ವಾಷಿಂಗ್ಟನ್:
ಅನಿವಾಸಿ ಅಮೇರಿಕನ್ನರಿಗೆ ಅಲ್ಲಿನ ಸರ್ಕಾರ ಈ ವರ್ಷದ ಕೊನೆಯವರೆಗೆ ಗ್ರೀನ್ ಕಾರ್ಡ್ ವಿತರಣೆಯನ್ನು ರದ್ದುಪಡಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರಿಗೆ ಉದ್ಯೋಗ ಒದಗಿಸಲು ಇದು ಅನಿವಾರ್ಯವಾಗಿದೆ ಎಂದಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಅಧ್ಯಕ್ಷ ಟ್ರಂಪ್ ಅಮೆರಿಕದಲ್ಲಿ ಮುಂದಿನ 90 ದಿನಗಳ ಕಾಲ ಹೊರ ದೇಶಗಳ ನಾಗರಿಕರಿಗೆ ಹಸಿರು ಕಾರ್ಡು ನೀಡುವ ಯೋಜನೆಯನ್ನು ರದ್ದುಪಡಿಸುವ ಕಾರ್ಯಕಾರಿ ಆದೇಶವನ್ನು ತಂದಿದ್ದರು. ಕಳೆದ ಸೋಮವಾರ ಅದನ್ನು ಡಿಸೆಂಬರ್ 31ರವರೆಗೆ ಮುಂದೂಡುವುದಾಗಿ ಘೋಷಿಸಿದರು.
ಸದ್ಯ ನಮ್ಮ ದೇಶದ ನಾಗರಿಕರಿಗೆ ಉದ್ಯೋಗ ನೀಡಬೇಕು. ಕೋವಿಡ್-19ನ ಆರ್ಥಿಕ ಸಂಕಷ್ಟದಿಂದಾಗಿ ಲಕ್ಷಾಂತರ ಮಂದಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಹೊರ ದೇಶದವರಿಗೆ ಗ್ರೀನ್ ಕಾರ್ಡು ನೀಡುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅರಿಝೊನಾದ ಸಾನ್ ಲೂಯಿಸ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ ನವೆಂಬರ್ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಹುಮ್ಮಸ್ಸಿನಲ್ಲಿ ಟ್ರಂಪ್ ಇದ್ದಾರೆ. ಈ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು, ದೇಶದ ಸ್ಥಿತಿಗತಿ ಬಹಳ ಮುಖ್ಯವಾಗುತ್ತದೆ.