ನವದೆಹಲಿ:
ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಮತದಾರರು ಬಿಗಿ ಭದ್ರತೆಯ ನಡುವೆ ಮತವನ್ನು ಚಲಾಯಿಸುತ್ತಿದ್ದಾರೆ. ಒಟ್ಟು 70 ವಿಧಾನ ಸಭಾ ಕ್ಷೇತ್ರಗಳಿದ್ದು, ಈ ಬಾರಿ ಆಡಳಿತಾ ರೂಢ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ, ಕಾಂಗ್ರೆಸ್ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.56 ಕೋಟಿ ಮತದಾರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 13766 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹಿರಿಯ ನಾಗರಿಕರು ಮತ್ತು ಅಂಗವಿಕಲರು ಸುಲಭವಾಗಿ ತಮ್ಮ ಹಕ್ಕು ಚಲಾಯಿಸುವಂತೆ ಅನುಕೂಲ ಕಲ್ಪಿಸುವ ಉದ್ದೇಶದಿದ 733 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದೆಹಲಿಯಲ್ಲಿ 83,76,173 ಪುರುಷರು, 72,36,560 ಮಹಿಳೆಯರು ಮತ್ತು 1,267 ತೃತೀಯ ಲಿಂಗದ ಮತದಾರರು ಸೇರಿದಂತೆ 1,56,14,000 ನೋಂದಾಯಿತ ಮತದಾರರಿದ್ದಾರೆ. ಚುನಾವಣೆಗಾಗಿ ಸುಮಾರು 97,955 ಸಿಬ್ಬಂದಿ ಮತ್ತು 8,715 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಇಡೀ ದೆಹಲಿಯಾದ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 220 ಕಂಪನಿಗಳು, 19,000 ಗೃಹರಕ್ಷಕ ದಳಗಳು ಮತ್ತು 35,626 ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ವಿಶೇಷ ಎಂಬಂತೆ 70 ಮತಗಟ್ಟೆಗಳನ್ನು ಮಹಿಳೆಯರಿಗಾಗಿ ಸ್ಥಾಪಿಸಲಾಗಿದೆ. 70 ಅಂಗವಿಕಲರ ಮತಗಟ್ಟೆಯನ್ನು ಪ್ರಾರಂಭಿಸಿದ್ದು ಅಲ್ಲಿ ಅಂಗವಿಕಲರೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ 10 ವರ್ಷಗಳ ಬಳಿಕ ಅಧಿಕಾರದ ಗುರಿಯಲ್ಲಿ ಕಾಂಗ್ರೆಸ್ ಇದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕೇಜ್ರಿವಾಲ್ ಈ ಬಾರಿ ಗೆಲುವಿನ ನಿರೀಕ್ಷೆಯನ್ನು ವ್ಯಕ್ತ ಪಡಿಸಿದ್ದಾರೆ.ದೆಹಲಿ ಸಿಎಂ ಅತಿಶಿ ಜತೆ ಅರವಿಂದ ಕೇಜ್ರಿವಾಲ್ ಬಹಿರಂಗ ಪ್ರಚಾರದ ಕೊನೆಯ ದಿನ ಕೂಡಾ ಹಲವು ರ್‍ಯಾಲಿಗಳನ್ನು ನಡೆಸಿ ಶಕ್ತಿಪ್ರದರ್ಶನ ಮಾಡಿದ್ದರು.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೂಡ ಆಡಳಿತಾರೂಢ ಪಕ್ಷದ ಮೇಲೆ ಹಲವು ಆರೋಪವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಶನಿವಾರ ಫೆ. 8 ರಂದು ಫಲಿತಾಂಶ ಹೊರ ಬೀಳಲಿದ್ದು, ದೆಹಲಿ ಗದ್ದುಗೆ ಯಾರ ಪಾಲಾಗಲಿದೆ ಎಂದು ತಿಳಿದು ಬರಲಿದೆ.
