ಕೊಬ್ಬರಿಗೆ ರಾಜ್ಯದ ಸಹಾಯಧನ ಸೇರಿ 11,300 ರೂ. ಬೆಲೆ ನಿಗದಿ

ಹುಳಿಯಾರು

    ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಹಾಗೂ ಚಿಕ್ಕನಾಯಕನಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನ್ಯಾಫೆಡ್ ವತಿಯಿಂದ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 10,300 ರೂ. ಹಾಗೂ ರಾಜ್ಯ ಸರ್ಕಾರದ 1000 ರೂ. ಸಹಾಯ ಧನ ಸೇರಿ 11,300 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದ್ದಾರೆ.

    ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ನ್ಯಾಫೆಡ್ ಮುಖಾಂತರ ಆರಂಭಿಸಲಾಗಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ಕೆಲವು ತಿಂಗಳ ಹಿಂದೆ ಕೊಬ್ಬರಿ ಬೆಲೆ 8 ರಿಂದ 9 ಸಾವಿರ ರೂ. ಆಸುಪಾಸಿಗೆ ಬಂದು ಕೊಬ್ಬರಿ ಬೆಳೆಗಾರರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು.

    ಕೊಬ್ಬರಿ ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ನಾಫೆಡ್ ಕೇಂದ್ರ ಪ್ರಾರಂಭಿಸಿದರೂ ಸಹ ಹೆಚ್ಚಿನ ಬೆಲೆ ಬರುವುದಿಲ್ಲವೆಂಬ ಹಿನ್ನೆಲೆಯಲ್ಲಿ ಇದುವರೆಗೂ ಹೆಚ್ಚಿನ ಜನ ನೋಂದಣಿ ಮಾಡಿರಲಿಲ್ಲ. ಇದನ್ನು ಮನಗಂಡು ಕೊಬ್ಬರಿ ಬೆಳೆಗಾರರಿಗೆ 1 ಸಾವಿರ ರೂ. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರದಿಂದ ಕೊಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಇದೀಗ ರಾಜ್ಯ ಸರ್ಕಾರದ 1000 ರೂ. ಸೇರಿಕೊಂಡು 11,300 ರೂಪಾಯಿಗೆ ಖರೀದಿ ಮಾಡಲು ಮುಂದಾಗಿದ್ದೇವೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರ ಇಲ್ಲಿ ಸಿಗುವುದರಿಂದ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

    ರೈತರಿಂದ ಎಕರೆಗೆ 6 ಕ್ವಿಂಟಾಲ್‍ನಂತೆ ಗರಿಷ್ಠ 20 ಕ್ವಿಂಟಾಲ್ ವರೆಗೆ ಖರೀದಿಸಲಾಗುವುದು. ರೈತರು ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಆಧಾರ್, ಪಹಣಿ, ಬ್ಯಾಂಕ್ ಖಾತೆ ನೀಡುವುದರ ಮೂಲಕ ತಕ್ಷಣದಿಂದಲೇ ನೋಂದಣಿ ಮಾಡಿಕೊಳ್ಳಬೇಕೆಂದು ಹಾಗೂ ದಿನಾಂಕ ನಿಗದಿ ಪಡಿಸಿಕೊಂಡು ನೇರವಾಗಿ ಖರೀದಿ ಕೇಂದ್ರಕ್ಕೆ ಕೊಬ್ಬರಿ ತರುವಂತೆ ಸೂಚಿಸಿದರು.

     ಈ ತಿಂಗಳ 25 ರ ವರೆಗೆ ಕೊಬ್ಬರಿ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಈಗಾಗಲೇ 690 ರೈತರು ನೋಂದಣಿ ಮಾಡಿಸಿದ್ದಾರೆ. ಕೊಬ್ಬರಿ ಬೆಳೆಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಲ್ಲಿ ಕಡೆ ಕ್ಷಣದಲ್ಲಿ ತರಾತುರಿಗೆ ಅವಕಾಶವಿಲ್ಲದಂತೆ ಕೊಬ್ಬರಿ ಖರೀದಿ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.

ಹಣದ ಬಗ್ಗೆ ಆತಂಕ ಬೇಡ:

    ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿ ಮಾಡಿದ ಕೊಬ್ಬರಿಗೆ ಸರ್ಕಾರದ ಜವಾಬ್ದಾರಿಯಾಗಿದ್ದು ಹಣ ವಿಳಂಬಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಲಾಗುವುದು. ಎಪಿಎಂಸಿಯಲ್ಲಿ 300 ರಿಂದ 400 ಕೋಟಿ ರೂ. ಆವರ್ತನಿಧಿ ಇದ್ದು, ಇದರಲ್ಲಿ ಸದ್ಯಕ್ಕೆ ರೈತರಿಗೆ ಪಾವತಿ ಮಾಡಿ ನಂತರ ಕೇಂದ್ರದಿಂದ ಹಣ ತರಿಸಿಕೊಳ್ಳಲಾಗುವುದು. ಹೀಗಾಗಿ ಕನಿಷ್ಠ ಬೆಂಬಲ ಬೆಲೆಯಲ್ಲಿ ನಾವು ಕೊಳ್ಳುತ್ತಿರುವ ಕೊಬ್ಬರಿಗೆ ಹಣ ಬರುವುದೋ ಇಲ್ಲವೋ ಎಂಬ ಅನುಮಾನ ಯಾರಿಗೂ ಬೇಡ. ನೇರವಾಗಿ ಆರ್‍ಟಿಜಿಎಸ್ ಮೂಲಕವೇ ರೈತರ ಖಾತೆಗೆ ಹಣ ಜಮಾ ಆಗುತ್ತದೆ ಎಂದರು.

   ಜಿಲ್ಲೆಯಲ್ಲಿ 10 ಕಡೆ ಕೊಬ್ಬರಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕೊಬ್ಬರಿ ಬೆಳೆಗಾರರಿಗೆ ದಟ್ಟಣೆ ಉಂಟಾಗದಂತೆ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಖರೀದಿ ಕೇಂದ್ರದಲ್ಲಿ ಗುಣಮಟ್ಟದ ಕೊಬ್ಬರಿಗೆ ಮಾತ್ರ ಅವಕಾಶವಿದ್ದು, ಈ ಬಗ್ಗೆ ರೈತರು ಗಮನಿಸಬೇಕು ಎಂದರು.

    ಈ ಹೊತ್ತಿನ ಪರಿಸ್ಥಿತಿಯಲ್ಲಿ ಸರ್ಕಾರದಲ್ಲಿ ಆರ್ಥಿಕ ಕೊರತೆ ಎದುರಾಗಿದ್ದರೂ ಸಹ ಕೃಷಿಗೆ ಹಾಗೂ ರೈತರಿಗೆ ತೊಂದರೆ ಆಗಬಾರದೆಂದು ನಾವು ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದು, ರೈತರಿಗೆ ಯಾವುದೇ ರೀತಿಯ ಕಷ್ಟ ಎದುರಾಗದಂತೆ, ವಿಳಂಬವಾಗದಂತೆ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗುವುದು.

  ಕೋವಿಡ್ ಸಂಕಷ್ಟದಲ್ಲೂ ಸಹ ನಾವು ಕೃಷಿಗೆ ಹಾಗೂ ರೈತರಿಗೆ ಯಾವುದೇ ನಿರ್ಬಂಧ ಹೇರಿರಲಿಲ್ಲ ಎಂದ ಅವರು, ಎಂತಹ ಲಾಕ್ಡೌನ್ ಸಂದರ್ಭದಲ್ಲೂ ಸಹ ಕೃಷಿಗೆ ತೊಂದರೆಯಾಗದಂತೆ ರೈತರ ಹಿತ ಕಾಪಾಡಿದ್ದೇವೆ ಎಂದರು.

   ಕೊಬ್ಬರಿ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಕೊಬ್ಬರಿ ತರುವ ರೈತರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವಂತೆಯೂ ಸೂಚಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಕೆರೆ ವಸಂತ್, ಎಪಿಎಂಸಿ ವರ್ತಕ ಎಲ್.ಆರ್.ಬಾಲಾಜಿ, ಕಾರ್ಯದರ್ಶಿ ಸೋಮಶೇಖರ್, ವ್ಯವಸ್ಥಾಪಕ ಅಜಯ್, ಖರೀದಿ ಅಧಿಕಾರಿ ಸಂಜಯ್, ಕೆಂಕೆರೆ ನವೀನ್, ನಂದಿಹಳ್ಳಿ ಶಿವಣ್ಣ ಮೊದಲಾದವರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link