ಬೆಂಗಳೂರು
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವಾರು ನಗರಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಟೌನ್ಶಿಪ್ಗಳ ನಿರ್ಮಾಣ ಆಗಬೇಕೆನ್ನುವ ಬಹುದಿನಗಳ ಬೇಡಿಕೆಯಿದ್ದು, ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುದು ಎಂದು ಭಾರಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇದುವರೆಗೂ ಕೇವಲ ಚರ್ಚೆಯ ಹಂತದಲ್ಲೇ ಇದ್ದ ಈ ವಿಷಯದ ಬಗ್ಗೆ ನಗರಾಭಿವೃದ್ದಿ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಲ್ಲದೆ, ರಾಜ್ಯದಲ್ಲಿ ಆಗಬೇಕಾದ ಕೈಗಾರಿಕಾ ಟೌನ್ ಶಿಪ್ಗಳ ಬಗ್ಗೆ ಶೀಘ್ರ ವರದಿ ತಯಾರಿಸುವಂತೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಈ ಪ್ರಸ್ತಾಪಕ್ಕೆ ನಗರಾಭಿವೃದ್ದಿ ಇಲಾಖೆಯ ಒಪ್ಪಿಗೆ ಪಡೆದುಕೊಂಡು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯದ ಸಣ್ಣ ಕೈಗಾರಿಕಾ ಸಂಸ್ಥೆ ಕಾಸಿಯಾ ಆಯೋಜಿಸಲಾಗಿದ್ದ ಎಮ್ಎಸ್ಎಂಇ ದಿನಾಚರಣೆಯ ಅಂಗವಾಗಿ ಕೋವಿಡ್ – 19 ಉದ್ಯೋಗ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕರೋನಾ ಸಂಕಷ್ಟದಿಂದ ನಮ್ಮ ಆರ್ಥಿಕ ವ್ಯವಸ್ಥೆಗೆ ಚೇತರಿಕೆ ನೀಡುವ ಚೈತನ್ಯ ಈ ಸಂಸ್ಥೆಗಳಿಗೆ ಇದೆ. ಈ ಕ್ಷೇತ್ರಕ್ಕೆ ಕೇಂದ್ರ ಸರಕಾರದಿಂದಲೂ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯವನ್ನು ನಂ 1 ಕೈಗಾರಿಕಾ ಸ್ನೇಹೀ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ರಾಜ್ಯವನ್ನು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಲು ಅಗತ್ಯವಿದ್ದ ಭೂಸುಧಾರಣೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗಿದ್ದ ಹಲವಾರು ನಿಯಮಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದರು.
ಕಳೆದ ಸಚಿವ ಸಂಪುಟದಲ್ಲಿ ಈಗಾಗಲೇ 2002 ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮಕ್ಕೆ ತಿದ್ದುಪಡಿ ತರಲು ಒಪ್ಪಿಗೆಯನ್ನು ಪಡೆಯಲಾಗಿದೆ. ಕೇವಲ ಕೈಗಾರಿಕಾ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆಯ ಕಾರ್ಯ ಪ್ರಾರಂಭಿಸಲು ಈ ಅಧಿನಿಯಮ ಅವಕಾಶ ಒದಗಿಸಲಿದೆ. ಮೂರು ವರ್ಷಗಳು ಅಥವಾ ವಾಣಿಜ್ಯ ಉತ್ಪಾದನೆ ಪ್ರಾರಂಭವಾಗುವ ಮುನ್ನ ಬೇರೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆಯಲು ಅವಕಾಶ ಇದರಲ್ಲಿ ದೊರೆಯಲಿದೆ. ಈ ತಿದ್ದುಪಡಿಯನ್ನು ಶೀಘ್ರದಲ್ಲೇ ಸುಗ್ರೀವಾಜ್ಞೇಯ ಮೂಲಕ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕೈಗಾರಿಕಾ ಟೌನ್ಶಿಪ್ ಗಳನ್ನು ನಿರ್ಮಾಣ ಮಾಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಇದಕ್ಕೆ ಅವಕಾಶ ನೀಡಿದಲ್ಲಿ ರಾಜ್ಯದಲ್ಲಿ ಒಳ್ಳೆಯ ಮಾಡೆಲ್ ನ ಟೌನ್ ಶಿಪ್ ಗಳೂ ಬರಲಿವೆ. ಈ ಹಿನ್ನೆಲೆಯಲಿ ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಯಾವ ಭಾಗಗಳಲ್ಲಿ ಟೌನ್ ಶಿಪ್ ಗಳ ನಿರ್ಮಾಣ ಮಾಡಬೇಕು. ಹಾಗೂ, ಅದರ ಭೌಗೋಳಿಕ ಮ್ಯಾಪ್ ನ್ನ ಹೊಂದಿರುವಂತಹ ಒಂದು ಕಾಂಪ್ಯಾಕ್ಟ್ ಪ್ರಸ್ತಾವನೆಯನ್ನು ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಈ ಪ್ರಸ್ತಾವನೆಗೆ ನಗರಾಭಿವೃದ್ದಿ ಇಲಾಖೆಯ ಒಪ್ಪಿಗೆ ಪಡೆದುಕೊಂಡು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಸಚಿವರ ಭರವಸೆ ನೀಡಿದರು.
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಡಿಯಲ್ಲಿ ಹಂಚಿಕೆ ಮಾಡಲಾಗುವ ಭೂಮಿಯ ದರದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಹೊಸ ವೈಜ್ಞಾನಿಕ ನೀತಿಯನ್ನು ತರುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ, ನೂತನ ಕೈಗಾರಿಕಾ ನೀತಿ ಸಿದ್ದವಾಗಿದ್ದು, ಆರ್ಥಿಕ ಇಲಾಖೆಯ ಅನುಮತಿಗಾಗಿ ಕಾಯತ್ತಿದ್ದೇವೆ. ಈ ಕಾಯ್ದೆಯಲ್ಲಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಸಿಯಾ ಅಧ್ಯಕ್ಷ ಆರ್ ರಾಜು, ಉಪಾಧ್ಯಕ್ಷರಾದ ಕೆ.ಬಿ. ಅರಸಪ್ಪ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ಸಂಘದ ಸದಸ್ಯರು ಭಾಗವಹಿಸಿದ್ದರು. ಕರ್ನಾಟಕ ಕೌಶಲ್ಯ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ವೆಬ್ನೀಯರ್ ಮೂಲಕ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








