ತುಮಕೂರು:
ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕರವಿ ಅವರು ಮಾ.28ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು ಎಂದು ತಿಳಿಸಿದ್ದು, ಈ ಅಚ್ಚರಿಯ ನೇಮಕದ ಹಲವು ತರಹದ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಅರುಣ್‌ಸೋಮಣ್ಣ ಗುಬ್ಬಿ ಇಲ್ಲವೇ ತುಮಕೂರಿಂದ ಸ್ಪರ್ಧಿಸುತ್ತಾರೆಂಬ ವದಂತಿಗಳು ನೇಮಕದ ಬೆನ್ನಿಗೆ ಹರಿದಾಡುತ್ತಿದ್ದು, ಜಿಲ್ಲಾ ಬಿಜೆಪಿಯಲ್ಲಿ ಮುಂದೆ ಮಹತ್ವದ ರಾಜಕೀಯ ಸ್ಥಿತ್ಯಂತರಗಳಿಗೆ ಈ ನೇಮಕ ಕಾರಣವಾಗಲಿದೆ.
ತಮ್ಮ ಮಗನಿಗೆ ಸ್ಪರ್ಧೆಗೆ ಅವಕಾಶ ನೀಡುವ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲಿನ ಧೋರಣೆ ಬಗ್ಗೆ ಅಸಮಾಧಾನ ಹೊರಹಾಕಿದ್ದ ವಿ.ಸೋಮಣ್ಣ ಅವರು ಪಕ್ಷ ತೊರೆಯುತ್ತಾರೆಂಬ ಸಂಗತಿಗಳು ಹರಿದಾಡಿದ್ದವು. ಅವರ ಪುತ್ರ ಅರಣ್ ಸೋಮಣ್ಣ ಸಹ ಬಿಎಸ್‌ವೈ ಪುತ್ರ ವಿಜಯೇಂದ್ರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ವಿ.ಸೋಮಣ್ಣ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದು, ಅವರ ಪುತ್ರನಿಗೆ ಲಿಂಗಾಯತ ಪ್ರಾಬಲ್ಯದ ತುಮಕೂರು ಜಿಲ್ಲೆಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೊದಲ ಹೆಜ್ಜೆಯಾಗಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.
ಹೊಸ ಅಭ್ಯರ್ಥಿಯೇ ಪರಿಹಾರವೆಂದು ಅರುಣ್ ಎಂಟ್ರಿಯೇ?
ಟಿಕೆಟ್ ಪೈಪೋಟಿ ಹೆಚ್ಚಿರುವ ತುಮಕೂರು ನಗರ ಹಾಗೂ ಗುಬ್ಬಿಯಲ್ಲಿನ ಗೊಂದಲಕ್ಕೆ ತೆರೆಎಳೆಯಲು ಹೊಸ ಅಭ್ಯರ್ಥಿಯೇ ಸೂಕ್ತ ಎಂಬ ತೀರ್ಮಾನಕ್ಕೆ ಸೋಮಣ್ಣ ಅವರನ್ನು ಜಿಲ್ಲೆಗೆ ಕರೆತರಲಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಏ.೩ರಂದು ಬಿಜೆಪಿ ಮೊದಲ ಹಂತದಪಟ್ಟಿ ಬಿಡುಗಡೆ ಸಾಧ್ಯತೆಯಿದ್ದು, ಅಂದು ಅರುಣ್‌ಸೋಮಣ್ಣ ಅವರು ಅಭ್ಯರ್ಥಿಯಾಗುವರೋ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಈ ಕುರಿತು ಪ್ರಜಾ ಪ್ರಗತಿ ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಪಕ್ಷ ಸಂಘಟನೆಗೆ ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅರುಣ್ ಸೋಮಣ್ಣ ಅವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಪದಾಧಿಕಾರಿಗಳಾದವರೆಲ್ಲ ಚುನಾವಣಾ ಅಭ್ಯರ್ಥಿಗಳಾಗುತ್ತಾರೆನ್ನಲು ಸಾಧ್ಯವಿಲ್ಲ ಎಂದು ಅರುಣ್‌ಸೋಮಣ್ಣ ಸ್ಪರ್ಧೆಯ ಕುರಿತಾಗಿ ಸ್ಪಷ್ಟೀಕರಿಸಿದರು.
