ಪ್ರವಾಸಿ ಸರ್ಕೀಟ್ ಹೌಸ್ ಘೋಷಣೆಗೆ ಕೆ.ಎ ತಿಪ್ಪೇಸ್ವಾಮಿ ಒತ್ತಾಯ

ತುಮಕೂರು:

    ತುಮಕೂರು ಜಿಲ್ಲೆಯನ್ನು ಪ್ರವಾಸಿ ಸರ್ಕೀಟ್ ಹೌಸ್ ಎಂದು ಘೋಷಿಸಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕಲ್ಪತರು ಪ್ರವಾಸಿ ಸಕ್ರ್ಯೂಟ್ ಸಮಿತಿ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

   ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ಪರಿಸರ, ನೈಸರ್ಗಿಕ ಬೆಟ್ಟ-ಗುಡ್ಡಗಳು, ದೇವಾಲಯಗಳು, ಪಾರಂಪರಿಕ ಸ್ಥಳಗಳು, ಪ್ರವಾಸಿ ತಾಣಗಳು ಆಕರ್ಷಕವಾಗಿವೆ. ತಿಪಟೂರು ತಾಲ್ಲೂಕಿನ ದಸರೀಘಟ್ಟ, ಚೌಡೇಶ್ವರಿ ದೇವಾಲಯ, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠ, ದೇವರಾಯನದುರ್ಗ, ನಾಮದ ಚಿಲುಮೆ, ಸಿದ್ದರಬೆಟ್ಟ, ಕೈದಾಳದಲ್ಲಿರುವ ಅಮರಶಿಲ್ಪಿ ಜಕಣಾಚಾರಿಯವರಿಂದ ಕೆತ್ತಲ್ಪಟ್ಟ ವೀರನಾರಾಯಣ ದೇವಸ್ಥಾನ, ಪಂಡಿತನಹಳ್ಳಿ ಸಮೀಪದಲ್ಲಿರುವ ಜೈನ ಬಸದಿಗಳು, ಸುಪ್ರಸಿದ್ಧ ಸಿದ್ಧಗಂಗಾ ಮಠ ಇವೆಲ್ಲವೂ ಪಾರಂಪರಿಕ, ಪುಣ್ಯಕ್ಷೇತ್ರಗಳಾಗಿ ಹೆಸರು ಮಾಡಿವೆ.

    ಮಧುಗಿರಿಯ ಪ್ರಸಿದ್ಧ ಏಕಶಿಲಾ ಬೆಟ್ಟ, ಸಿಂಗರಾವುತನಹಳ್ಳಿಯಲ್ಲಿರುವ ಭಸ್ಮಾಂಗಿ ಬೆಟ್ಟ, ಶಿರಾದ ಐತಿಹಾಸಿಕ ಕೋಟೆ, ಗುಬ್ಬಿ ಶ್ರೀ ಚನ್ನಬಸವೇಶ್ವರ ದೇವಾಲಯ, ಹೊನ್ನವಳ್ಳಿ ಅರಣ್ಯ ಪ್ರದೇಶ, ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ, ತುರುವೇಕೆರೆ ತಾಲ್ಲೂಕು ಮಲ್ಲಾಘಟ್ಟ ಪ್ರವಾಸಿ ಕೆರೆ, ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಶ್ರೀ ಲಕ್ಷ್ಮೀದೇವಸ್ಥಾನ, ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಮದಲಿಂಗನ ಕಣಿವೆ, ದೇವರಾಯನದುರ್ಗದ ಶ್ರೀ ಯೋಗ ಮತ್ತು ಭೋಗ ನರಸಿಂಹಸ್ವಾಮಿ ದೇವಾಲಯ, ಯಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯ, ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಸೇರಿದಂತೆ ಇನ್ನೂ ಮುಂತಾದ ಸ್ಥಳಗಳು ತುಮಕೂರು ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿವೆ.

    ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವಾಲಯಗಳು, ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಇವುಗಳನ್ನು ಅಭಿವೃದ್ಧಿಪಡಿಸಲು ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಸಭೆ ಏರ್ಪಡಿಸಿ ಒಂದು ಸಮಿತಿ ರಚಿಸುವ ಅಗತ್ಯವಿದೆ. ಆ ಮೂಲಕ ಕಲ್ಪತರು ಪ್ರವಾಸಿ ಸಕ್ರ್ಯೂಟ್ ಸಮಿತಿ ರಚನೆ ಮಾಡಲು ಕ್ರಮ ವಹಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಅನೇಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

    ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಸಹ್ಯಾದ್ರಿ ಪ್ರಾಧಿಕಾರವನ್ನು ರಚಿಸಲಾಗಿದೆ. ಸರ್ಕಾರವು ಈ ಪ್ರಾಧಿಕಾರಕ್ಕೆ ಹಣವನ್ನೂ ಸಹ ಬಿಡುಗಡೆ ಮಾಡಿದೆ. ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಹ ತುಮಕೂರು ಜಿಲ್ಲೆ ಕಲ್ಪತರು ಪ್ರವಾಸಿ ಸಕ್ರ್ಯೂಟ್ ಸಮಿತಿ ರಚನೆ ಮಾಡಿ ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದಾರೆ.

   ತುಮಕೂರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರದಿಂದ 2020-21ನೇ ಸಾಲಿನಲ್ಲಿ ಕನಿಷ್ಠ 15 ಕೋಟಿ ರೂ.ಗಳ ಆರ್ಥಿಕ ನೆರವನ್ನು ಪಡೆದು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳು, ಉದ್ಯಾನವನಗಳು, ಪ್ರವಾಸಿ ತಾಣಗಳು, ಮ್ಯೂಸಿಯಂ, ಸ್ಮಾರಕಗಳು, ಜಲಾಶಯಗಳೂ ಸೇರಿದಂತೆ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಒಂದು ನೀಲನಕ್ಷೆಯನ್ನು ತಯಾರಿಸಿ ಕ್ರಿಯಾ ಯೋಜನೆ ರೂಪಿಸಲು ಕೂಡಲೇ ಒಂದು ಸಭೆ ಕರೆಯಬೇಕಾಗಿ ಅವರು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link