ಎತ್ತಿನಹೊಳೆಯ ನೀರು ಹಂಚಿಕೆ : ತುಟಿ ಬಿಚ್ಚದ ಜನಪ್ರತಿನಿಧಿಗಳು

ತಿಪಟೂರು :

    ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರಿಗೆ ನೀರಿನ ಹಂಚಿಕೆಯಾಗಿಲ್ಲ. ಜೊತೆಗೆ ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳಿಗೂ ಅರ್ಧಚಂದ್ರವೇ! ಸಣ್ಣ ನೀರಾವರಿ ಸಚಿವರು ತುಮಕೂರಿನವರೇ ಅಗಿದ್ದರೂ, ತುಮಕೂರು ತಾಲೂಕುಗಳಿಗೆ ಮೋಸವಾಗಿದೆ . ಮಂತ್ರಿಗಳಾಗಲೀ, ಶಾಸಕರಾಗಲೀ ನೀರಿನ ಹಂಚಿಕೆಯ ಬಗ್ಗೆ ಮಾತನಾಡದಿರುವುದು ದೊಡ್ಡ ದುರಂತ ಎಂದು ಎತ್ತಿನ ಹೊಳೆ ಹೋರಾಟ ಸಮಿತಿಯ ಅಧ್ಯಕ್ಷ ತಿಮ್ಮಲಾಪುರ ದೇವರಾಜು ಆರೋಪಿಸಿದ್ದಾರೆ.

    ಇಂದು ಎ.ಪಿ.ಎಂ.ಸಿ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ಯೋಜನೆ ಘೋಷಣೆಯಾದಾಗಿನಿಂದಲೂ ತಿಪಟೂರು ತಾಲೂಕಿಗೆ ನೀರಿನ ಹಂಚಿಕೆಯಾಗಬೇಕೆಂದು ಒತ್ತಾಯಿಸಿ ಹೋರಾಟಗಳನ್ನು ನಡೆಸಲಾಗಿದೆ .ಎತ್ತಿನಹೊಳೆ ಹೋರಾಟ ಸಮಿತಿಯ ನಿರಂತರ ಪ್ರಯತ್ನದಿಂದಾಗಿ ‘ನೀರಿನ ಹಂಚಿಕೆಯಾಗಿದೆ’, ‘ತಿಪಟೂರಿಗೆ ನೀರು ಸಿಗುತ್ತದೆ’ ಎನ್ನುವ ಮೂಗಿಗೆ ತುಪ್ಪ ಸವರುವ ಮಾತುಗಳು ಕೇಳಿ ಬರುತ್ತಿದೆಯೇ ಹೊರತು ಇದುವರೆಗೂ ಅಧಿಕೃತ ಆದೇಶ ಬಂದಿಲ್ಲ. ಎತ್ತಿನಹೊಳೆಯ ಕಾಲುವೆ ತಿಪಟೂರಿನ ಮೇಲೆ ಹಾದು ಹೋಗುತ್ತಿದ್ದು, 1000 ಎಕರೆಗೂ ಹೆಚ್ಚು ಭೂಮಿ ಸ್ವಾಧೀನವಾಗುತ್ತಿದೆ.

   ಆದರೂ ಈ ಇನ್ನುಭೂ ಪರಿಹಾರಕ್ಕೆ ಸಂಬಂಧಪಟ್ಟಂತೆ ರೈತರ ಆತಂಕಗಳನ್ನು ನಿವಾರಿಸುವ ದಿಕ್ಕಿನಲ್ಲಿಯಾವ ಪ್ರಯತ್ನವೂ ಅಧಿಕಾರಿಗಳಿಂದ ಹಾಗೂ ಜಿಲ್ಲಾಡಳಿತದಿಂದ ನಡೆದಿಲ್ಲ. ದುರಂತವೆಂದರೆ, ರಾಜ್ಯ ಸರ್ಕಾರ ಕೊರೊನಾ ಲಾಕ್‍ಡೌನ್ ಮಧ್ಯೆಯೂ ಕಾಮಗಾರಿಯನ್ನು ಬಿರುಸಿನಿಂದ ನಡೆಸಲು ಸತತ ಪ್ರಯತ್ನ ನಡೆಸುತ್ತಿದೆ.ಈಗಾಗಲೇ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಅರಸೀಕರೆ ತಾಲೂಕುಗಳಲ್ಲಿ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.ಆದರೆ ಅಲ್ಲಿನ್ನೂ ಸಂತ್ರಸ್ತರಿಗೆ ಪರಿಹಾರಗಳನ್ನೇ ಕೊಟ್ಟಿಲ್ಲ. ಈಗ ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ತುಮಕೂರು ಹಾಗೂ ಕೊರಟಗೆರೆ  ತಾಲೂಕುಗಳಲ್ಲಿ ಸಂತ್ರಸ್ತರ ಅಹವಾಲು ಸಹ ಆಲಿಸದೆ ಸರ್ವಾಧಿಕಾರಿ ಧೋರಣೆಯಿಂದ ಭೂ ಸ್ವಾಧೀನ ಹಾಗೂ ಕಾಮಗಾರಿಯನ್ನು ನಡೆಸುತ್ತಿರುವುದು ದೇಶದ ಪ್ರಜಾಪ್ರಭುತ್ವದ ಅಣಕವೇ ಸರಿ ಎಂದರು.

      ಎತ್ತಿನ ಹೊಳೆ ಹೋರಾಟ ಸಮಿತಿಯ ಕಾರ್ಯದರ್ಶಿ ಸ್ವಾಮಿ ಮಾತನಾಡಿಭೂ ಪರಿಹಾರಕ್ಕಾಗಿ ನಡೆದ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಹಾಗೂ ಎತ್ತಿನಹೊಳೆ ಹೋರಾಟ ಸಮಿತಿ ಎತ್ತಿದ ಪ್ರಶ್ನೆಗಳನ್ನು ಗಮನಿಸಿದ ಸರ್ಕಾರ ಮತ್ತು ನೀರಾವರಿ ಇಲಾಖೆಗಳು ಭೂ ಸ್ವಾಧೀನದಲ್ಲಿ ಪರಿಹಾರ, ಪಾರದರ್ಶಕತೆ, ಪುನರ್ವಸತಿ, ಪುನವ್ರ್ಯವಸ್ಥೆಯ 2013ರ ಕಾಯ್ದೆಯನ್ನು ಪಾಲಿಸದೆ ತ್ರಿಪಕ್ಷೀಯ ಒಪ್ಪಂದದ ಅಡ್ಡದಾರಿ ಹಿಡಿದಿರುವುದು ಅತ್ಯಂತ ಖಂಡನೀಯ. ಭೂಮಿಯನ್ನು, ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ರೈತರಿಗೆ ನ್ಯಾಯ ಬದ್ಧವಾದ ಪರಿಹಾರ ಕೊಡುವ ಬದಲು, ಒಂದಿಷ್ಟು ಪುಡಿಗಾಸನ್ನು ಬಿಸಾಕಿ, ಕಾಮಗಾರಿಯನ್ನು ಮುಗಿಸುವ ಕಂಟ್ರಾಕ್ಟರ್ ಪ್ರೇಮಿ ಒಪ್ಪಂದಗಳಿಗೆ ಮೊರೆ ಹೋಗಿದ್ದಾರೆ.

    ಎತ್ತಿನಹೊಳೆ ಯೋಜನೆಯಲ್ಲಿ ಸ್ವಾಧೀನಗೊಳ್ಳುವ ಭೂಮಿಗೆ ಪರಿಹಾರ ಕೊಡುವಷ್ಟು ಹಣವನ್ನೇ ಬಿಡುಗಡೆ ಮಾಡಿಲ್ಲ. ಆದ್ದರಿಂದಲೇ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಭೂ ಸಂತ್ರಸ್ತರಿಗೆ ಪರಿಹಾರ ಮಾತ್ರ ಕನ್ನಡಿ ಗಂಟಾಗಿದೆ ಎಂದ ಅವರು ಹಾಸನ ಜಿಲ್ಲೆಯಲ್ಲಿ ತ್ರಿಪಕ್ಷೀಯ ಒಪ್ಪಂದದ ಹೆಸರಿನಲ್ಲಿ (ಭೂ ಮಾಲೀಕರು,ಗುತ್ತಿಗೆದಾರರು ಹಾಗೂ ಸರ್ಕಾರ) ರೈತರಿಗೆ ಪುಡಿಗಾಸಿನ ಬೆಳೆನಷ್ಟ ಪರಿಹಾರನೀಡಿ, ಕಾಮಗಾರಿ ಮುಗಿಸಲಾಗಿದೆ.ಲಾಕ್‍ಡೌನ್ ಮಧ್ಯೆ ಜಿಲ್ಲೆಗೆ ಭೇಟಿ ನೀಡಿದ್ದ ನೀರಾವರಿ ಸಚಿವರು, ಸಂತ್ರಸ್ತರಿಗೆ ನೀಡಬೇಕಿದ್ದ ಪರಿಹಾರ ಹಾಗೂ ನೀರು ಹಂಚಿಕೆ ಗೊಂದಲದ ಬಗ್ಗೆ ಕಿಂಚಿತ್ತು ಮಾತನಾಡದೆ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಿದ್ದು ಸೋಜಿಗವೇ ಸರಿ .

       ಈಗಾಗಲೇ ಗುಬ್ಬಿ ತಾಲೂಕಿನ ಹಲವೆಡೆ ಇದೇ ತ್ರಿಪಕ್ಷೀಯ ಹೆಸರಿನಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ರೈತರು ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ.ತರಾತುರಿಯಲ್ಲಿ ಯೋಜನೆ ಮುಗಿಸಲು ಮುಂದಾಗಿರುವ ಸರ್ಕಾರ ಬೃಹತ್‍ ಯೋಜನೆಗಾಗಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರ ಸಮಸ್ಯೆಗಳನ್ನು ಮಾತ್ರ ಕೇಳುತ್ತಿಲ್ಲ.

      ಈ ಭಾಗದ ಸಂತ್ರಸ್ತರಿಗೆ ಸಿಗುವ ಪರಿಹಾರ ಹಾಗೂ ನೀರಿನ ಲಭ್ಯತೆ ಬಗ್ಗೆ ಮಾಹಿತಿ ನೀಡದೆ ರೈತರನ್ನು ಕತ್ತಲ್ಲಲ್ಲಿಟ್ಟಿದೆ.ಕಾನೂನು ಬದ್ಧ ಭೂ ಸ್ವಾಧೀನ ವಿಳಂಬವಾಗಲಿದೆ ಎಂದು ಹೇಳುತ್ತಾ ರೈತರನ್ನು ವಂಚಿಸುತ್ತಿದೆ.ಇದೇ ಗತಿ ತಿಪಟೂರಿನ ರೈತರಿಗೂ ಬರುತ್ತಿದೆ. ಹಳ್ಳಿಗಳಲ್ಲಿ ಸರ್ಕಾರದ ಹಾಗೂ ಗುತ್ತಿಗೆದಾರರ ಏಜೆಂಟರು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆದ್ದರಿಂದ ಭೂ ಸಂತ್ರಸ್ತರು ಎಚ್ಚರಿಕೆಯಿಂದ ರಬೇಕು.

     ಭೂ ಪರಿಹಾರದ ಬಗ್ಗೆ ಸಂತಸ್ತರಜೊತೆ ಸಭೆ ನಡೆಸಲು ರೈತರು ಒತ್ತಾಯಿಸುತ್ತಿದ್ದರೂ,ತಿಪಟೂರಿನಲ್ಲಿ ಸರ್ವೆ ಮಾಡುವ ಸಂದರ್ಭದಲ್ಲಿ ಭರವಸೆ ಕೊಟ್ಟರೂ ಇದುವರೆಗೂ ಅದರ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು
ಈ ನಿಟ್ಟಿನಲ್ಲಿ ಭೂ ಸ್ವಾಧೀನ ಕಾಯ್ದೆಯಂತೆ ರೈತರಿಗೆ ಇರುವ ಹಕ್ಕುಗಳು ಪರಿಹಾರ-ಸೌಲಭ್ಯಗಳನ್ನು ನೀಡಬೇಕು, ನೀರು ಹಂಚಿಕೆ ಬಗ್ಗೆ ದಾಖಲಾತಿ ನೀಡಬೇಕು,ರೈತರ ವಿರೋಧಿ ತ್ರಿಪಕ್ಷೀಯ ಒಪ್ಪಂದರದ್ದು ಮಾಡಬೇಕು ಹಾಗೂ ಇನ್ನಿತರ ಹಕ್ಕೊತ್ತಾಯಗಳನ್ನು ಈಡೇರಿಸ ಬೇಕೆಂದು ಸರ್ಕಾರವನ್ನು ಹಾಗೂ ವಿಶ್ವೇಶ್ವರಯ್ಯ ನೀರಾವರಿ ನಿಗಮವನ್ನು ಆಗ್ರಹಿಸುತ್ತೇವೆ.ತಿಪಟೂರಿನ ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಉನ್ನತ ಹಂತದ ಹೋರಾಟವನ್ನು ಕೈ ಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎತ್ತಿನಹೊಳೆ ಹೋರಾಟ ಸಮಿತಿಯವರು ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link