ರಣಹದ್ದುಗಳ ಸಂರಕ್ಷಣೆಗೆ ರಾಮನಗರದಲ್ಲಿ ಫೀಡಿಂಗ್ ಕ್ಯಾಂಪ್ ನಿರ್ಮಾಣ: ಸಚಿವ

ಬಳ್ಳಾರಿ

    ಪ್ರಸ್ತುತ ರಣಹದ್ದುಗಳ ಸಂತತಿ ಕ್ರಮೇಣ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ರಣಹದ್ದುಗಳ ಸಂತತಿ ರಕ್ಷಣೆ ಸಲುವಾಗಿ ರಾಮನಗರದಲ್ಲಿ ರೂ.2 ಕೋಟಿ ವೆಚ್ಚದಲ್ಲಿ ರಣಹದ್ದು ಫೀಡಿಂಗ್ ಕ್ಯಾಂಪ್ ನಿರ್ಮಿಸಲಾಗುತ್ತ್ತಿದೆ ಎಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದ್‍ಸಿಂಗ್ ಅವರು ಹೇಳಿದರು.

   ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸಮೀಪದ ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಆವರಣದಲ್ಲಿ ವಲಯ ಅರಣ್ಯ ಇಲಾಖೆ ಬಳ್ಳಾರಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ 66ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಅರಣ್ಯ ರಕ್ಷಣೆಯು ಸಾರ್ವಜನಿಕರಲ್ಲಿ ಸ್ವಯಂಕೃತವಾಗಿ ಮೂಡಬೇಕು, ಪ್ರಸ್ತುತ ದಿನಗಳಲ್ಲಿ ಪ್ರಕೃತಿಯನ್ನು ಕಾಣುವ ಹಾಗೂ ಬೆಳೆಸುವ ಮನಸ್ಥಿತಿ ಬದಲಾಗಬೇಕಿದೆ. ಇಲಾಖೆಯಲ್ಲಿ ಅಧಿಕಾರಿಗಳ ಮೇಲೆ ಆರೋಪ ಹೆಚ್ಚು, ಇದನ್ನು ಸವಾಲಾಗಿ ಸ್ವೀಕರಿಸಿ ಇಲಾಖೆಯ ಅಧಿಕಾರಿಗಳು ಅರಣ್ಯ ರಕ್ಷಣೆ ಜೊತೆ ಸಾರ್ವಜನಿಕರ ಜೊತೆ ಸ್ನೇಹ ಸಂಬಂಧ ಕೂಡ ಬೆಳೆಸಿಕೊಳ್ಳಬೇಕು. ಬಂಡೀಪುರ ಅರಣ್ಯ ಪ್ರದೇಶದ ಹಾಡಿಗಳಲ್ಲಿರುವ ಗುಂಪುಗಳೇ ಇಂದಿಗೂ ಅರಣ್ಯ ರಕ್ಷಣೆಯನ್ನು ಮಾಡುತ್ತಿವೆ. ಅವರ ಜೊತೆ ಎಲ್ಲರಿಗೂ ಅರಣ್ಯ ರಕ್ಷಣೆಯ ಕಲ್ಪನೆ ಹಾಗೂ ಕರ್ತವ್ಯ ಮೂಡಬೇಕು ಎಂದರು.

    ಅರಣ್ಯ ಸಚಿವನಾಗಿ ಸರಂಕ್ಷಣಾ ಸಪ್ತಾಹ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಬೇಕಿತ್ತು. ಅರಣ್ಯ ಸಚಿವನಾಗಿ ಮೊದಲ ಕಾರ್ಯಕ್ರಮವಾದ್ದರಿಂದ ಸ್ವಕ್ಷೇತ್ರದಲ್ಲೇ ನೆರವೇರಿಸುವ ಇಚ್ಚೆಯಿಂದ ತಾಲೂಕಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲಿಂಗರಾಜ ಅವರು ಮಾತನಾಡಿ ಬಾಪೂಜಿಯವರು ಪರಿಸರಕ್ಕೆ ಜೀವಸಂಕುಲದ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಶಕ್ತಿಯಿದೆ;ಆದರೆ ದುರಾಸೆಗಳನ್ನಲ್ಲ ಎಂದು ಹೇಳಿದ್ದಾರೆ.

     ಅರಣ್ಯ ಸಂರಕ್ಷಣೆ ಕೈಗೊಳ್ಳುವ ಹಾಗೂ ಈ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸುವ ಉದ್ದೇಶದಿಂದಲೇ 1952 ರಲ್ಲಿ ಈ ಸಪ್ತಾಹದ ಪರಿಕಲ್ಪನೆ ಶುರುವಾಗಿ, 1954ರಿಂದ ಕಾರ್ಯಾರಂಭವಾಗಿದೆ. ರಣಹದ್ದುಗಳ ರಕ್ಷಣೆಯೇ ಈ ವರ್ಷ ಸಪ್ತಾಹದ ಧ್ಯೇಯ ವಾಕ್ಯವಾಗಿದೆ. ಜಗತ್ತಿನ 97 ಭಾಗಭೂಮಿ ಮನುಷ್ಯರು ಆಕ್ರಮಿಸಿ ಉಳಿದ 3 ಭಾಗ ಮಾತ್ರ ವನ್ಯಜೀವಿಗಳು ಹೊಂದಿವೆ. ಪ್ರಸ್ತುತ ಮನುಷ್ಯನಿಗೆ ಬಾಧಿಸುತ್ತಿರುವ ಸಾಂಕ್ರಾಮಿಕ ರೋಗಗಳನ್ನು ಮನುಷ್ಯನೇ ಅತಿಯಾಸೆಯಿಂದ ತಂದುಕೊಂಡದ್ದಾಗಿದೆ. ಮನುಷ್ಯನು ತನ್ನ ಆರೋಗ್ಯದ ಕಾಳಜಿ ಜೊತೆ ಪರಿಸರದ ಕಾಳಜಿಯನ್ನು ಹೊಂದಿದಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.

     ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿದ್ರಾಮಪ್ಪ ಚಳಕಾಪುರೆ ಅವರು ಮಾತನಾಡಿ ಗಾಂಧಿ ಜಯಂತಿಯ ಅಂಗವಾಗಿ ಪ್ರತಿವರ್ಷ ಸಂರಕ್ಷಣಾ ಸಪ್ತಾಹ ಆಚರಿಸಲಾಗುತ್ತದೆ. ವನ್ಯಜೀವಿ ಸಂಕುಲ ಹೆಚ್ಚಿಸಲು ಹಾಗೂ ವನ್ಯಜೀವಿಗಳ ಉಳಿವಿನ ಕುರಿತು ಅರಿವು ಮೂಡಿಸಲೆಂದೇ ಈ ಸಪ್ತಾಹ ಆಚರಿಸಲಾಗುತ್ತದೆ ಎಂದರು.

    ಭಾರತದ ಈಶಾನ್ಯ ಭಾಗದಲ್ಲಿ ಭೇಟೆ ನಿರಂತರವಾಗಿರುತ್ತದೆ.ಆದರೆ ಮಳೆಗಾಲದಲ್ಲಿ ಮಾತ್ರ ಭೆಟೆಗೆ ವಿರಾಮವಿರುತ್ತದೆ ಕಾರಣ ಪ್ರಾಣಿಗಳ ಸಂತಾನೋತ್ಪತ್ತಿ. ಅದೇ ರೀತಿಯಲ್ಲಿ ಲಾಕ್‍ಡೌನ್ ಸಮಯದಲ್ಲಿ ಸಹ ಪ್ರಾಣಿಗಳಿಗೆ ರಕ್ಷಣೆ ದೊರೆತಂತಾಗಿದೆ. ಅದೇ ರೀತಿಯಾಗಿ ಪ್ರಾಣಿಗಳ ರಕ್ಷಣೆ, ಅರಣ್ಯ ರಕ್ಷಣೆ ಕುರಿತಾಗಿ ಅರಿವನ್ನು ಸಪ್ತಾಹದ ಮೂಲಕ ಮೂಡಿಸಲಾಗುತ್ತದೆ ಎಂದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಮಹಾತ್ಮ ಗಾಂಧೀಜಿಯವರ 152ನೇ ಜನ್ಮ ದಿನೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ನೆರವೇರಿಸಿದರು.

    ವನ್ಯಜೀವಿ ಸಪ್ತಾಹದ ಅಂಗವಾಗಿ ಬಳ್ಳಾರಿಯ ಪಿಸ್ಟನ್ ಬುಲ್ಸ್ ರೈಡರ್ಸ್ ತಂಡದವರ ಜಾಗೃತಿ ಬೈಕ್ ರಾಲಿಯನ್ನು ಸಚಿವರಾದ ಆನಂದ್ ಸಿಂಗ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಾಗೃತಿ ಬೈಕ್ ರಾಲಿಯು ಝೂಲಾಜಿಕಲ್ ಪಾರ್ಕ್‍ನಿಂದ ಶುರುವಾಗಿ ಹೊಸಪೇಟೆ, ಸಂಡೂರು, ಕೂಡ್ಲಿಗಿ, ಗುಡೇಕೋಟೆ, ರಾಮನಗರ ಹಾಗೂ ಬಳ್ಳಾರಿಗೆ ಸಂಚರಿಸಿ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಿದೆ.

   ಈ ಸಂದರ್ಭದಲ್ಲಿ ಹೊಸಪೇಟೆ ವಲಯ ಅರಣ್ಯಾಧಿಕಾರಿ ವಿನಯ್, ವನ್ಯಜೀವಿ ವಲಯ ಅರಣ್ಯಾಧಿಕಾರಿ , ದರೋಜಿ ಕರಡಿಧಾಮದ ದೇವರಾಜ ಸೇರಿದಂತೆ ಹೊಸಪೇಟೆ ತಾಲೂಕು ಪಂಚಾಯತಿ ಅಧ್ಯಕ್ಷರಾದ ನಾಗವೇಣಿ ಬಸವರಾಜ, ತಾಪಂ ಸದಸ್ಯರಾದ ಹನುಮಕ್ಕ, ಮಾಜಿ ಹುಡಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪಿಸ್ಟನ್ ಬುಲ್ ರೈಡರ್ಸ್ ತಂಡದ ಪ್ರಭಂಜನ್‍ಕುಮಾರ್ ಹಾಗೂ ಇಲಾಖೆಯ ಸಿಬ್ಬಂದಿಗಳು, ಪರಿಸರ ಪ್ರೇಮಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link