ತುಮಕೂರು
ಕೊರೊನಾ ಮಹಾಮಾರಿಯ ಭಯ, ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದು, ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.
ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 23,782 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13,523 ಮಕ್ಕಳು ಸೇರಿ ಒಟ್ಟು 37,306 ವಿದ್ಯಾರ್ಥಿಗಳು ಇಂದಿನಿಂದ ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ.ಜಿಲ್ಲೆಯ 144 ಪರೀಕ್ಷಾ ಕೇಂದ್ರಗಳಲ್ಲೂ ನೋಡಲ್ ಅಧಿಕಾರಿಗಳು ಪರೀಕ್ಷಾ ಮುಖ್ಯಸ್ಥರುಗಳು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದ ದೃಶ್ಯಗಳು ಕಂಡು ಬಂದವು.
ನಗರದ ಸಿದ್ದಗಂಗಾ ಮಠ, ಎಂಪ್ರೆಸ್ ಹಾಗೂ ಸೆಂಟ್‌ಮೇರಿಸ್ ಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯುತ್ತಿದ್ದನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಯಾವುದೇ ಗೊಂದಲ ಇಲ್ಲದೆ ಪರೀಕ್ಷೆ ಸುಸೂತ್ರವಾಗಿ ಆರಂಭವಾಗಿದ್ದು, ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಮಕ್ಕಳು, ಪೋಷಕರು ಸಹ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿದ್ದಾರೆ ಎಂದರು.
ಪರೀಕ್ಷೆ ಸುಸೂತ್ರವಾಗಿ ನಡೆಯಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಪರೀಕ್ಷೆಯ ಮೊದಲ ದಿನವಾದ ಇಂದು ಮಕ್ಕಳಿಗೆ ಪರೀಕ್ಷಾ ಕೊಠಡಿ ಪತ್ತೆಹಚ್ಚಲು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಗೊಂದಲ, ಆತಂಕ ಎದುರಾಗದೆ ಪರೀಕ್ಷೆ ಸುಲಲಿತವಾಗಿ ನಡೆದಿದೆ ಎಂದರು.ಪರೀಕ್ಷೆ ಮುಗಿದ ಬಳಿಕ ಗುಂಪು ಸೇರದೆ ಮನೆಗಳಿಗೆ ತೆರಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.