ಹಾವೇರಿ
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇದೇ ಸೆಪ್ಟೆಂಬರ್ 19 ರಂದು ಮೆಗಾ ಇ-ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಮೆಗಾ ಇ-ಲೋಕ ಅದಾಲತ್‍ನಲ್ಲಿ ದೃಶ್ಯ ಸಂವಾದ ಮೂಲಕ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಾನೂನು ಬದ್ಧವಾಗಿ ರಾಜಿ ಸಂಧಾನವಾಗಲು ಅವಕಾಶವಿರುವ ಎಲ್ಲಾ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ತಿಳಿಸಿದ್ದಾರೆ.
ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಪ್ರಮಾಣಿಕೃತ ಮಾರ್ಗಸೂಚಿ ಅನುಸಾರ ಜಿಲ್ಲೆ ಮತ್ತು ತಾಲೂಕಿನ ಎಲ್ಲ ನ್ಯಾಯಾಲಯಗಳಲ್ಲಿ ಮೆಗಾ ಇ-ಲೋಕ ಅದಾಲತ್‍ನ್ನು ದಿನಾಂಕ 19-09-2020 ರಂದು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಇ-ಲೋಕ ಅದಾಲತ್‍ಗೆ ಪ್ರತ್ಯೇಕವಾಗಿ ಒಬ್ಬರು ನ್ಯಾಯಾಧೀಶರು ಹಾಗೂ ನುರಿತ ನ್ಯಾಯವಾದಿಗಳು ಸಂಧಾನಕಾರರಾಗಿ ಕಾರ್ಯನಿರ್ವಹಿಸುತ್ತಾರೆ.
ವ್ಯಾಜ್ಯಗಳು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಇತ್ಯರ್ಥವಾದಲ್ಲಿ ಅರ್ಜಿದಾರರ ಪರವಾಗಿ ಅಥವಾ ಎದುರುದಾರರ ಪರವಾಗಿ ಅಂದರೆ ಒಂದು ಕಡೆಯವರ ಪರವಾಗಿ ಮಾತ್ರ ಆದೇಶವಾಗುತ್ತದೆ. ಆದ್ದರಿಂದ ತಮ್ಮ ವಿರುದ್ಧದ ಆದೇಶದ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ. ಆದರೆ, ಇ- ಲೋಕ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇಲ್ಲಿ ಎರಡು ಕಡೆಯ ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಸೌಹಾರ್ದಯುತವಾಗಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ಅವರ ಅಮೂಲ್ಯವಾದ ಸಮಯ, ಶ್ರಮ ಮತ್ತು ಹಣದ ಉಳಿತಾಯವಾಗುತ್ತದೆ.
ಇದಲ್ಲದೇ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನ್ಯಾಯಾಲಯದ ಶುಲ್ಕವು ಸಹ ನಿಯಮಾನುಸಾರ ಮರುಪಾತಿಗೊಳ್ಳುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಮೆಗಾ ಇ-ಲೋಕ ಅದಾಲತ್ ಸದುಪಯೋಗವನ್ನು ಪಕ್ಷಗಾರರು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಹೊಂದಿದ ಸಾರ್ವಜನಿಕರು ಪಕ್ಷಗಾರರಿಗೆ ತಿಳುವಳಿಕೆ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕೊಳ್ಳಲು ಇಚ್ಚಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳಿಗೆ ಆನ್‍ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್.ಎಂ.ಎಸ್., ವಾಟ್ಸಪ್, ಎಲೆಕ್ಟ್ರಾನಿಕ್ ಮೋಡ್ ಮೂಲಕ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಂಬಂಧಪಟ್ಟ ಉಚ್ಛ ನ್ಯಾಯಾಲಯ, ಕಾನೂನು ಸೇವಾ ಸಮಿತಿಯನ್ನು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕ ಕಾನೂನು ಸೇವಾ ಸಮಿತಿಗಳನ್ನು ಅಥವಾ ಖಾಯಂ ಜನತಾ ನ್ಯಾಯಾಲಯಗಳನ್ನು ಆನ್‍ಲೈನ್, ವಿಡಿಯೋ ಕಾನ್ಫರೆನ್ಸ್. ಇ-ಮೇಲ್, ಎಸ್.ಎಂ.ಎಸ್., ವಾಟ್ಸ್‍ಪ್, ಎಲೆಕ್ಟ್ರಾನಿಕ್ ಮೋಡ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ