ಅಟಲ್ ಸುರಂಗ : 72 ಗಂಟೆಗಳಲ್ಲಿ 3 ಅಪಘಾತ..!

ಮನಾಲಿ:

          ಅಟಲ್​ ಸುರಂಗ ಮಾರ್ಗದಲ್ಲಿ ಕಳೆದ 72 ಗಂಟೆಗಳಲ್ಲಿ ಮೂರು ಅಪಘಾತಗಳು ಸಂಭವಿಸಿದೆ ಎಂದು ಮಂಗಳವಾರ ವರದಿಯಾಗಿದೆ. ಹಿಮಾಚಲ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿತವಾಗಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗವೂ ಮನಾಲಿ ಮತ್ತು ಲೇಹ್​ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

     ಅಪಘಾತಗಳೆಲ್ಲವೂ ನಿರ್ಲಕ್ಷ್ಯ ಮತ್ತು ವೇಗದ ಪ್ರಯಾಣದಿಂದಲೇ ಸಂಭವಿಸಿದ್ದು, ಸುರಂಗ ಮಾರ್ಗವೂ ತೆರೆದಾಗಿನಿಂದ ಪ್ರವಾಸಿಗರ ಅಸಭ್ಯ ವರ್ತನೆ ಗಮನಕ್ಕೆ ಬಂದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕುದುರೆಯ ಲಾಳಾಕಾರದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸುರಂಗವೂ ಹೊಸ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹೀಗಾಗಿ ಉದ್ಘಾಟನೆಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

      ಕೇವಲ ಮೂರೇ ದಿನದಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಅಪಘಾತಗಳು ಗಡಿ ರಸ್ತೆಗಳ ಸಂಸ್ಥೆ (ಬಿಆರ್​ಒ) ಮತ್ತು ಜಿಲ್ಲಾಡಳಿತದ ಕಳವಳಕ್ಕೆ ಕಾರಣವಾಗಿದೆ. ನೂರಾರು ಪ್ರವಾಸಿಗರು ಮತ್ತು ಮೋಟರಿಸ್ಟ್​ಗಳು ಅತಿವೇಗದಲ್ಲಿ ಚಲಿಸುವುದಲ್ಲದೇ ಹೊಸ ಸುರಂಗ ಮಾರ್ಗದಲ್ಲಿ ರೇಸಿಂಗ್​ ಮಾಡುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ.

     ಮೂರು ಅಪಘಾತಗಳು ಸಹ ಒಂದೇ ದಿನದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಅಲ್ಲದೆ, ಪ್ರವಾಸಿಗರು ಸವಾರಿಯ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮುಲಕ ಸಂಚಾರಿ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರುತ್ತಿದ್ದಾರೆಂದು ಬಿಆರ್​ಒ ಚೀಫ್​ ಇಂಜಿನಿಯರ್​ ಬ್ರಿಗೇಡಿಯರ್​ ಕೆ.ಪಿ. ಪುರುಷೋತ್ತಮನ್​ ಅಸಮಾಧಾನ ಹೊರಹಾಕಿದ್ದಾರೆ.

     ಪ್ರವಾಸಿಗರು ತಮ್ಮ ಮಿತಿಯನ್ನು ಮೀರುತ್ತಿರುವುದರಿಂದ ಅಟಲ್​ ಸುರಂಗದಲ್ಲಿ ವಾಹನಗಳ ನಿಲುಗಡೆಗೆ ಯಾರಿಗೂ ಅನುಮತಿ ಇಲ್ಲ ಎಂದಿದ್ದಾರೆ. ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಹೆಚ್ಚಾಗುವ ಆತಂಕದಲ್ಲಿರುವ ಬಿಆರ್​ಒ ಅಧಿಕಾರಿಗಳು ಅಪಘಾತಗಳನ್ನು ತಡೆಯಲು ಪೊಲೀಸ್​ ನಿಯೋಜನೆಗೆ ಮನವಿ ಮಾಡಿದ್ದಾರೆ. ಅಂದಹಾಗೆ ಅಟಲ್​ ಸುರಂಗವನ್ನು ಪ್ರಧಾನಿ ಮೋದಿ ಅವರು ಅಕ್ಟೋಬರ್​ 3ರಂದು ಉದ್ಘಾಟಿಸಿದರು. ಅಟಲ್​ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್​ 3ರಂದು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು. ಇದೀಗ ಪೂರ್ಣಗೊಂಡು ಉದ್ಘಾಟನೆಗೊಂಡು ಸಂಚಾರಕ್ಕೆ ಮುಕ್ತವಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link