ತುಮಕೂರು:ಜನ ಪ್ರತಿನಿಧಿಗಳಿಲ್ಲದೆ ‘ಭಣಗುಡುತ್ತಿರುವ’ ತಾ.ಪಂ. ಕಚೇರಿ

ತುಮಕೂರು

      ತುಮಕೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಹೊಣೆ ಹೊತ್ತಿರುವ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯು ಇತ್ತೀಚೆಗೆ ಜನ-ಜನಪ್ರತಿನಿಧಿಗಳ ಹಾಜರಿಯಿಲ್ಲದೆ “ಭಣಗುಡುವಂತಾಗಿದೆ”ಯೆಂಬುದು ತಾ.ಪಂ. ಕಚೇರಿ ಆವರಣದಲ್ಲಿ ಚರ್ಚಾವಿಷಯವಾಗಿದೆ.

      ತುಮಕೂರು ತಾಲ್ಲೂಕು ಪಂಚಾಯಿತಿಯು ಬಿಜೆಪಿ ಆಡಳಿತದಲ್ಲಿದೆ. ಒಟ್ಟು 30 ಸಂಖ್ಯಾಬಲವಿರುವ ತಾ.ಪಂ.ನಲ್ಲಿ ಬಿ.ಜೆ.ಪಿ.ಯು 17, ಜೆಡಿಎಸ್ 12 ಹಾಗೂ ಕಾಂಗ್ರೆಸ್ ಕೇವಲ ಒಂದು ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿಯ ಗಂಗಾಂಜನೇಯ (ಸ್ವಾಂದೇನಹಳ್ಳಿ ಕ್ಷೇತ್ರ) ಅವರು ಅಧ್ಯಕ್ಷರಾಗಿದ್ದು, ಬಿಜೆಪಿಯ ಕೆ.ಎನ್.ಶಾಂತಕುಮಾರ್ (ಕೆಸರಮಡು ಕ್ಷೇತ್ರ) ಅವರು ಉಪಾಧ್ಯಕ್ಷರಾಗಿದ್ದಾರೆ. ಬಿಜೆಪಿಯ ಪಿ.ಎಲ್.ರಮೇಶ್ (ಹಿರೇಹಳ್ಳಿ ಕ್ಷೇತ್ರ) ಅವರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಮೂವರಿಗೂ ತಾ.ಪಂ. ಕಚೇರಿಯಲ್ಲಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. ಅಧ್ಯಕ್ಷರಿಗೆ ಸರ್ಕಾರಿ ವಾಹನ (ಜೀಪು)ದ ಸೌಲಭ್ಯವಿದೆ.

ದಿನವೂ ಬರುತ್ತಿಲ್ಲವೇಕೆ?

     “ತಾಲ್ಲೂಕು ಪಂಚಾಯಿತಿ ಸಭೆ ಇರುವ ದಿನದಂದು ತಾ.ಪಂ. ಕಚೇರಿಯಲ್ಲಿ ಚಟುವಟಿಕೆ ಕಂಡುಬರುತ್ತದೆ. ಅಂದು ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು ಆಗಮಿಸಿರುತ್ತಾರೆ. ಆದರೆ ಮರುದಿನದಿಂದ ತಾ.ಪಂ. ಕಚೇರಿ ನೀರವವಾಗಿಬಿಡುತ್ತದೆ. ಏಕೆಂದರೆ ಪ್ರತಿನಿತ್ಯ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿ ತಮ್ಮ ಕಚೇರಿಗೆ ಬರುವುದಿಲ್ಲ.

      ಯಾರೋ ಒಂದಿಬ್ಬರು ಬೆರಳೆಣಿಕೆಯ ಸದಸ್ಯರನ್ನು ಬಿಟ್ಟರೆ ಉಳಿದ ಸದಸ್ಯರುಗಳೂ ತಾ.ಪಂ.ನತ್ತ ಪ್ರತಿನಿತ್ಯ ಬರುತ್ತಿಲ್ಲ. ಹೀಗಾಗಿ ಇಲ್ಲಿ ಜನಪ್ರತಿನಿಧಿಗಳೂ ಇರುವುದಿಲ್ಲ; ಅವರನ್ನು ನೋಡಲು ಗ್ರಾಮೀಣ ಭಾಗದ ಜನರೂ ಬರುತ್ತಿಲ್ಲ” ಎಂಬುದು ತಾ.ಪಂ. ಕಚೇರಿ ಆವರಣದಲ್ಲಿ ಕೇಳಿಬರುತ್ತಿರುವ ಮಾತುಗಳು.

     “ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳಿಲ್ಲ ಎಂದರೆ ಅವರ ಕೊಠಡಿಗಳ ಬಾಗಿಲು ಹಾಕಲ್ಪಟ್ಟಿರುತ್ತವೆ. ತಾ.ಪಂ. ಸಿಬ್ಬಂದಿ ಅವುಗಳನ್ನು ದಿನವೂ ತೆರೆದು, ಸ್ವಚ್ಛಗೊಳಿಸುತ್ತಾರೋ ಇಲ್ಲವೋ ಗೊತ್ತಾಗದು. ಇವುಗಳು ಕಚೇರಿ ವೇಳೆಯಲ್ಲಿ ಮುಚ್ಚಲ್ಪಟ್ಟಿದ್ದರೆ, ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಯಾರನ್ನು ಕಾಣಬೇಕು? ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು? ಎಲ್ಲಿ ಕುಳಿತುಕೊಳ್ಳಬೇಕು?” ಎಂದು ಪ್ರಶ್ನಿಸಲಾಗುತ್ತಿದೆ.

      “ಇವರಲ್ಲದೆ ತಾ.ಪಂ. ಸದಸ್ಯರುಗಳೂ ಕಚೇರಿಗೆ ಬರುವುದು ಅಪರೂಪವಾಗಿದೆ. ಯಾರೋ ಒಂದಿಬ್ಬರು ಸದಸ್ಯರುಗಳು ಮಾತ್ರ ದಿನವೂ ಬರುತ್ತಾರಷ್ಟೇ. ಜನಪ್ರತಿನಿಧಿಗಳ ಸ್ಥಿತಿ ಈ ರೀತಿ ಇರುವುದು ಅಧಿಕಾರಿಗಳ-ಸಿಬ್ಬಂದಿಯ ಪಾಲಿಗೆ ವರವಾಗಿ ಬಿಟ್ಟಿದೆ. ತಾ.ಪಂ. ಆಡಳಿತದ ಮೇಲೆ ಬಿಗಿ ತಪ್ಪಿದಂತೆ ಆಗುತ್ತಿದೆ. ಕಾರ್ಯನಿರ್ವಹಣಾಧಿಕಾರಿಗಳು (ಇ.ಓ.) ಮೀಟಿಂಗ್ ಇತ್ಯಾದಿ ಎಂದು ಹೆಚ್ಚುಕಾಲ ಹೊರಗಡೆಯೇ ಇರುವುದರಿಂದ ಈ ಕಚೇರಿಯ ಸ್ಥಿತಿಗತಿಯನ್ನು ಹೇಳುವಂತೆಯೇ ಇಲ್ಲ” ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಶಾಸಕರ ಕಚೇರಿಯಿದ್ದರೂ…

       ತಾ.ಪಂ. ಕಚೇರಿ ಆವರಣದಲ್ಲೇ ತಾ.ಪಂ. ವತಿಯಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಿಗೂ ಅಧಿಕೃತ ಕಚೇರಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ (ಜೆಡಿಎಸ್) ಅವರ ಆಪ್ತ ಸಿಬ್ಬಂದಿ ಇಲ್ಲಿರುತ್ತಾರೆ. ಇಲ್ಲಿಗೆ ಮಾತ್ರ ಒಂದಿಷ್ಟು ಜನರು ದಿನವೂ ಬಂದು ಹೋಗುತ್ತಿರುತ್ತಾರೆ. ಅಪರೂಪಕ್ಕೊಮ್ಮೆ ಶಾಸಕರು ಇಲ್ಲಿಗೆ ಬರುತ್ತಾರಷ್ಟೇ.

        ತುಮಕೂರು ತಾಲ್ಲೂಕಿಗೆ ಸೇರುವ ಕೋರಾ ಹೋಬಳಿಯು ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಆದ ಕಾರಣ ಕೊರಟಗೆರೆಯ ಶಾಸಕರಿಗೂ ತುಮಕೂರು ತಾ.ಪಂ. ಕಚೇರಿಯಲ್ಲೊಂದು ಕೊಠಡಿಯನ್ನು ಮೀಸಲಿರಿಸಲಾಗಿದೆ. ಕೊರಟಗೆರೆಯ ಈಗಿನ ಶಾಸಕರಾದ ಡಾ.ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿಗಳೂ ಆಗಿರುವುದರಿಂದ ಸದರಿ ಕೊಠಡಿಯ ಮೇಲೆ ಸಣ್ಣದೊಂದು ನಾಮಫಲಕ ಹಾಕಲಾಗಿದೆ. ಇಷ್ಟು ಬಿಟ್ಟರೆ ಈ ಕೊಠಡಿಯಲ್ಲಿ ಬೇರೇನೂ ಇಲ್ಲ. ಸಿಬ್ಬಂದಿಯೂ ಇಲ್ಲ. ಹೀಗಾಗಿ ಈ ಕೊಠಡಿ ಅಕ್ಷರಶಃ ನಿರುಪಯುಕ್ತವಾಗಿ ಉಳಿದಿದೆ.

       ತಾ.ಪಂ. ಕಚೇರಿ ಆವರಣದೊಳಗೇ ತರಬೇತಿಗಾಗಿ ಒಂದು ಸುಸಜ್ಜಿತ ಸಭಾಂಗಣವಿದೆ. ಇಲ್ಲಿ ಆಗಾಗ ಸರ್ಕಾರಿ ಕಾರ್ಯಕ್ರಮಗಳು, ಆನ್‍ಲೈನ್ ವಿಡಿಯೋ ಸಂವಾದ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಂತಹ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಮೊದಲಾದವರು ಹಾಗೂ ವಿವಿಧ ಇಲಾಖಾಧಿಕಾರಿಗಳು ಬರುತ್ತಿರುತ್ತಾರೆ. ಇಂತಹ ಚಟುವಟಿಕೆಗಳ ವಿನಃ ಪ್ರಸ್ತುತ ತಾ.ಪಂ. ಕಚೇರಿಯು- ಇಲ್ಲಿ ಶಾಸಕರೊಬ್ಬರ ಕಚೇರಿ ಇದ್ದರೂ- ಜನರು ಹಾಗೂ ಜನಪ್ರತಿನಿಧಿಗಳಿಲ್ಲದೆ ಭಣಗುಡುವಂತಾಗಿದೆಯೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link