ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟ ಸಮಯದಲ್ಲೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಒದಗಿಸಬೇಕು ಹಾಗೂ ಪೊಲೀಸರಿಂದ ರಕ್ಷಣೆ ಕೊಡಿಸುವ ಜತೆಗೆ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಮುಖಂಡರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು, ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಉಗ್ರ ಶಿಕ್ಷೆಗೆ ಗುರಿ ಪಡಿಸಬೇಕು ಹಾಗೂ ನೊಂದ ದಲಿತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮೇಲ್ಜಾತಿ ಜಮೀನುದಾರರ ರಾಜಕೀಯ ಪ್ರಭಾವದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯದ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡದೆ ಕೌಂಟರ್ ಕೇಸು ಹಾಕಿ ದಲಿತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡದೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಮಧುಗಿರಿ ತಾಲ್ಲೂಕು ತಿಪ್ಪಾಪುರದಲ್ಲಿ ದಲಿತ ಹನುಮಂತಪ್ಪ ತನ್ನ ಹೊಲದಲ್ಲಿ ಸ್ವಂತ ಖರ್ಚಿನಿಂದ ಕೊಳವೆ ಬಾವಿ ಕೊರೆಸಿದಾಗ ಒಳ್ಳೆಯ ನೀರು ಸಿಕ್ಕಿತು. ಇದನ್ನು ಸಹಿಸದ ಮೇಲ್ಜಾತಿ ಜನರು ದೌರ್ಜನ್ಯ ನಡೆಸಿ ಕೈ ಕಾಲು ಮುರಿದು ಹಾಕಿದರು. ಅಲ್ಲದೆ ಇವರ ಮಗನ ವಿರುದ್ಧವೂ ಸುಳ್ಳು ಕೌಂಟರ್ ಕೇಸು ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಆರೋಪಿಗಳು ಮಾತ್ರ ಬೇಲ್ ಪಡೆದು ಆರಾಮಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಕೋಡುಗೆಹಳ್ಳಿಯಲ್ಲಿ ಜಾತ್ರೆ ಸಂದರ್ಭದಲ್ಲಿ ನಡೆಯುತ್ತಿದ್ದ ವಾದ್ಯಗೋಷ್ಠಿ ನೋಡುತ್ತಿದ್ದ ದಲಿತ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈದು ಕೇರಿಗೆ ನುಗ್ಗಿ ದಾಂಧಲೆ ನಡೆಸಿದರು. ಕೇಸು ದಾಖಲಾಯಿತು. ಆದರೆ ಪೆÇಲೀಸರು ದೌರ್ಜನ್ಯ ಮಾಡಿದವರನ್ನು ಬಂಧಿಸಲಿಲ್ಲ, ದಲಿತರಿಗೆ ನ್ಯಾಯ ಸಿಗಲಿಲ್ಲ ಎಂದರು.
ಕೊರಟಗೆರೆ ತಾಲ್ಲೂಕು ಮಲ್ಲೇಕಾವು ಗ್ರಾಮದಲ್ಲಿ ದೊಡ್ಡಮ್ಮದೇವಿ ಹಬ್ಬದಲ್ಲಿ ಜಗದೀಶ ದಲಿತ ಕುಟುಂಬ ದೇವಸ್ಥಾನ ಪ್ರವೇಶಿಸಿ ಪೂಜೆ ಮಾಡಿದ್ದಕ್ಕೆ 25 ಸಾವಿರ ರೂ. ದಂಡ ಹಾಕಿದರು. ಆದರೆ ಇದುವರೆವಿಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕುಣಿಗಲ್ ತಾಲ್ಲೂಕು ಕಸಬಾ ಹೋಬಳಿಯ ಹನುಮೇಗೌಡನಪಾಳ್ಯದ ಕೊರವ ಜನಾಂಗದ ಮೇಲೆ ಜಾತಿ ದೌರ್ಜನ್ಯ ನಡೆಸಲಾಗಿದೆ. ದೌರ್ಜನ್ಯಕ್ಕೊಳಗಾದವರ ಮೇಲೆ ಕೌಂಟರ್ ಕೇಸು ಹಾಕಲಾಗಿದೆ. ಕೂಡಲೇ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸು ಹಾಕಲು ಸಹಕರಿಸಿದ ಪೊಲೀಸ್ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕುಣಿಗಲ್ ತಾಲ್ಲೂಕಿನ ಹೊಸೂರು ಕಾಲೋನಿಯಲ್ಲಿ 70 ದಲಿತ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಜೆಲ್ಲಿ ಕ್ರಷರ್ ನಡೆಯುತ್ತಿದೆ. ಇದರಿಂದ ಬರುವ ಧೂಳಿನಿಂದ ಇಲ್ಲಿನ ಜನತೆ ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಅಲ್ಲದೆ ಇವರುಗಳ ಜಮೀನುಗಳ ಸಹ ಹಾಳಾಗಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಜನತೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಘದ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ