ಬೆಳೆಯನ್ನು ಕಟಾವು ಮಾಡುವ ಕಾಲವಿದು. ಈ ಸಮಯದಲ್ಲಿ ಯಾವುದೇ ಬೆಳೆಯೂ ಹೆಚ್ಚಿನ ಮಳೆ ನಿರೀಕ್ಷಿಸುವುದಿಲ್ಲ. ಜಿಟಿಜಿಟಿ ಮಳೆಯಿಂದಾಗಿ ಫಸಲು ಹಾಳಾಗುವ ಸಂದರ್ಭಗಳೇ ಹೆಚ್ಚು. ಇಷ್ಟು ದಿನಗಳ ಕಾಲ ಕಷ್ಟಪಟ್ಟು ಬೆಳೆಸಿದ ಬೆಳೆ ಮಳೆಯಿಂದ ಹಾಳಾಗುವುದಲ್ಲ ಎಂಬ ಆತಂಕ ರೈತರದ್ದು. ಕೆಲವು ಕಡೆ ಶೇಂಗಾ ಕಿತ್ತಿದ್ದಾರೆ. ಇನ್ನು ಕೆಲವು ಕಡೆ ಹೊಲದಲ್ಲೇ ಶೇಂಗಾ ಇರುವುದರಿಂದ ಮೊಳಕೆಯೊಡೆಯಲಾರಂಭಿಸಿದೆ. ರಾಗಿ ತೆನೆ ಮಳೆಗೆ ಮಲಗಿರುವುದರಿಂದ ಹೊಲದಲ್ಲೇ ಮೊಳಕೆಯಾಗುತ್ತಿದೆ. ಕಟಾವು ಮಾಡೋಣವೆಂದರೆ ಈಗ ಮಳೆ ಅಡ್ಡಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕ ರೈತರದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
