ಬೆಂಗಳೂರು:
SSLC ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ಇಂದು ಸನ್ಮಾನಿಸಿ ಪ್ರೋತ್ಸಾಹ ಧನ ನೀಡಿದರು.
ಇತ್ತೀಚೆಗೆ ಪ್ರಕಟಗೊಂಡ SSLC ಪರೀಕ್ಷೆಯ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ರ್ಯಾಂಕ್ ಗಳಿಸಿದ ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಅವರನ್ನು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸನ್ಮಾನಿಸಿದರು.
ಅಲ್ಲದೆ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನವಾಗಿ 5 ಲಕ್ಷರೂ ಬಹುಮಾನ ನೀಡಿದರು. ಅಂಕಿತಾ ಮಾತ್ರವಲ್ಲದೇ ಮಂಡ್ಯದ ವಿದ್ಯಾರ್ಥಿ ನವನೀತ್ ಅವರನ್ನೂ ಸನ್ಮಾನಿಸಿದ ಡಿಕೆಶಿ ಅವರಿಗೆ 2 ಲಕ್ಷ ರೂ ಹಣವನ್ನು ಬಹುಮಾನವಾಗಿ ನೀಡಿದರು.
ಈ ಹಿಂದೆ SSLC ಪರೀಕ್ಷಾ ಫಲಿತಾಂಶ ಪ್ರಕಟವಾದಾಗ ರಾಜ್ಯಕ್ಕೇ ಟಾಪರ್ ಆಗಿರುವ ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಕುಟುಂಬಸ್ಥರಿಗೆ ಕರೆ ಮಾಡಿದ್ದ ಡಿಕೆ ಶಿವಕುಮಾರ್ ಶುಭ ಹಾರೈಸಿದ್ದರು. ಈ ವೇಳೆ “ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಮೊದಲ ಸ್ಥಾನ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದೆ. ನಿನಗೆ ಶುಭವಾಗಲಿ. ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬಾ” ಎಂದು ಡಿಸಿಎಂ ಅಂಕಿತಾರನ್ನು ಆಹ್ವಾನಿಸಿದ್ದರು.