ಶಿವಮೊಗ್ಗ:
ಡಿಸೆಂಬರ್ 2024 ರೊಳಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಳ್ಳಲಿದೆ, ಇದರಿಂದ ಬೆಂಗಳೂರು-ಚೆನ್ನೈನಗರಗಳ ನಡುವಿನ ಪ್ರಯಾಣದ ಸಮಯ 2 ಗಂಟೆಗಳಿಗೆ ಇಳಿಯುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಸೇರಿದಂತೆ ಆರು ಜಿಲ್ಲೆಗಳ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಚತುಷ್ಪಥ ಎಕ್ಸ್‌ಪ್ರೆಸ್ ವೇ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ , ಆಂಧ್ರಪ್ರದೇಶದ ಮೂಲಕ ಮತ್ತು ತಮಿಳುನಾಡಿನಲ್ಲಿ 106 ಕಿ.ಮೀ. ಸಾಗುತ್ತದೆ.
ಈ ಹೊಸ ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದ ಎರಡು ಪ್ರಮುಖ ಐಟಿ ಹಬ್‌ಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಕೈಗಾರಿಕೆಗಳ ಅಭಿವೃದ್ಧಿಯನ್ನು ತೀವ್ರಗೊಳಿಸುತ್ತದೆ. ಅಲ್ಲದೆ, ಬೆಂಗಳೂರಿನಲ್ಲಿ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು, ನಗರದ ಸುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆಯನ್ನು ವರ್ಷಾಂತ್ಯದೊಳಗೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಕೇಂದ್ರವು 1,44,922 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಗಡ್ಕರಿ ಹೇಳಿದರು.
ಹಾಸನ-ಹಿರಿಯೂರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ 402 ಕೋಟಿ ರೂ.ನಲ್ಲಿ ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತಿದ್ದು, ಭೂಸ್ವಾಧೀನ ಹಾಗೂ ಅರಣ್ಯ ಭೂಮಿ ಸಮಸ್ಯೆಗಳ ನಿವಾರಣೆಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.