ತುಮಕೂರು
ಲಾಕ್ಡೌನ್ ಮುಗಿದ ನಂತರ ಕೌಟುಂಬಿಕ ದೌರ್ಜನ್ಯಗಳಿಂದ ನೊಂದ ಮಹಿಳೆಯರು ದೂರು ನೀಡಲು ಮುಂದಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ತೀವ್ರತರವಾಗಿದ್ದರೆ ಪೋಲೀಸ್ ಕೇಸು ದಾಖಲಿಸಬೇಕೆಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಕೃಷ್ಣಮೂರ್ತಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಸಾಂತ್ವನ ಕೇಂದ್ರಗಳ ತ್ರೈಮಾಸಿಕ ಸಭೆಯ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು ಸಣ್ಣ ಪುಟ್ಟ ಹಾಗೂ ಬಗೆಹರಿಯಬಹುದಾದ ಪ್ರಕರಣಗಳನ್ನು ಸಮಾಲೋಚನೆಯ ಮೂಲಕ ಇತ್ಯರ್ಥಪಡಿಸುವುದು ಉತ್ತಮ ಬೆಳವಣಿಗೆ. ಆದರೆ ಕೆಲವು ಗಂಭೀರ ಪ್ರಕರಣಗಳನ್ನು ರಾಜೀ ಮಾಡಿಸದೆ ಪೋಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾಂತ್ವನ ಕೇಂದ್ರದ ದೂರವಾಣಿ ಕರೆ ಹಾಗೂ ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಅಲ್ಲಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಮಾಹಿತಿ ನೀಡಬೇಕು. ಈಗ ಕೊರೋನಾ ಸಂಕಷ್ಟ ಇರುವ ಕಾರಣ ಸರಳವಾಗಿ ಮಾಸ್ಕ್ ಧರಿಸಿ ಪ್ರಚಾರ ಕೈಗೊಳ್ಳಬೇಕು. ನೊಂದವರು ಇಂತಹ ಕೇಂದ್ರಗಳಿಗೆ ಸಂಪರ್ಕಿಸಿ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಸಾಂತ್ವನ ಕೇಂದ್ರಗಳು ದೂರವಾಣಿ ನಂಬರ್ಗಳನ್ನು ನೀಡಿ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಸಮಾಲೋಚನೆ ನಡೆಸಿವೆ. ಇದಕ್ಕಾಗಿ 181 ನಂಬರ್ ನೀಡಲಾಗಿದ್ದು ಸಾಕಷ್ಟು ಕರೆಗಳು ಈ ನಂಬರ್ಗೆ ದಾಖಲಾಗಿವೆ ಎಂದರು. ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ಸಾಂತ್ವನ ಕೇಂದ್ರಗಳಿಗೆ ಒಟ್ಟು 568 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಕೆಲವು ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಉಳಿದವು ಸಮಾಲೋಚನೆಯ ಮೂಲಕ ಇತ್ಯರ್ಥಗೊಂಡಿವೆ. 52 ಪ್ರಕರಣಗಳು ಬಾಕಿ ಇವೆ ಎಂದು ವಿವರಿಸಿದರು.
ತುಮಕೂರಿನಲ್ಲಿ ನಿರ್ಲಕ್ಷಿತ ಮಹಿಳೆಯರಿಗಾಗಿ ಸ್ವಾಧಾರ್ ಕೇಂದ್ರವಿದೆ. ಆದರೆ ಎಲ್ಲಾ ಪ್ರಕರಣಗಳನ್ನು ಸ್ವಾಧಾರ್ ಕೇಂದ್ರಕ್ಕೆ ದಾಖಲಿಸಲು ಆಗುವುದಿಲ್ಲ. ಕೆಲವರಿಗೆ ಸಮಾಲೋಚನೆಯ ಅಗತ್ಯ ಇರುತ್ತದೆ. ಒಮ್ಮೊಮ್ಮೆ ಬುದ್ದಿಮಾಂದ್ಯತೆ ಇರುತ್ತದೆ. ಇಂತಹ ಪ್ರಕರಣಗಳ ಮಹಿಳೆಯರಿಗಾಗಿ ಒಂದು ಆಶ್ರಯ ಕೇಂದ್ರ ಅಗತ್ಯವಿದೆ ಎಂದು ಸಂಘ ಸಂಸ್ಥೆಗಳು ಮನವಿ ಮಾಡಿಕೊಂಡಿದ್ದು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗಿದೆ ಎಂದರು.
ಜಿಲ್ಲಾ ಅಪರಾಧ ದಳ ವಿಭಾಗದ ಇನ್ಸ್ಪೆಕ್ಟರ್ ಎನ್.ಎಸ್.ದೀಪಕ್ ಮಾತನಾಡಿ, ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ದೂರಿನ ಪ್ರಕರಣಗಳನ್ನು ಕೆಲವು ಕಡೆ ನ್ಯಾಯ ಸಿಗದೆ ಹೋದಾಗ ಪೋಲೀಸ್ ವರಿಷ್ಠಾಧಿಕಾರಿಗಳವರೆಗೂ ಗಮನಕ್ಕೆ ತರಬಹುದಾಗಿದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಶ್ರೀಧರ್, ಅಂಬಿಕಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ನಾರಾಯಣಪ್ಪ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಉಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ, ಸ್ವಾಧಾರ್ ಕೇಂದ್ರಗಳ ಸಮಾಲೋಚಕರು ಭಾಗವಹಿಸಿದ್ದರು.