ಕೊರಟಗೆರೆ
ಕಾರ್ತಿಕ ಮಾಸದ ಕಡೆ ಸೋಮವಾರದ ಅಂಗವಾಗಿ ತಾಲೂಕಿನ ಕೋಳಾಲ ಹೋಬಳಿಯ ಗೆದೆನಹಳ್ಳಿ ಗ್ರಾಮದ ಪುಣ್ಯಕ್ಷೇತ್ರ ಶ್ರೀ ಹೊಳೆನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರೆವೇರಿದವು.
ಮುಂಜಾನೆಯಿಂದಲೆ ಹೊಳೆನಂಜುಂಡೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನಡೆದವು.ಪ್ರತಿವರ್ಷ ಶಿವರಾತ್ರಿ ಹಾಗೂ ಕಡೆ ಕಾರ್ತಿಕ ಸೋಮವಾರದಂದು ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ಬೆಂಗಳೂರು, ತುಮಕೂರು, ಕೊರಟಗೆರೆ, ನೆಲಮಂಗಲ, ದೊಡ್ಡಬಳ್ಳಾಪುರ ಸೇರಿದಂತೆ ಮತ್ತಿತರ ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುತ್ತಾರೆ.
ಅದೇ ರೀತಿ ಇಂದೂ ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.ವೈದ್ಯಲೋಕಕ್ಕೆ ಸವಾಲಾದ ಕಣ್ಣು, ಕಿವಿ ಹಾಗೂ ಚರ್ಮ ಕಾಯಿಲೆಗೆ ಸಂಬಂಧಪಟ್ಟ ಕಾಯಿಲೆಗಳು ಗುಣಮುಖವಾದ ಸಾಕಷ್ಟು ಉದಾಹರಣೆಗಳಿವೆ. ಬಹುದಿನದ ಕಾಯಿಲೆಗಳು ಗುಣಮುಖವಾಗಲು ಭಕ್ತಿಯಿಂದ ಹರಕೆ ಕಟ್ಟಿ ನಿಯಮದಂತೆ ನಡೆದು ಕೊಂಡರೆ ಗುಣಮುಖವಾಗುತ್ತವೆ ಎಂಬುದು ಈ ಭಾಗದ ಭಕ್ತರ ನಂಬಿಕೆಯಾಗಿದೆ.
ಹೊಳೆಯ ದಂಡೆಯ ಸುಂದರ ಪರಿಸರದಲ್ಲಿ ಸ್ವಾಮಿಯು ನೆಲೆಸಿರುವುದರಿಂದ ಹೊಳೆನಂಜುಂಡೇಶ್ವರ ಎಂಬ ಹೆಸರು ಬಂದಿದೆ ಎಂದು ಇತಿಹಾಸವಿದೆ. ದಿನನಿತ್ಯ ಸ್ವಾಮಿಯವರಿಗೆ ಪೂಜಾ ಕಾರ್ಯಗಳು ನಡೆಯುತ್ತವೆ.ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಸ್ವಾಮಿಯವರಿಗೆ ವಿವಿಧ ಬಗೆಯ ಹೂ-ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಮತ್ತಿತರ ಮೂಲಭೂತ ಸೌಲ್ಯಭ್ಯವನ್ನು ದೇವಾಲಯದ ಅರ್ಚಕರು ಹಾಗೂ ಆಡಳಿತ ಮಂಡಳಿ ವತಿಯಿಂದ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಮುಂಜಾನೆಯಿಂದಲೂ ಕೂಡ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.ರಾಜ್ಯ ಹಾಗೂ ತಾಲೂಕಿನಾದ್ಯಂತ ಉತ್ತಮ ಮಳೆ ಬೆಳೆಯಾಗಿ ಜನ ಜಾನುವಾರುಗಳು ಸುಭಿಕ್ಷವಾಗಿರಲಿ, ಕಷ್ಟ ಕಾರ್ಪಣ್ಯಗಳು ದೂರವಾಗಿ ಸುಖ ಶಾಂತಿ ನೆಲೆಸಲಿ ಎಂದು ದೇವಾಲಯದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.