ಶಿರಾ:
ಯಾವುದೇ ಮೂಲದಿಂದ ಹರಿಯುವ ನೀರನ್ನು ಪೂರೈಸುವಾಗ ನಿಗಧಿಗೊಳಿಸಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆಯ ಮೇರೆಗೆ ಮೊದಲು ಕುಡಿಯುವ ನಿರಿನ ಯೋಜನೆಗೆ ನೀರನ್ನು ಹರಿಸುವುದು ಅಗತ್ಯ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ, ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರು ಹರಿಯುತ್ತಿರುವ ಪಟ್ರಾವತನಹಳ್ಳಿಯ ಎಸ್ಕೇಪ್ ಗೇಟ್‍ಗೆ ಮಂಗಳವಾರ ಭೇಟಿ ನೀಡಿ ಬಾಗೀನ ಅರ್ಪಿಸಿದ ನಂತರ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರೊಮದಿಗೆ ಮಾತನಾಡಿದರು.
ಕಳೆದ ವರ್ಷ ಶಿರಾ, ಕಳ್ಳಂಬೆಳ್ಳ ಕೆರೆಗಳಿಗೆ ನಾವು ನಿರೀಕ್ಷೆ ಮಾಡಿದಷ್ಟು ಹೇಮಾವತಿ ನೀರು ಕೊನೆಗೂ ಹರಿಯಲೇ ಇಲ್ಲ. ಕುಡಿಯುವ ನೀರಿಲ್ಲದೆ ಶಿರಾ ನಗರದ ಜನ ನೀರಿಗಾಗಿ ಪರಿತಪಿಸುವಂತಾಯಿತು. ನಮ್ಮ ಮನವಿ ಮೇರೆಗೆ ಕಳೆದ ವರ್ಷ ಮುಖ್ಯಮಂತ್ರಿಗಳು ನೀರು ಹರಿಸಲು ಸೂಚನೆ ನೀಡಿದ್ದರೂ ಕೋವಿಡ್ ಮಹಾಮಾರಿಯ ಸಂದಿಗ್ದತೆಯು ಎದುರಾಗಿ ನೀರಾವರಿ ಇಲಾಖೆಯೇ ಸೀಲ್‍ಡೌನ್ ಆಗಬೇಕಾಯ್ತು ಎಂದರು.
ಈ ಸಂಬಂಧ ಪ್ರಸಕ್ತ ವರ್ಷವಾದರೂ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಪೂರೈಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಹೇಮಾವತಿಯ ನೀರು ತುಮಕೂರಿನತ್ತ ಹರಿಯತೊಡಗಿದ್ದು ಶಿರಾ, ಕಳ್ಳಂಬೆಳ್ಳ ಕೆರೆಯತ್ತ 200 ಕ್ಯುಸೆಕ್ಸ್ ನೀರು ಹರಿಯುತ್ತಿದೆ ಎಂದರು.
ಗ್ರಾ,ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಎನ್.ಸಿ.ದೊಡ್ಡಯ್ಯ, ಭಾನುಪ್ರಕಾಶ್, ಹಾರೋಗೆರೆ ಮಹೇಶ್, ರೇಣುಕಮ್ಮ, ರಮೇಶ್, ನೂರುದ್ಧೀನ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
