ತುಮಕೂರು
ಕುಣಿಗಲ್ ತಾಲ್ಲೂಕಿನಲ್ಲಿ ಮಾರ್ಚ್ 12 ರಂದು ಮಹಿಳೆಯನ್ನು ಅಡ್ಡಗಟ್ಟಿ ಹಣ ಮತ್ತು ಆಭರಣ ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ತಾಲ್ಲೂಕು ಕೊಪ್ಪ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರಮ್ಯ ಅವರು ಮಾ.12 ರಂದು ಸಂಜೆ 7.20 ರ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಕುಣಿಗಲ್‍ನಿಂದ ಯಡಿಯೂರಿನ ಕಡೆಗೆ ತೆರಳುತ್ತಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಎಂಪೈರ್ ಹೋಟೆಲ್ ಮುಂಭಾಗ ಹಿಂದಿನಿಂದ ಬಂದ ಮೂವರು ಅಪರಿಚಿತರು ರಮ್ಯ ಅವರನ್ನು ಅಡ್ಡಗಟ್ಟಿ, ಅವರ ಬಳಿ ಇದ್ದ ಆಧಾರ್ ಕಾರ್ಡ್, ಆರ್.ಸಿ. ಕಾರ್ಡ್, 50 ಸಾವಿರ ರೂ. ನಗದು, ಒಂದು ಮೊಬೈಲ್, ಒಂದು ಟ್ಯಾಬ್ ಮತ್ತು ಇತರೆ ವಸ್ತುಗಳಿದ್ದ ಒಂದು ವ್ಯಾನಿಟಿ ಬ್ಯಾಗನ್ನು ಕಸಿದುಕೊಂಡಿದ್ದರು. ಅಲ್ಲದೆ, ಪಿರ್ಯಾದಿಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ದ್ವಿಚಕ್ರ ವಾಹನದ ಕೀ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರನ್ನು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕುಣಿಗಲ್ ಉಪ ವಿಭಾಗದ ಡಿಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ನೇತೃತ್ವದಲ್ಲಿ ಅಮೃತೂರು ಪಿಎಸ್‍ಐ ಮತ್ತು ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಈ ತಂಡವು ಮೂವರು ಆರೋಪಿಗಳನ್ನು ಪತ್ತೆ ಹೆಚ್ಚಿದೆ.
ಬೆಂಗಳೂರಿನ ಸುಂಕದಕಟ್ಟೆಯ ರೇವಂತ್ ರಾವ್, (ಸ್ವಂತ ಊರು ತಟ್ಟಹಳ್ಳಿ ಗ್ರಾಮ, ಭದ್ರಾವತಿ ತಾಲ್ಲೂಕು) ನೆಲಮಂಗಲ ತಾಲ್ಲೂಕು ಸೀಗೆಪಾಳ್ಯ ಗೊಲ್ಲರಹಟ್ಟಿಯ ಮುರಳಿಕೃಷ್ಣ, ಗುಬ್ಬಿ ತಾಲ್ಲೂಕು ಪೆಂಡಾರನಹಳ್ಳಿಯ ಹೇಮಂತ್ ಬಂಧಿತ ಆರೋಪಿಗಳು. ಆರೋಪಿಗಳಿಂದ 40 ಗ್ರಾಂ ತೂಕದ ಮಾಂಗಲ್ಯ ಸರ, ಒಂದು ಟ್ಯಾಬ್ ಮತ್ತು ಒಂದು ಮೊಬೈಲನ್ನು, 9 ಸಾವಿರ ರೂ. ನಗದು ಹಣವನ್ನು, ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ