ವಸಂತನರಸಾಪುರ : ಅನೈರ್ಮಲ್ಯದಿಂದ ಕುರಿಗಳ ಸಾವು : ಹೊಣೆ ಯಾರು?

ತುಮಕೂರು:

ವಿಶೇಷ ವರದಿ:  ಸಾ.ಚಿ.ರಾಜಕುಮಾರ

      ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ವಿಷಮಿಶ್ರಿತ ನೀರು ಕುಡಿದು 23ಕ್ಕೂ ಹೆಚ್ಚು ಕುರಿಗಳು ಇತ್ತೀಚೆಗೆ ಮೃತಪಟ್ಟವು. ಅಲ್ಲಿನ ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರು ಅಲ್ಲಲ್ಲಿ ಗುಂಡಿಗಳಲ್ಲಿ ಸಂಗ್ರಹಗೊಂಡು ಈ ನೀರನ್ನು ಕುಡಿದ ಕುರಿಗಳು ಸಾವನ್ನಪ್ಪಿವೆ ಎಂಬ ಆರೋಪಗಳು ಬಲವಾಗಿವೆ. ಇಷ್ಟಾದರೂ ಈ ಬಗ್ಗೆ ವರದಿ ಕೇಳುವುದಾಗಲಿ, ಅನೈರ್ಮಲ್ಯ ಉಂಟು ಮಾಡುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸುವ ಯಾವುದೇ ಕ್ರಮಗಳು ಆಡಳಿತಾತ್ಮಕವಾಗಿ ಕಂಡುಬರುತ್ತಿಲ್ಲ. ಜನಪ್ರತಿ ನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ.

       ಮೊನ್ನೆ 23 ಕುರಿಗಳು ಮರಣ ಹೊಂದಿರುವುದು ಒಂದು ಬಹಿರಂಗಗೊಂಡಿರುವ ಉದಾಹರಣೆಯಷ್ಟೆ. ಸಾಕಷ್ಟು ಜಾನುವಾರುಗಳು ಇಂತಹ ಕಲುಷಿತ ನೀರು ಕುಡಿದು ರೋಗರುಜಿನಗಳಿಗೆ ತುತ್ತಾಗುತ್ತಿರುವ ಬಗ್ಗೆ ಸ್ಥಳೀಯ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಕೈಗಾರಿಕೆಗಳು ಹೊರಸೂಸುವ ವಿಷಾನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ಕಲುಷಿತ ನೀರು ಹೊರಬಂದು ಭೂಮಿ ಸೇರುತ್ತಿದೆ. ಅಲ್ಲಲ್ಲಿ ಗುಂಡಿಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು ಅದನ್ನು ಕುಡಿಯುವ ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ. ಅಸ್ತಮಾ, ಉಬ್ಬಸ, ಕ್ಯಾನ್ಸರ್, ಕಾಲರಾ, ಅತಿಸಾರ, ಕಾಮಾಲೆ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಭಾರತೀಯ ಕೃಷಿಕ ಸಮಾಜದ ಮುಖಂಡರು ಆರೋಪಿಸಿದ್ದಾರೆ.

      ಕೆಲವು ಕೈಗಾರಿಕೆಗಳು ನಿಯಮಗಳನ್ನು ಪಾಲಿಸುತ್ತಿರಬಹುದು. ಇನ್ನು ಕೆಲವು ನಿಯಮಗಳನ್ನು ಉಲ್ಲಂಘಿಸುತ್ತಿವೆ. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಕಾರ್ಯ ಆಗಬೇಕು. ಆದರೆ ಪರಿಸರಕ್ಕೆ ಹರಿಯಬಿಡುತ್ತಿರುವುದರಿಂದ ಕೆರೆಕಟ್ಟೆಗಳಿಗೂ ತ್ಯಾಜ್ಯದ ನೀರು ಹರಿದು ಮಲೀನಗೊಳ್ಳುತ್ತಿರುವ ಆತಂಕ ಎದುರಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ದೂರು ಸಲ್ಲಿಸಿದ್ದಾರೆ. ಸ್ಥಳೀಯರ ಆತಂಕ ನಿವಾರಿಸುವ ಕಾರ್ಯ ಆಡಳಿತ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಆಗಬೇಕು. ಆದರೆ ಅಂತಹ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂಬ ದೂರುಗಳು ಅಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿವೆ.

ನಷ್ಟ ಭರಿಸುವವರು ಯಾರು?

      ಶಿರಾ ತಾಲ್ಲೂಕಿನ ತರೂರು ಗೊಲ್ಲರಹಟ್ಟಿಯ ಸಿದ್ಧಗಂಗಯ್ಯ ಅವರಿಗೆ ಸೇರಿದ 7 ಕುರಿಗಳು, ಚಿಕ್ಕದಾಸರಹಳ್ಳಿ ಗಂಗಮ್ಮ ಅವರಿಗೆ ಸೇರಿದ 16 ಕುರಿಗಳು ಸೇರಿ ಒಟ್ಟು 23 ಕುರಿಗಳು ಸಾವನ್ನಪ್ಪಿವೆ. ಕುರಿಗಾಹಿಗಳಾದ ಇವರು ಎಂದಿನಂತೆ ವಲಸೆ ಬಂದು ಹೋಗುವ ಕಾಯಕ ಇವರದ್ದು. ಮೇವು ಮತ್ತು ನೀರು ಸಿಗುವ ಕಡೆಗೆ ಕುರಿಗಳನ್ನು ಹೊಡೆದುಕೊಂಡು ಹೋಗಿ ಜೀವನ ನಡೆಸುವ ಕಷ್ಟ ಜೀವಿಗಳು ಇವರು. ಇವರ ಬದುಕೆ ಕುರಿ ಕಾಯುವ ವೃತ್ತಿ. ಅದರಿಂದಲೇ ಜೀವನ ನಡೆಸಬೇಕು. ಇಂತಹ ಕಷ್ಟ ಜೀವಿಗಳು ಜೋಪಾನವಾಗಿ ಸಾಕಿಕೊಂಡಿದ್ದ ಕುರಿಗಳು ಒಮ್ಮೆಲೆ ಅಸುನೀಗಿದವೆಂದರೆ ಅವರ ಸಂಕಷ್ಟ ಏನು ಎಂಬುದು ಇತರರಿಗೆ ಅರ್ಥವಾಗಬೇಕು.

      ಊರಿಂದ ಊರಿಗೆ ವಲಸೆ ಹೋಗಿ ಬದುಕು ಕಂಡುಕೊಳ್ಳುತ್ತಿದ್ದ ಕುರಿಗಾಹಿಗಳ ಕಷ್ಟ ಅರಿತು 2014 ರಿಂದ ಕಾಂಗ್ರೆಸ್ ಸರ್ಕಾರ ಅನುಗ್ರಹ ಯೋಜನೆ ಜಾರಿಗೆ ತಂದಿತ್ತು. ಆಕಷ್ಮಿಕ ಸಾವಿಗೀಡಾದ ಕುರಿಗಳಿಗೆ 3000 ರೂ. ಪರಿಹಾರ ನೀಡುವ ಯೋಜನೆ ಇದು. 2017-18 ರಲ್ಲಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಯಿತು. 5000 ರೂ.ಗಳವರೆಗೂ ಪರಿಹಾರ ನೀಡುವ ಅವಕಾಶ ಕಲ್ಪಿಸಲಾಗಿತ್ತು.

    ದುರಂತವೆಂದರೆ, ಕಳೆದ ಒಂದು ವರ್ಷದಿಂದ ಈ ಅನುಗ್ರಹ ಯೋಜನೆಯೇ ಸ್ಥಗಿತಗೊಂಡಿದೆ. ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ ಸೇರಿದಂತೆ ಕುರಿ, ಮೇಕೆಗಳು ಆಕಸ್ಮಿಕವಾಗಿ ಸಾವಿಗೀಡಾದರೆ ಅದು ಅವರ ಹಣೆಬರಹ ಎಂಬಂತಾಗಿದೆ. ಸರ್ಕಾರದಿಂದ ಯಾವುದೇ ಸೌಲಭ್ಯುಗಳು ಇಲ್ಲವಾಗಿವೆ.

    ಕೊರೊನಾ ಲಾಕ್‍ಡೌನ್ ನಂತರ ಹಿಂದುಳಿದ ಸಮುದಾಯದ ಬಹಳಷ್ಟು ಯುವಕರು ಊರು ಸೇರಿದ್ದಾರೆ. ಕೆಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಮತ್ತೆ ಕೆಲವರು ಹೈನುಗಾರಿಕೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಇದಾವುದೂ ಕೈ ಹಿಡಿಯದಂತಹ ಪರಿಸ್ಥಿತಿ ಗ್ರಾಮೀಣ ಸಮುದಾಯದಲ್ಲಿ ನಿರ್ಮಾಣವಾಗಿದ್ದು, ಯುವ ಜನತೆ ಮತ್ತೆ ಪಟ್ಟಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ಗ್ರಾಮೀಣ ಸಮುದಾಯದಲ್ಲಿ ಇದ್ದು ಬದುಕು ರೂಪಿಸಿಕೊಳ್ಳುವಂತಹ ವ್ಯವಸ್ಥಿತ ಯೋಜನೆಗಳ ಬಗ್ಗೆ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಚಿಂತಿಸದೆ ಇರುವುದು ನಿರುದ್ಯೋಗಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

    ಕುರಿ ಮತ್ತು ಮೇಕೆ ಸಾಕಾಣಿಕೆಯನ್ನೆ ನಂಬಿ ಅದನ್ನೇ ಬದುಕನ್ನಾಗಿ ಸ್ವೀಕರಿಸಿರುವ ಕುಟುಂಬಗಳು ಸಾಕಷ್ಟಿವೆ. ಆದರೆ ಇವರ ಕೂಗು ಜನಪ್ರತಿನಿಧಿಗಳು ಮತ್ತು ಸರ್ಕಾರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರಿಗೆ ಯಾವುದೇ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಅಲೆಮಾರಿಗಳಾಗಿ ಬದುಕು ಸವೆಸುತ್ತಲೇ ಇರುವ, ಇನ್ನು ಕೆಲವರು ತಾವಿದ್ದ ಕಡೆಗಳಲ್ಲಿಯೇ ಜಾನುವಾರು ಸಾಕಾಣಿಕೆ ಮಾಡಿ ಕೆಲವೊಮ್ಮೆ ಲಾಭ, ಮತ್ತೆ ಕೆಲವೊಮ್ಮೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇದೆ.

    ವಸಂತನರಸಾಪುರದ ಒಂದು ಉದಾಹರಣೆಯನ್ನೇ ತೆಗೆದುಕೊಂಡರೆ 23 ಕುರಿಗಳು ಸತ್ತು ಹೋಗಿದ್ದು, ಪರಿಹಾರ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸರ್ಕಾರದಿಂದ ಯೋಜನೆಗಳು ಇಲ್ಲ. ಕೈಗಾರಿಕೆಗಳ ಮಾಲೀಕರು ನಾವು ಹೊಣೆಗಾರರಲ್ಲ ಎಂದು ಕೈ ಎತ್ತಬಹುದು. ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಹೋದರೆ ಕಷ್ಟ ಜೀವಿಗಳ ನೋವಿಗೆ ಸ್ಪಂದಿಸುವವರು ಯಾರು?

    ಕಲುಷಿತ ನೀರು ಸೇವನೆಯಿಂದಲೇ ಕುರಿಗಳು ಸಾವನ್ನಪ್ಪಿವೆ. ಅವರಿಗೆ ನ್ಯಾಯೋಚಿತವಾಗಿ ಕೈಗಾರಿಕೆಗಳವರು ಪರಿಹಾರ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ನಾವು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲು ಸಿದ್ಧ ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಕೋಡಿಹಳ್ಳಿ ಜಗದೀಶ್.

   ಬಜೆಟ್‍ನಲ್ಲಿ ಲಕ್ಷಾಂತರ ಕೋಟಿ ರೂ.ಗಳನ್ನು ವಿವಿಧ ಬಾಬತ್ತುಗಳಿಗೆ ಮೀಸಲಿರಿಸಲಾಗುತ್ತದೆ. ಆದರೆ ಜಾನುವಾರುಗಳು, ಕುರಿ, ಮೇಕೆ ಸಾಕುವ ಕುರಿಗಾಹಿಗಳಿಗೆ ಇಂತಿಷ್ಟು ಪರಿಹಾರದ ಹಣ ಎಂದು ಬಜೆಟ್‍ನಲ್ಲಿಯೇ ಮೀಸಲಿಡುವ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ರೈತ ಮುಖಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link