ಬಳ್ಳಾರಿ
ಸದಾ ಕೊರೊನಾದಿಂದಾಗಿ ಸಾವು-ನೋವುಗಳನ್ನೇ ಕಾಣುತ್ತಿದ್ದ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಸಂಭ್ರಮದ ವಾತಾವರಣ…ಕಾರಣ ಸೊಂಕಿತ ಗರ್ಭಿಣಿಯರಿಗೆ ಇದುವರೆಗೆ 101 ಹೆರಿಗೆಯನ್ನು ಅತ್ಯಂತ ಸುಸೂತ್ರವಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲದಂತೆ ಮಾಡಿಸಿದ ಗಳಿಗೆಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಾಕ್ಷಿಯಾದರು.ಜಿಲ್ಲಾ ಕೋವಿಡ್ ಆಸ್ಪತ್ರೆಯ ಪ್ರಸವ ಮತ್ತು ಸ್ತ್ರೀರೋಗ ವಿಭಾಗದ ತಜ್ಞ ವೈದ್ಯರು,ವೈದ್ಯರು ಸದಾ ಸಾವು-ನೋವುಗಳ ಜಾಗದಲ್ಲಿ ಸಂತೋಷ-ಶುಭಾಷಯಗಳ ವಿನಿಮಯ ಮಾಡಿಕೊಂಡರು.
ಕೊರೊನಾ ಸೊಂಕಿತರಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದ ಗರ್ಭೀಣಿಯರಿಗೆ ಒಂದೇಡೆ ಕೊರೊನಾ ಭಯ ಮತ್ತೊಂದೆಡೆ ಗರ್ಭೀಣಿಯ ಸಂದರ್ಭದಲ್ಲಿನ ಸಂಕಟಗಳೆಲ್ಲವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿದ ಆಸ್ಪತ್ರೆಯ ತಜ್ಞ ವೈದ್ಯರು, ವೈದ್ಯರು,ಸ್ನಾತಕೋತ್ತರ ವಿದ್ಯಾರ್ಥಿಗಳು ಇದುವರೆಗೆ 101 ಗರ್ಭೀಣಿಯರ ಹೆರಿಗೆಯನ್ನು ಅತ್ಯಂತ ಸುಸೂತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರದ ನಂತರ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಸೊಂಕಿತರ ಹೆರಿಗೆಗಳನ್ನು ಮಾಡಿಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ.
ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಜೂನ್ 25ರಂದು ಮೊದಲ ಸೊಂಕಿತ ಗರ್ಭೀಣಿಯ ಹೆರಿಗೆ ಸುಸೂತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾದ ವೈದ್ಯರು ಆ.28ರ ಸಂಜೆಯವರೆಗೆ 101 ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
29 ಸಹಜ ಹೆರಿಗೆಗಳು ಮತ್ತು 72 ಶಸ್ತ್ರಚಿಕಿತ್ಸೆ ಹೆರಿಗೆಗಳನ್ನು ಪ್ರಸವ ಮತ್ತು ಸ್ತ್ರೀರೋಗ ವಿಭಾಗದ ತಜ್ಞವೈದ್ಯರು ಮಾಡಿಸಿದ್ದಾರೆ; ಶಸ್ತ್ರಚಿಕಿತ್ಸೆ ಹೆರಿಗೆಗಳಲ್ಲಿ 21 ಬಿಪಿ,ಶುಗರ್,ಪಿಡ್ಸ್, ಪ್ಲೆಟ್‍ಲೇಟ್ಸ್ ಕಡಿಮೆ, ಕಾಲು ಹೊರಗಡೆ ಬಂದಿರುವುದು ಸೇರಿದಂತೆ ವಿವಿಧ ರೀತಿಯ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದವುಗಳಾಗಿದ್ದವು. ಅವುಗಳೆಲ್ಲವುಗಳನ್ನು ಅತ್ಯಂತ ಸೂಸುತ್ರವಾಗಿ ಹೆರಿಗೆ ಮಾಡಿಸಿದ ಶ್ರೇಯಸ್ಸು ತಜ್ಞ ವೈದ್ಯರು,ವೈದ್ಯರ ತಂಡಕ್ಕೆ ಸಲ್ಲುತ್ತದೆ. 5 ಮಕ್ಕಳು ಕೊರೊನಾ ಸೊಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿವೆ.
ಕೋವಿಡ್ ಸೊಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿರುವಂತೆ ಗರ್ಭೀಣಿ ಸೊಂಕಿತರ ಹೆರಿಗೆ ಮಾಡಿಸುವಲ್ಲಿಯೂ ಎರಡನೇ ಸ್ಥಾನದಲ್ಲಿರುವುದು ವಿಶೇಷ. 101 ಗರ್ಭೀಣಿಯರ ಸುಸೂತ್ರ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದ ಪ್ರಸವ ಮತ್ತು ಸ್ತ್ರೀರೋಗ ವಿಭಾಗದ ತಂಡಕ್ಕೆ ಅಭಿನಂದನೆಗಳು ಎಂದು ಜಿಲ್ಲಾಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಬಸರೆಡ್ಡಿ ಅವರು ಸಂತಸ ಹಂಚಿಕೊಂಡರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ,ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗೆ 15528 ಜನರು ಗುಣಮುಖರಾಗಿ ನಗುಮೋಗದಿಂದ ಮನೆಯತ್ತ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ 101 ಸೊಂಕಿತ ಗರ್ಭಿಣಿಯರ ಸುಸೂತ್ರ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗಕ್ಕೆ ಅಭಿನಂದನೆಗಳು. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದರು.
ಒಬಿಜೆ ತಂಡ(ಪ್ರಸವ ಮತ್ತು ಸ್ತ್ರೀರೋಗ ವಿಭಾಗ)ದಲ್ಲಿ ಡಾ.ಸುಯಗ್ನ ಜೋಶಿ, ಡಾ.ಖಾಜಿ, ಡಾ.ವಿಜಯಲಕ್ಷ್ಮೀ,ಡಾ.ಜಯಪ್ರದಾ, ಡಾ.ಶಾರದಾ,ಡಾ.ವೀಣಾ, ಡಾ.ಅಶ್ರಫ್, ಡಾ.ಸ್ವಾತಿ, ಡಾ.ಪೂರ್ಣಿಮಾ, ಡಾ.ಸರಸ್ವತಿ,ಡಾ.ಲಾವಣ್ಯ,ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಕಾವ್ಯ,ಡಾ.ರುಕ್ಸಾ, ಡಾ.ರಾಜೇಶ್ವರಿ ಸೇರಿದಂತೆ ಸ್ಟಾಪ್ ನರ್ಸ್‍ಗಳು,ಅರಿವಳಿಕೆ ತಜ್ಞರು,ಮಕ್ಕಳು ವೈದ್ಯರು ಈ ಯಶಸ್ವಿಗೆ ಕಾರಣಿಕರ್ತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ