ಬೆಂಗಳೂರು
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರಧನ ಹೆಚ್ಚಿಸಿದೆ.ಮಳೆಯಿಂದಾಗಿ ಮನೆಯಲ್ಲಿನ ಬಟ್ಟೆ, ದಿನಬಳಕೆ, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿದ್ದಲ್ಲಿ ಕೇಂದ್ರದ ಮಾರ್ಗಸೂಚಿಯ ಜತೆಗೆ ರಾಜ್ಯ ಸರ್ಕಾರವೂ ಸಹ ಹೆಚ್ಚಿನ ಪರಿಹಾರ ನೀಡಲಿದೆ ಎಂದು ತಿಳಿಸಿದೆ.
ಶೇಕಡ 75 ಕ್ಕಿಂತ ಹೆಚ್ಚು ಹಾನಿಗೀಡಾದ ಮನೆಗಳಿಗೆ ಪರಿಷ್ಕೃತ ಮಾರ್ಗಸೂಚಿಯಂತೆ 5 ಲಕ್ಷ ರೂಪಾಯಿ, ಶೇಕಡ 25 ರಿಂದ 75 ರಷ್ಟು ಹಾನಿಗೀಡಾಗಿ, ವಾಸಿಸಲು ಯೋಗ್ಯವಿಲ್ಲದೆ ಪುನರ್ ನಿರ್ಮಾಣ ಮಾಡಲೇಬೇಕಾದ ಮನೆಗಳಿಗೂ ಸಹ 5 ಲಕ್ಷ ರೂಪಾಯಿ, ಶೇಕಡ 25 ರಿಂದ 75 ರಷ್ಟು ಹಾನಿಗೀಡಾಗಿ ದುರಸ್ತಿ ಮಾಡಲು ಸಾಧ್ಯವಿರುವಂತಹ ಮನೆಗಳಿಗೆ 3 ಲಕ್ಷ ರೂಪಾಯಿ, ಶೇಕಡ 15 ರಿಂದ 25 ರಷ್ಟು ಅಲ್ಪ-ಸ್ವಲ್ಪ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂಪಾಯಿ ನೆರವು ನೀಡುವುದಾಗಿ ಪ್ರಕಟಿಸಿದೆ.
ಇದಲ್ಲದೆ, ದಿನಬಳಕೆ ವಸ್ತುಗಳನ್ನು ಕಳೆದುಕೊಂಡವರಿಗೆ ತಕ್ಷಣಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿಯಿಂದ 10 ಸಾವಿರ ರೂಪಾಯಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ.ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಹೊಸ ಮನೆ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ