ಚಿತ್ರದುರ್ಗ:
ವಿಕಲಚೇತನರಿಗೆ ಸೇವೆ ಮಾಡುವುದು ದೇವರ ಪೂಜೆಗಿಂತಲೂ ಮಿಗಿಲಾದುದು ಎಂದು ಜಿಲ್ಲಾಧಿಕಾರಿ ಕವಿತಾ ಎನ್.ಮನ್ನಿಕೇರಿ ತಿಳಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಮುದಾಯ ಅಭಿವೃದ್ದಿ ವಿಭಾಗ ಧರ್ಮಸ್ಥಳದ ವತಿಯಿಂದ ಜನಮಂಗಳ ಕಾರ್ಯಕ್ರಮದಡಿ ಇಲ್ಲಿನ ರುಡ್‍ಸೆಟ್‍ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಚೇತನರಿಗೆ ಪರಿಕರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅತ್ಯುತ್ತಮ ಸೇವೆ ಮಾಡುತ್ತಿದೆ. ವಿಶೇಷವಾಗಿ ವಿಕಲಚೇತನರ ಕಡೆ ಹೆಚ್ಚಿನ ಗಮನ ಕೊಡುತ್ತಿರುವುದು ಸಂತೋಷದ ಸಂಗತಿ. ವಿಕಲಚೇತನರಿಗೆ ಅನುಕಂಪದ ಜೊತೆಗೆ ಸ್ವಾವಲಂಭಿಯಾಗಿ ಬದುಕುವ ಅವಕಾಶ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯ ನಿಸ್ವಾರ್ಥ ಸೇವೆ ಅಮೋಘವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಮಾತನಾಡಿ ರಾಜ್ಯದಲ್ಲಿ 6350 ಮಂದಿ ವಿಕಲಚೇತನರಿಗೆ ನಮ್ಮ ಸಂಸ್ಥೆಯಿಂದ 1.50 ಕೋಟಿ ರೂ.ಮೌಲ್ಯದ ವಿವಿಧ ಬಗೆಯ ಪರಿಕರಗಳನ್ನು ನೀಡಲಾಗಿದೆ. 780 ಪರಿಕರಗಳು ಮಂಜೂರಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿಕಲಚೇತನರಿಗೆ ಪರಿಕರಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ವಿಕಲಚೇತನರ ಆರೋಗ್ಯದ ದೃಷ್ಟಿಯಿಂದ ವೀಲ್‍ಚೇರ್, ವಾಕರ್, ಏರ್‍ಬೆಡ್, ವಾಟರ್ ಬೆಡ್‍ಗಳನ್ನು ನೀಡಲಾಗುವುದು. ವಿಕಲಚೇತನರು ಈ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಯಾಗಿ ಜೀವಿಸುವ ಛಲ ತೊಡಬೇಕೆಂದು ಕರೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ವಿಮಾ ವಿಭಾಗದ ನಿರ್ದೇಶಕ ಜೈರಾಮ ನೆಲ್ಲಿತಾಯ, ರುಡ್‍ಸೆಟ್ ನಿರ್ದೇಶಕಿ ಮಂಜುಳ, ಜನಜಾಗೃತಿ ವೇದಿಕೆ ಸದಸ್ಯ ಕೆ.ಆರ್.ಮಂಜುನಾಥ್, ಮಹಮದ್ ನೂರುಲ್ಲಾ ವೇದಿಕೆಯಲ್ಲಿದ್ದರು.ಸುಮ ಪ್ರಾರ್ಥಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಉಮೇಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
