ಕೊರಟಗೆರೆ
ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಯನ್ನು ಸುಗ್ರೀವಾಜ್ಞೆಗಳ ಮೂಲಕ ರೂಪಿಸಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಸೆ.28 ರಂದು ಕರೆದಿದ್ದ ಕರ್ನಾಟಕ ಬಂದ್‍ಗೆ ಕೊರಟಗೆರೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಿ ಬೆಂಬಲ ನೀಡುವುದರೊಂದಿಗೆ ಬಂದ್ ಯಶಸ್ವಿಯಾಗಿದೆ.
ವಿವಿಧ ರೈತ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಪ್ರಧಾನ ರಸ್ತೆಯ ಮೂಲಕ ಮೆರವಣಿಗೆಯೊಂದಿಗೆ ಹೊರಟು, ಎಸ್‍ಎಸ್‍ಆರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ಬಗೆ ಘೋಷಣೆಗಳನ್ನು ಕೂಗಿ, ತಕ್ಷಣ ರೈತರಿಗೆ ಮಾರಕವಾಗಿರುವ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಪ್ರತಿ ಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಂತಿವೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತ ಮತ್ತು ಬಡ ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಒಡೆಯಲು ಮುಂದಾಗಿವೆ. ವಿದ್ಯುತ್ ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮನೆಗಳಿಗೆ ದೊರೆಯುತ್ತಿದ್ದ ಸೌಲಭ್ಯಗಳಿಗೆ ಕಡಿವಾಣ ಹಾಕಿ, ಹಣ ವಸೂಲಿ ಮಾಡಲು ಹೊರಟಿವೆ. ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿವೆ. ಕೆಲವು ಕೃಷಿ ಮಸೂದೆಗಳಿಗೆ ಕೇಂದ್ರ ಸರ್ಕಾರ ಅಂಗೀಕಾರ ಪಡೆಯಲು ಮಂಡಿಸಿರುವ ಎಲ್ಲಾ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯುವಂತೆ ಒತಾಯಿಸಿದರು.
ಹಸಿರು ಸೇನೆ ಕಾರ್ಯಾಧ್ಯಕ್ಷ ನಯಾಜ್‍ಅಹಮದ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಡ್ರಗ್ಸ್ ಬಗ್ಗೆ ಚರ್ಚೆ ಮಾಡಲು ಸಮಯವಿದೆ, ಆದರೆ ದೇಶದ ಎಲ್ಲಾ ಜನತೆಗೆ ಅನ್ನ ನೀಡುವ ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಸಮಯವಿಲ್ಲ ಎಂದು ಹೇಳುತ್ತಿರುವುದು ದೇಶದ ರೈತರ ದುರದೃಷ್ಟ ಎಂದು ವಿಷಾದ ವ್ಯಕ್ತ ಪಡಿಸಿದರು. ರೈತ ವಿರೋಧಿ ಕಾಯ್ದೆಯಿಂದ ರೈತ ಬೀದಿ ಪಾಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ರೈತರ ವಿರೋಧಿ ಕಾಯ್ದೆ ವಾಪಸ್ ಪಡೆಯದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡವುದಾಗಿ ಎಚ್ಚ್ಚರಿಕೆ ನೀಡಿದರು.
ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನವನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿ, ರೈತ ವಿರೋಧಿ ನೀತಿಯನ್ನು ಜಾರಿಗೆ ತರುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಿರುವ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಕೂಡಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಪ್ರಸನ್ನಕುಮಾರ್, ಕರವೇ ಅಧ್ಯಕ್ಷ ನಟರಾಜು, ರಂಗಹನುಮಯ್ಯ, ಅಗ್ರಹಾರ ನಾಗರಾಜು, ಲೋಕೇಶ್, ನಾಗರಾಜು, ಮಂಜುನಾಥ್, ಮಲ್ಲೇಶಯ್ಯ, ಶಬ್ಬೀರ್‍ಪಾಶ, ಅಲ್ತಾಫ್ ಹುಸೇನ್, ತಿರುಪತಯ್ಯ, ಫಾರೂಕ್, ಮೂಡ್ಲಪ್ಪ, ಲಕ್ಷ್ಮೀಜಗದೀಶ್, ಗೀತಾಸುಧೀಶ್, ಶಿವಣ್ಣ, ಶಶಿಧÀರ್, ಶಿವಕುಮಾರ್, ನಂಜುಂಡಯ್ಯ, ಹುನಮಂತರಾಯಪ್ಪ, ರವಿ, ಲಕ್ಷ್ಮನಾಯ್ಕ, ಚಿಕ್ಕಪ್ಪಯ್ಯ, ಜಯರಾಮಯ್ಯ, ವೀರಣ್ಣ, ಶಿವರಾಜ್, ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ