ಮಧುಗಿರಿ :

ಬುಧವಾರ ಬೆಳಗಿನ ಜಾವದಲ್ಲಿ ಗುಡುಗು ಸಿಡಿಲು ಮಿಂಚಿನ ಸಹಿತ ಮಧುಗಿರಿಯಲ್ಲಿ ಸುರಿದ ಮಳೆಗೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹದಿಮೂರನೆಯ ವಾರ್ಡಿನಲ್ಲಿರುವ ಬಹುತೇಕ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ನುಗ್ಗಿದೆ. ಇದಕ್ಕೆ ಕಾರಣ ಈ ವಾರ್ಡಿನಲ್ಲಿ ರಘು ಹೋಟೆಲ್ ಸಮೀಪ ಇತ್ತೀಚೆಗೆ ನಿರ್ಮಿಸಿರುವ ಡಕ್‍ನ ಒಳಭಾಗದಲ್ಲಿ ಕಾಂಕ್ರೀಟ್ ಹಾಕಿ ಎಷ್ಟೋ ದಿನಗಳಾಗಿದ್ದರೂ ನೀರು ಸರಾಗವಾಗಿ ಹರಿಯುವಂತೆ ಮಾಡದ ಕಾಮಗಾರಿಯೇ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು. ಬೂರ್ಕನಹಟ್ಟಿಯಲ್ಲಿರುವ ಬಹುತೇಕ ಮನೆಗಳ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಹೆಚ್ಚಾಗಿ ಸಂಪುಗಳನ್ನು ಸ್ವಚ್ಛ ಮಾಡಿಕೊಳ್ಳುವುದರಲ್ಲಿಯೆ ಹೈರಾಣಾಗಿ ಹೋಗಿದ್ದೇವೆ ಎಂದು ಗೃಹಿಣಿಯರು ತಮ್ಮ ನೋವು ತೋಡಿಕೊಂಡಿದ್ದಾರೆ.
ಇನ್ನೂ ಟೌನ್ ಹಾಲ್ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳಿಗೂ ಸಹ ಚರಂಡಿ ನೀರು ನುಗ್ಗಿದೆ. ಪೋಸ್ಟ್ ಆಫೀಸ್ ಕಡೆಯಿಂದ ಬರುವ ರಾಯಗಾಲುವೆಯ ತುಂಬಾ ಕಸಕಡ್ಡಿಗಳು ತುಂಬಿ ನೀರು ಸರಾಗವಾಗಿ ಹರಿಯಲು ಅಡಚಣೆಯಾಗಿರುವುದೇ ಮಳೆ ನೀರು ಮಳಿಗೆಗಳಿಗೆ ನುಗ್ಗಲು ಪ್ರಮುಖ ಕಾರಣವೆನ್ನಲಾಗಿದೆ. ಈ ನೀರು ಕೆ.ಆರ್. ಬಡಾವಣೆಯ ತಗ್ಗು ಪ್ರದೇಶಗಳಿಗೂ ನುಗ್ಗಿ ಅವಾಂತರವಾಗಿದೆ.
ಇನ್ನೂ ಹೈಸ್ಕೂಲ್ ವೃತ್ತದ ಬಳಿ ಇರುವ ತೆರೆದ ಚರಂಡಿಗೆ ಕಿಡಿಗೇಡಿಗಳು ಪ್ರತಿನಿತ್ಯ ಬಿಯರ್ ಬಾಟಲ್‍ಗಳನ್ನು ಎಸೆದ ಪರಿಣಾಮ ಅಲ್ಲೂ ಸಹ ನೀರು ಸರಾಗವಾಗಿ ಹರಿಯದೆ, ರಸ್ತೆಯ ಮೇಲೆ ನೀರು ಹರಿದು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್ ಹಿಂಭಾಗದ ಮನೆಗಳಿಗೂ ಸಹ ಮಳೆ ನೀರು ನುಗ್ಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
