ಮಳೆಗೆ ನೆಲಕ್ಕುರುಳಿದ ಬೇವಿನ ಮರ, 6 ಕಾರುಗಳು ಜಖಂ

ಚಿತ್ರದುರ್ಗ:

     ಬೃಹತ್ ಗಾತ್ರದ ಬೇವಿನ ಮರವೊಂದು ನೆಲಕ್ಕುರುಳಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆರು ಕಾರುಗಳು ಜಖಂ ಆದ ಘಟನೆ ಚಿತ್ರದುರ್ಗದಲ್ಲಿ ತಡರಾತ್ರಿ ನಡೆದಿದೆ.ನಗರದ ವಿಪಿ ಬಡಾವಣೆಯ ಎಸ್ ಆರ್ ಲೇಔಟ್ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿದ್ದ ಸುಮಾರು 60 ವರ್ಷಗಳಷ್ಟು ಹಳೆಯದಾದ ಬೃಹತ್ ಗಾತ್ರದ ಬೇವಿನ ಮರ ಶುಕ್ರವಾರ ರಾತ್ರಿ ಸುಮಾರು 12 : 30 ರ ಸಮಯದಲ್ಲಿ ನೆಲಕ್ಕುರುಳಿದೆ. ಇದರಿಂದಾಗಿ ನಾಗರಕಟ್ಟೆ ಮುಂದೆ ನಿಲ್ಲಿಸಿದ್ದ ಆರು ಕಾರುಗಳು ಮರ ಉರುಳಿ ಸಂಪೂರ್ಣ ಜಖಂ ಆಗಿವೆ.

    ಈ ಸಂದರ್ಭದಲ್ಲಿ ಆ ಪ್ರದೇಶದ ಸುತ್ತಮುತ್ತಲಿನವರು ದೇವಸ್ಥಾನದ ಆವರಣದಲ್ಲಿ ಕ್ರೇಟಾ, ಎರಡು ಸ್ವಿಫ್ಟ್, ಮಾರುತಿ ವ್ಯಾಗನಾರ್, ಸ್ಕೋಡಾ ಹಾಗೂ ಮಾರುತಿ ಆಲ್ಟೊ ಕಾರುಗಳನ್ನು ನಿಲ್ಲಿಸಿದ್ದರು. ಮರ ಬಿದ್ದ ರಭಸಕ್ಕೆ ಕಾರುಗಳು ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

    ನಗರದ ಐಶ್ವರ್ಯ ಫೋರ್ಟ್ ಹಿಂಭಾಗದ ಖಾಲಿ ಜಾಗದಲ್ಲಿ ಕಾರಿನ ಮಾಲೀಕರು ಕಾರನ್ನು ನಿತ್ಯ ನಿಲ್ಲಿಸುತ್ತಿದ್ದರು. ಎಂದಿನಂತೆ ಶುಕ್ರವಾರ ಕೂಡ ನಿಲ್ಲಿಸಿದ್ದಾರೆ. ಕಳೆದ ಎರಡು ದಿನಗಳಿಂದಲೂ ಧಾರಕಾರ ಮಳೆ ಸುರಿದಿದ್ದು ಇದರಿಂದಾಗಿ ಹಳೆ ಮರ ಮೊದಲೇ ಬೀಳುವ ಸ್ಥಿತಿಯಲ್ಲಿತ್ತು. ಮಳೆ ಸುರಿದ ಹಿನ್ನೆಲೆಯಲ್ಲಿ ಬುಡಸಮೇತ ಮರ ಬಿದ್ದ ಹಿನ್ನೆಲೆಯಲ್ಲಿ ಮೂರು ಕಾರುಗಳ ಮೇಲ್ಭಾಗ ಜಖಂ ಆಗಿದೆ. ಉಳಿದ ಕಾರಿನ ಮೇಲೆ ರಂಬೆಗಳು ಬಿದ್ದಿವೆ. ಇದನ್ನು ನೋಡಿದ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಚಿತ್ರದುರ್ಗದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ನಾಲ್ಕೈದು ಕೆರೆಗಳು ತುಂಬಿ ಹರಿದಿದ್ದು, ನಿನ್ನೆ ರಾತ್ರಿ ಜಿಲ್ಲೆಯ ಕೆಲವು ತಾಲ್ಲೂಕಿನಲ್ಲಿ ಮಳೆಯಾಗಿದೆ. ನಿನ್ನೆ ರಾತ್ರಿ ಸುರಿದ ಮುಂಗಾರು ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಜಿಲ್ಲೆಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗದಲ್ಲೂ ಸಣ್ಣ ಪುಟ್ಟ ಕೆರೆ ಕಟ್ಟೆಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದವು.ನಿನ್ನೆ ಮಧ್ಯಾಹ್ನದಿಂದಲೇ ಮಳೆ ಆರಂಭಗೊಂಡಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಸಜ್ಜಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap