ನವದೆಹಲಿ:
ಇಡೀ ದೇಶದಲ್ಲಿ ತನ್ನ ಶ್ರೀಮಂತಿಕೆ ಇಂದ ಕೇರಳದ ಖ್ಯಾತಿಯನ್ನು ಹೆಚ್ಚಿಸಿದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ವಿವಾದಕ್ಕೆ ಸುಪ್ರೀಂಕೋರ್ಟ್ ಕೊನೆಗೂ ತೆರೆ ಎಳೆದಿದೆ. ದೇವಸ್ಥಾನದ ಆಡಳಿತವನ್ನು ಟ್ರಾವಂಕೋರ್ನ ರಾಜವಂಶಸ್ಥರೇ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ. ಈ ವಿಷಯವಾಗಿ 2011ರ ಜನವರಿಯಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅದು ತಿರಸ್ಕರಿಸಿದೆ.
ಇದಕ್ಕೂ ಮುನ್ನ ದೇವಸ್ಥಾನದ ಆಡಳಿತ ಯಾರ ಕೈಯಲ್ಲಿ ಇರಬೇಕು ಎಂಬ ವಿವಾದದ ಬಗ್ಗೆ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್, ರಾಜವಂಶಸ್ಥರ ಟ್ರಸ್ಟ್ ನೇತೃತ್ವದ ದೇವಸ್ಥಾನದ ಆಡಳಿತವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟು ಆದೇಶಿಸಿತ್ತು.ಕೊನೆಗೂ ದೇವರು ಕಣ್ಣುಬಿಟ್ಟ. ಸುಪ್ರೀಂಕೋರ್ಟ್ನ ತೀರ್ಪನ್ನು ಸಂಪೂರ್ಣವಾಗಿ ಓದಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಟ್ರಾವಂಕೋರ್ನ ರಾಜವಂಶಸ್ಥೆ ಗೌರಿ ಲಕ್ಷ್ಮೀಭಾಯಿ ಹೇಳಿದ್ದಾರೆ.
ಕೊನೆಗೂ ವಿವಾದ ಕೊನೆಯಾಯಿತಲ್ಲ ಎಂಬ ಖುಷಿಯಲ್ಲಿ ಪದ್ಮನಾಭ ದೇಗುಲದ ಎದುರು ಜಮಾಯಿಸಿದ ಜನರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಕೆಲವರು ಆನಂದಬಾಷ್ಪ ಸುರಿಸಿದರು. ಕೇರಳ ಸರ್ಕಾರ ಕೂಡ ಸುಪ್ರೀಂಕೋರ್ಟ್ನ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದೆ.
ದೇವಸ್ಥಾನದ ದಾಸ್ತಾನುಗಾರದಲ್ಲಿರುವ ದೇವರಿಗೆ ಸಂಬಂಧಪಟ್ಟ ವಸ್ತುಗಳ ಲೆಕ್ಕ ಹಾಕುವಂತೆ ನ್ಯಾಯಾಲಯ 2011ರ ಮೇನಲ್ಲಿ ಆದೇಶಿಸಿತ್ತು. ಅದರಂತೆ ದೇಗುಲದ ಪ್ರಾಂಗಣದಲ್ಲಿದ್ದ 6 ದಾಸ್ತಾನುಗಾರರ ಪೈಕಿ 5 ದಾಸ್ತಾನುಗಾರವನ್ನು ತೆರೆದು ಪರಿಶೀಲಿಸಿದಾಗ ಐತಿಹಾಸಿಕವಾಗಿ ಭಾರಿ ಮೌಲ್ಯ ಹೊಂದಿರುವ 90 ಸಾವಿರ ಕೋಟಿ ರೂ.ಗೂ ಹೆಚ್ಚಿನ ಚಿನ್ನಾಭರಣಗಳು ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು. ಆರನೇ ದಾಸ್ತಾನುಗಾರವನ್ನು ತೆರೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಅದನ್ನು ಹಾಗೆಯೇ ಬಿಡಲಾಗಿದೆ. ಅಲ್ಲದೆ ಅದನ್ನು ತೆಗೆಯದಂತೆ ಸುಪ್ರೀಂಕೋರ್ಟ್ ಆದೇಶಿಸಿತು. ಇದಾದ ನಂತರದಲ್ಲಿ ಪದ್ಮನಾಭ ದೇವಾಲಯದ ಭಾರಿ ಪ್ರಖ್ಯಾತಿ ಪಡೆದುಕೊಂಡಿತ್ತು.
ರಾಜವಂಶಸ್ಥರು ನಿಯೋಜಿಸಿದ್ದ ಟ್ರಸ್ಟ್ 2014ರ ಏಪ್ರಿಲ್ವರೆಗೂ ದೇವಸ್ಥಾನದ ಆಡಳಿತದ ಜವಾಬ್ದಾರಿ ಹೊಂದಿತ್ತು. ಆದರೆ, ದೇವಸ್ಥಾನದ ಆಡಳಿತದಲ್ಲಿ ಅವ್ಯವಹಾರಗಳು ಆಗುತ್ತರುವ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸುಪ್ರೀಂಕೋರ್ಟ್ 2012ರಲ್ಲಿ ನೇಮಿಸಿದ್ದ ಆಮಿಕಸ್ ಕ್ಯೂರಿ ದೇವಸ್ಥಾನದ ಆಡಳಿತದಲ್ಲಿ ಭಾರಿ ಅವ್ಯವಹಾರಗಳು ನಡೆಯುತ್ತಿವೆ ಎಂಬುದನ್ನು ಆಧಾರ ಸಮೇತ ಬಹಿರಂಗಪಡಿಸಿದ್ದರು. ಆನಂತರದಲ್ಲಿ ದೇವಸ್ಥಾನದ ಆಡಳಿತವನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ನಾಲ್ವರು ಸದಸ್ಯರ ಸಮಿತಿಗೆ ಒಪ್ಪಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
