ಚಳ್ಳಕೆರೆ : ಕರ್ನಾಟಕ ಬಂದ್ ಯಶಸ್ವಿ

ಚಳ್ಳಕೆರೆ

       ಕಳೆದ 50 ವರ್ಷಗಳಿಂದ ರಾಜ್ಯದ ರೈತರ ಪರವಾಗಿ ಪಾದಯಾತ್ರೆ ನಡೆಸಿ, ಹೋರಾಟ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತ ಸಮುದಾಯಕ್ಕೆ ಮಾರಕವಾಗುವಂತಹ ಭೂ ಸುಧಾರಣೆ, ಎಪಿಎಂಸಿ ಮತ್ತು ಖಾಸಗೀಕರಣದಂತಹ ನಿರ್ಣಾಯಗಳನ್ನು ಕೈಗೊಳ್ಳುವ ಮೂಲಕ ತಾವು ಸಹ ರೈತ ವಿರೋಧಿ ಮುಖ್ಯಮಂತ್ರಿ ಎಂದು ಸಾಭೀತು ಪಡಿಸಿದ್ದಾರೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರಾಜ್ಯ ಸರ್ಕಾರದ ತೀರ್ಮಾನವನ್ನು ಕಡಾತುಂಡವಾಗಿ ಖಂಡಿಸಿದರು.

     ಅವರು, ಸೋಮವಾರ ಇಲ್ಲಿನ ನೆಹರೂ ಸರ್ಕಲ್‍ನಲ್ಲಿ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ನಡೆಸಿದ್ದ ಮುಷ್ಕರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪಾಲ್ಗೊಂಡು ಮಾತನಾಡಿದರು. ಹಸಿರು ಶಾಲನ್ನು ಹೊದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪನವರಿಂದ ರಾಜ್ಯದ ಕೋಟ್ಯಾಂತರ ರೈತರು ತಮ್ಮ ಬಹುವರ್ಷಗಳ ಕನಸು ನನಸಾಗುತ್ತದೆ ಎಂಬ ಆಶಾ ಭಾವನೆಯನ್ನು ಹೊಂದಿದ್ದರು.

    ಆದರೆ, ಇಂದು ಯಾವ ರೈತ ಪ್ರಮುಖರನ್ನು ಸಂಪರ್ಕಿಸದೇ ಏಕಮುಖವಾಗಿ ಶಾಸಕರನ್ನು ಸಹ ಅಲಕ್ಷಿಸಿ ವಿಧಾನಸೌಧದಲ್ಲಿ ಪರಿಪೂರ್ಣವಾಗಿ ಚರ್ಚೆ ನಡೆಸಿದೆ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಜಾರಿಗೆ ತಂದಿದ್ಧಾರೆ. ಒಂದು ಕರೆ ಕೊರೋನಾ ವೈರಾಣುವಿನಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದರೆ ರಾಜ್ಯದ ರೈತರ ಬದುಕು ಸಹ ಕತ್ತಲಮಯವಾಗುತ್ತಿದೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಮಂತ್ರಿಯಾಗಿ ಅಧಿಕಾರ ಬಯಸಿದರೆ ವಾಮಮಾರ್ಗದ ಮೂಲಕ ಅಧಿಕಾರ ಪಡೆಯಬಹುದಿತ್ತು. ಆದರೆ ನಾನು ಎಂದೂ ಇಂತಹ ಕಾರ್ಯಗಳಿಗೆ ಕೈಹಾಕದೆ ಸದಾಕಾಲ ಬಡವರ ಕಷ್ಟಕ್ಕೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿಯೇ ಮುಂದುವರೆಯುವೆ ಎಂದರು.

      ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಭೂ ಸುಧಾರಣೆ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದೇ ಶಿವಮೊಗ್ಗ ಜಿಲ್ಲೆಯಿಂದ. ಆ ಜಿಲ್ಲೆಯ ಅಂದಿನ ಹಿರಿಯ ರಾಜಕಾರಣಿಗಳಾದ ಕಾಗೋಡು ತಿಮ್ಮಪ್ಪ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ, ಶಾಂತವೇರಿ ಗೋಪಾಲಗೌಡ ಈ ಬಗ್ಗೆ ಹೋರಾಟ ಪ್ರಾರಂಭಿಸಿದ್ದರು. ಅಂದು ಹೋರಾಟ ನಡೆಸಿದ ಬಿ.ಎಸ್.ಯಡಿಯೂರಪ್ಪ ಇಂದು ತದ್ವಿರುದವಾಗಿ ನಡೆದುಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿಯವರೂ ಸಹ ಅಸತ್ಯವನ್ನು ನುಡಿಯುವ ಮೂಲಕ ರಾಜ್ಯದ ರೈತರ ಹಿತವನ್ನು ಮರೆತಿದ್ದಾರೆಂದರು.

     ರೈತ ಸಂಘದ ರಾಜ್ಯಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರಿಗೆ ಸರ್ಕಾರವನ್ನು ಅಧಿಕಾರಕ್ಕೆ ತರುವ ಮತ್ತು ಅದನ್ನು ಕೆಳಗಿಳಿಸುವ ಎರಡೂ ತಂತ್ರಗಳು ಗೊತ್ತು. ಹಿಂದಿನ ಸರ್ಕಾರಗಳು ರೈತರಿಗೆ ಸ್ಪಂದಿಸದ ಕಾರಣ ಅಧಿಕಾರ ಕಳೆದುಕೊಂಡಿವೆ. ದೇಶದ ಜನರಿಗೆ ಅನ್ನಕೊಡುವ ರೈತನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾಳಿರುವ ನಿರ್ಲಕ್ಷ ಅಕ್ಷಮ್ಯಅಪರಾಧವೆಂದರು.

    ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ರೈತರ ಹೋರಾಟ ನಿಲ್ಲದು. ಎರಡೂ ತಿದ್ದುಪಡಿಗಳನ್ನು ಸರ್ಕಾರ ವಾಪಾಸ್ ಪಡೆಯುವ ತನಕ ಪ್ರತಿಭಟನೆ ಮುಂದುವರೆಯಲಿದೆ. ಸರ್ಕಾರ ರೈತರಿಗೆ ಉಪಯುಕ್ತವಾಗುವ ಯಾವುದೇ ಕಾಯ್ದೆ ಜಾರಿಗೆ ತಂದಿಲ್ಲ. ಈರುಳ್ಳಿ, ಶೇಂಗಾ ಬೆಳೆ ನೆಲಕಚ್ಚಿವೆ ಎಂದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಮರ್ಥರಾಯ, ದಲಿತ ಸಂಘಟನೆಯ ಆರ್.ವೀರಭದ್ರಿ, ಸಮಾಜ ಸೇವಕ ಎಚ್.ಎಸ್.ಸೈಯದ್, ಕಾರ್ಮಿಕ ಸಂಘದ ಮುಖಂಡರಾದ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಟಿ.ತಿಪ್ಪೇಸ್ವಾಮಿ, ಪರಸಪ್ಪ, ಪ್ರಸನ್ನಕುಮಾರ್ ಮುಂತಾದವರು ಮಾತನಾಡಿದರು. ಪ್ರವಾಸಿ ಮಂದಿರದಿಂದ ಮೆರವಣಿಗೆ ಪ್ರಾರಂಭವಾಗಿ ನೆಹರೂ ವೃತ್ತ ತಲುಪಿತು. ಡಿವೈಎಸ್ಪಿ ಕೆ.ವಿ.ಶ್ರೀಧರ್ ಸೂಕ್ತಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link