ಹುಳಿಯಾರು
ಹುಳಿಯಾರು ಎಪಿಎಂಸಿ ಮುಂಭಾಗದಿಂದ ಸೋಮಜ್ಜನಪಾಳ್ಯಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಸೋಮಜ್ಜನಪಾಲ್ಯದ ನಾಗರಾಜು ಮನವಿ ಮಾಡಿದ್ದಾರೆ.
ಸುಮಾರು ಹತ್ತದಿನೈದು ವರ್ಷಗಳ ಹಿಂದೆ ಹುಳಿಯಾರು ಎಪಿಎಂಸಿಯಿಂದ ಡಾಂಬರು ರಸ್ತೆ ನಿರ್ಮಿಸಿ ಸೋಮಜ್ಜನಪಳ್ಯ, ಕಾಮಶೆಟ್ಟಿ ಪಾಳ್ಯ, ಕೆ.ಸಿ.ಪಾಳ್ಯದ ಗ್ರಾಮಗಳ ಜನರು ಹುಳಿಯಾರು ಪಟ್ಟಣಕ್ಕೆ ಬಂದೋಗಲು ಅನುಕೂಲ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆಯ ನಿರ್ವಹಣೆಯಿಲ್ಲದೆ ಗುಂಡಿಗಳು ಬಿದ್ದು ಸಂಪೂರ್ಣ ಹದಗೆಟ್ಟು ಹೋಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ರಾಕ್ಷಶ ಸ್ವರೂಪದಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಜಾಲಿ ಗಿಡಗಳು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿರುವುದರಿಂದ ವಾಹನಗಳು ಎದುರು ಬದಿರಾದರೆ ವಾಹನ ಸವಾರರು ಮುಳ್ಳು ಕಂಟಿಗಳ ಬೇಲಿಯಲ್ಲಿ ಸಾಗಬೇಕಾಗುತ್ತದೆ. ಇತ್ತ ಜಾಲಿ ಗಿಡ ತಪ್ಪಿಸಿದರೆ ಅತ್ತ ಗುಂಡಿಗೆ ಬೀಳಬೇಕು, ಗುಂಡಿ ತಪ್ಪಿಸಿದರೆ ಜಾಲಿ ಗಿಡದಿಂದ ತರಚಿಸಿಕೊಳ್ಳಬೇಕು ಎನ್ನುವಂತ್ತಾಗಿದೆ.
ರಾತ್ರಿ ಸಮಯದಲ್ಲಿ ಹೊಸಬರು ಬಂದಲ್ಲಿ ಮುಳ್ಳಿನ ಗಿಡಗಳಿಂದ ತರಚಿಸಿಸಿಕೊಂಡು ಬೀಳುವುದು ಗ್ಯಾರೆಂಟಿ ಆಗಿದ್ದು ಈಗಾಗಲೇ ಅನೇಕರು ಬಿದ್ದಿರುವ, ತರಚಿಸಿಕೊಂಡಿರುವ ನಿದರ್ಶನಗಳಿವೆ. ದ್ವಿಚಕ್ರ ವಾಹನ ಸವಾರರಂತು ಗುಂಡಿ ತಪ್ಪಿಸಿಕೊಳ್ಳಲು ಸರ್ಕಸ್ ಮಾಡುತ್ತಾ ಸಾಗುವುದು,ಈ ರಸ್ತೆಯ ಗುಂಡಿ ಮುಚ್ಚುವ, ಇಕ್ಕೆಲಗಳ ಜಾಲಿ ಗಿಡ ತೆರವುಗೊಳಿಸುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದು ಈ ಭಾಗದ ಗ್ರಾಮಸ್ಥರ ಆರೋಪವಾಗಿದೆ.