ನವದೆಹಲಿ :
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಗೆ ಚೀನಾ ಮೂಲದ ವಿವೊ ಮೊಬೈಲ್ ಪ್ರಾಯೋಜಕತ್ವ ಇರುವುದಿಲ್ಲವೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಖಚಿತಪಡಿಸಿದೆ.
ಭಾರತ ಚೀನಾ ನಡುವಿನ ಬಿಕ್ಕಟ್ಟಿನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ನ ಟೈಟಲ್ ಪ್ರಾಯೋಜತ್ವ ಹೊಂದಿದ್ದ ಚೀನಾ ಮೂಲದ ವಿವೋ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಬೇಕು ಎಂಬ ಕೂಗು ಸಾಕಷ್ಟು ಕೇಳಿ ಬಂದಿತ್ತು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಅಭಿಯಾನವೇ ನಡೆದಿತ್ತು.
2 ದಿನಗಳ ಹಿಂದಷ್ಟೇ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಚಿಂತನೆ ನಡೆಸಿರುವುದಾಗಿ ವಿವೊ ಹೇಳಿತ್ತು. ‘ಈ ಬಾರಿಯ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವವನ್ನು ತಡೆಹಿಡಿಯಲು ಬಿಸಿಸಿಐ ಮತ್ತು ವಿವೊ ಕಂಪೆನಿ ಪರಸ್ಪರ ಒಮ್ಮತಕ್ಕೆ ಬಂದಿವೆ’ ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2018 ರಿಂದ 2022ರವರೆಗೆ ವಿವೊ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು ₹ 2190 ಕೋಟಿಯ ಒಪ್ಪಂದ ಇದಾಗಿದೆ. ಪ್ರತಿವರ್ಷದ ಕಂತಿನಲ್ಲಿ ಕಂಪೆನಿಯು ಐಪಿಎಲ್‌ಗೆ ₹ 440 ಕೋಟಿ ನೀಡುತ್ತದೆ.
ಇದೀಗ ಈ ವರ್ಷದ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಹೊಸದಾಗಿ ಟೆಂಡರ್ ಕರೆಯಬೇಕಿದೆ. ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ನಡೆಯಲಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಯುಎಇಯಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಉದ್ದೇಶಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
