ಕೊರೋನಾ ಸೋಂಕಿತರನ್ನು ವಾಪಸ್ಸು ಕಳುಹಿಸಬೇಡಿ: ಜಿಲ್ಲಾಧಿಕಾರಿ

ತುಮಕೂರು

    ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿರ್ದೇಶನದನ್ವಯ ಶೇ.50ರಷ್ಟು ಬೆಡ್‍ಗಳನ್ನು ಸರ್ಕಾರಕ್ಕೆ ನೀಡಿ ಸೋಂಕಿತರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

    ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತರ ಚಿಕಿತ್ಸೆಯನ್ನು ನಿರಾಕರಿಸಬಾರದು. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಕ್ಕೆ ಬಿಟ್ಟು ಕೊಡಬೇಕಾಗಿರುವ ಶೇ.50ರಷ್ಟು ಬೆಡ್‍ಗಳನ್ನು ಕಡ್ಡಾಯವಾಗಿ ಮೀಸಲಿಟ್ಟು, ಸೋಂಕಿತರು ಬಂದಾಗ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು ಎಂದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿಗೆ ಸೂಚಿಸಿದರು.

    ಸರ್ಕಾರದ ವತಿಯಿಂದ ರೆಫರ್ ಆಗುವ ಸೋಂಕಿತರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರ ನಿಗಧಿಪಡಿಸಿರುವ ದರದಲ್ಲಿ ಪಾವತಿಸಲಾಗುವುದು. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳು ಕೂಡ ಬೆಡ್‍ಗಳನ್ನು ಐಸಿಯು, ವೆಂಟಿಲೇಟರ್‍ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಸೋಂಕಿತರು ಬಂದಾಗ ಚಿಕಿತ್ಸೆ ನೀಡಬೇಕು ಎಂದು ಅವರು ತಿಳಿಸಿದರು.

     ಇದಕ್ಕಾಗಿ ಪ್ರತಿ ಖಾಸಗಿ ಆಸ್ಪತ್ರೆಗಳು ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು. ಅದೇ ರೀತಿ ಜಿಲ್ಲಾಡಳಿತ ವತಿಯಿಂದ ಪ್ರತಿ ಆಸ್ಪತ್ರೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಇದರಿಂದ ಸೋಂಕಿತರ ಚಿಕಿತ್ಸೆ ಕೈಗೊಳ್ಳಲು ಸಮನ್ವಯತೆಯನ್ನು ಸಾಧಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

    ಕೊರೋನಾ ಸಂಕಷ್ಟದ ಸಮನ್ವಯದಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಿದರೆ ಜಿಲ್ಲೆಯಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆತು, ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದ ಅವರು, ವೈದ್ಯರು ಇಂತಹ ಸಂದರ್ಭದಲ್ಲಿ ತಮ್ಮ ವೃತ್ತಿಪರತೆಯನ್ನು ಮೆರೆಯಬೇಕು ಎಂದರು ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಡಿಹೆಚ್‍ಓ ಡಾ: ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ವೀರಭದ್ರಯ್ಯ ಸೇರಿದಂತೆ ಖಾಸಗಿ ಆಸ್ಪತ್ರೆಯ ಪ್ರತಿನಿಧಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link