ಜೈಲಿನಲ್ಲಿ ದಾಸ ಹೇಗಿದ್ದಾರಂತೆ ಗೊತ್ತಾ…? : ಸಹ ಖೈದಿ ಹೇಳಿದ್ದೇನು ಗೊತ್ತಾ….?

ಬೆಂಗಳೂರು: 

   ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ ಅವರನ್ನು ಸಾಕಷ್ಟು ಸೆಲೆಬ್ರಿಟಿಗಳು ಭೇಟಿಯಾಗಿ ಬರುತ್ತಿದ್ದಾರೆ. ನಿನ್ನೆಯಷ್ಟೇ ಹಾಸ್ಯನಟ ಸಾಧುಕೋಕಿಲ ಭೇಟಿ ಮಾಡಲು ಹೋಗಿ ಅವಕಾಶ ಸಿಗದೆ ನಿರಾಸೆಯಿಂದ ಹಿಂದಿರುಗಿದ್ದರು.

   ದರ್ಶನ್​ ಕುಟುಂಬವಂತೂ ಆಗಾಗ ಹೋಗಿ ಬರುತ್ತಲೇ ಇದೆ. ಇದರ ನಡುವೆ ದರ್ಶನ್​ರನ್ನು ಬಿಡುಗಡೆ ಮಾಡಿಸುವ ಪ್ರಯತ್ನಗಳು ನಡೆಯುತ್ತಿದೆ. ಇಂದು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಆಸಕ್ತಿದಾಯಕ ಸಂಗತಿಯೊಂದನ್ನು ದರ್ಶನ್​ ಜತೆಗಿದ್ದ ಸಹಕೈದಿ ಬಿಚ್ಚಿಟ್ಟಿದ್ದಾರೆ.

   ಸಹಕೈದಿ ಸಿದ್ಧಾರೂಢ ಅವರು ಸುಮಾರು 22 ವರ್ಷಗಳ ಕಾಲ ಜೈಲಿನಲ್ಲಿದ್ದರು. ಇತ್ತೀಚೆಗಷ್ಟೇ ಅವರನ್ನು ಸನ್ನಡತೆಯ ಆಧಾರದ ಮೇಲೆ ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಜೈಲಿನಲ್ಲಿದ್ದ ವೇಳೆ ದರ್ಶನ್​ರನ್ನು ಭೇಟಿಯಾದ ಕ್ಷಣವನ್ನು ಮಾಧ್ಯಮಗಳ ಮುಂದೆ ಸಿದ್ಧಾರೂಢ ಅವರು ವಿವರಿಸಿದ್ದಾರೆ.

   ದರ್ಶನ್​ ಅವರು ವಿಐಪಿ ಸೆಲ್​ನಲ್ಲಿ ಇದಾರೆ. ಅವರಿಗೆ ಕೆಲವು ಸೌಕರ್ಯಗಳಿವೆ. ಬೇರೆ ಸೆಲ್​ಗಳಿಗೆ ಹೋಲಿಕೆ ಮಾಡಿದರೆ ವಿಐಪಿ ಸೆಲ್​ ಕೊಂಚ ಚೆನ್ನಾಗಿರುತ್ತದೆ. ಹಾಸಿಗೆ, ಬೆಡ್​​​ಶೀಟ್​ ಟಿವಿ, ಒಂದೆರೆಡು ಕುರ್ಚಿ, ಟಿವಿ ಹಾಗೂ ನೀರಿನ ಕ್ಯಾನ್​ ಇರುತ್ತದೆ. ಇದರೊಂದಿಗೆ ಸೊಳ್ಳೆಯ ಪರದೆಯನ್ನು ಕೊಟ್ಟಿರುತ್ತಾರೆ ಎಂದು ಸಿದ್ಧಾರೂಢ ಹೇಳಿದ್ದಾರೆ.

   ದರ್ಶನ್​ ಅವರ ಜತೆ ಸುಮಾರು 12 ನಿಮಿಷಗಳ ಕಾಲ ಮಾತನಾಡಿದ್ದೇನೆ. ದರ್ಶನ್​ ಸಣ್ಣ ಆಗಿದ್ದಾರೆ. ಯಾವಾಗಲೂ ತುಂಬಾ ಡಲ್​ ಅಗಿ ಇರುತ್ತಾರೆ. ವಿಗ್​ ಮಾತ್ರ ಹಾಗೇ ಇದೆ. ಪ್ರತಿಕ್ಷಣವೂ ಅವರು ಪಶ್ಚಾತಾಪ ಪಡುತ್ತಿರುವುದು ಮುಖದಲ್ಲಿ ಎದ್ದು ಕಾಣುತ್ತಿದೆ. ಮಾತನಾಡುವ ಪ್ರತಿ ಸಮಯದಲ್ಲೂ ರೇಣುಕಾಸ್ವಾಮಿ ಕುಟುಂಬಕ್ಕೆ ಕ್ಷಮೆ ಕೋರುತ್ತಿದ್ದಾರೆ. ದರ್ಶನ್​ ಅವರು ವಿಐಪಿ ಸೆಲ್​ನಲ್ಲಿ ಇರುವುದರಿಂದ ಅಲ್ಲಿಗೆ ಸಾಮಾನ್ಯವಾಗಿ ಯಾರನ್ನೂ ಬಿಡುವುದಿಲ್ಲ. ಆದರೆ, ಅಧಿಕಾರಿಗಳ ಬಳಿ ತುಂಬಾ ಮನವಿ ಮಾಡಿಕೊಂಡೆ, ನಾನು ಸನ್ನಡತೆ ಪಟ್ಟಿಯಲ್ಲಿ ಇದ್ದ ಕಾರಣ ಭೇಟಿ ಮಾಡಲು ಅನುಮತಿ ನೀಡಿದರು. ಬಳಿಕ ಭೇಟಿ ಮಾಡಿ ಮಾತನಾಡಿದೆ ಎಂದು ಸಿದ್ಧಾರೂಢ ಹೇಳಿದರು.

   ವಿಐಪಿ ಸೆಲ್​ ಸಾಮಾನ್ಯ ಸೆಲ್​ಗಿಂತ ದೊಡ್ಡ ನರಕ. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ. ಸೆಲ್​ನಲ್ಲೇ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಅಲ್ಲಿಯೇ ಓಡಾಡಬಹುದು. ದರ್ಶನ್​ ಜತೆ ಯಾರೂ ಇರುವುದಿಲ್ಲ. ದರ್ಶನ್​ ಅವರನ್ನು ಯಾರಾದರೂ ಭೇಟಿ ಮಾಡಲು ಬಂದಾಗ ಕೈದಿಗಳು ಸೆಲ್​ನಿಂದಲೇ ನಿಂತು ಅವರನ್ನು ನೋಡುತ್ತಾರೆ. ಎಲ್ಲರಿಗೂ ಸಿಗುವ ಊಟವೇ ಅವರಿಗೆ ಸಿಗುತ್ತದೆ. ಆದರೆ, ದರ್ಶನ್​ ಇರುವಲ್ಲಿಗೆ ಊಟ ಹೋಗುತ್ತದೆ. ನಟನಾದ್ದರಿಂದ ಗುಂಪುಗೂಡಬಹುದು ಅಂತ, ದರ್ಶನ್​ ಇರುವಲ್ಲಿಗೆ ಊಟ ತೆಗೆದುಕೊಂಡು ಹೋಗಿ ಕೊಡಲಾಗುತ್ತದೆ. ಇನ್ನು ದರ್ಶನ್​ ಮತ್ತು ಪ್ರಜ್ವಲ್​ ರೇವಣ್ಣ ಭೇಟಿ ಅಸಾಧ್ಯ. ಏಕೆಂದರೆ, ಇಬ್ಬರ ಸೆಲ್​ ನಡುವಿನ ಅಂತರ ಸುಮಾರು 1 ಕಿ.ಮೀ ದೂರವಿದೆ ಎಂದು ಹೇಳಿದರು.

   ದರ್ಶನ್​ ಅವರು ಕೋಣೆಯಲ್ಲಿ ಹೆಚ್ಚು ಟೈಂ ಪಾಸ್​ ಮಾಡುತ್ತಾರೆ. ರೂಮ್​ನಲ್ಲೇ ಸ್ವಲ್ಪ ಸಮಯ ವಾಕ್​ ಮಾಡುತ್ತಾರೆ. ಉಳಿದ ಸಮಯದಲ್ಲಿ ಸ್ವಲ್ಪ ಹೊತ್ತು ಪುಸ್ತಕ ಓದುವಲ್ಲಿ ಮಗ್ನರಾಗುತ್ತಾರೆ. ಬೇರೆ ಕೈದಿಗಳಿಗೆ ದರ್ಶನ್​ ಭೇಟಿಯಾಗಲು ಅವಕಾಶ ಇಲ್ಲ. ದರ್ಶನ್​ ಕುಟುಂಬದವರಿಗೆ ಮಾತ್ರ ಪ್ರತಿದಿನ ಭೇಟಿಯಾಗಲು ಅವಕಾಶವಿದೆ. ದರ್ಶನ್​ ಅವರು ತುಂಬಾ ಡಲ್​ ಆಗಿದ್ದು, ಅವರನ್ನು ಆ ಸ್ಥಿತಿಯಲ್ಲಿ ಕಂಡು ತುಂಬಾ ದುಃಖವಾಯಿತು ಎಂದು ಸಿದ್ಧಾರೂಢ ಅವರು ಹೇಳಿದರು.

ಪೊಲೀಸರಿಂದ ಸಮಗ್ರ ತನಿಖೆ

   ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್​ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

   ಕೊಲೆಯಾದ ರೇಣುಕಾಸ್ವಾಮಿ, ಆರೋಪಿ ಪವಿತ್ರಾ ಗೌಡ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮೆಸೇಜ್​ ಮಾಡಿದ್ದ ಎಂಬ ಆರೋಪವಿದೆ. ಹೀಗಾಗಿ ಆತನ ಇನ್​ಸ್ಟಾಗ್ರಾಂ ಖಾತೆ ಮತ್ತು ವಾಟ್ಸ್​ಆಯಪ್​ ಖಾತೆಯ ಡೇಟಾವನ್ನು ಮರಳಿ ಪಡೆಯುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆ ಶೆಡ್​ ಸುತ್ತಮುತ್ತಲಿಗೆ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್​ ಅನ್ನು ವಶಕ್ಕೆ ಪಡೆಯಲಾಗಿದ್ದು, ತಜ್ಞರು ಪರಿಶೀಲಿಸಿ ದತ್ತಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಜುಲೈ 29ಕ್ಕೆ ಮುಂದಿನ ವಿಚಾರಣೆ

   ಜುಲೈ 18ರಂದು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಯಲ್ಲಿ ದರ್ಶನ್​ ಮತ್ತು ಇನ್ನಿತರ ಆರೋಪಿಗಳನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್​ ಮತ್ತೊಮ್ಮೆ 14 ದಿನಗಳ ಕಾಲ ಅಂದರೆ ಆಗಸ್ಟ್​ 1ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಇನ್ನೊಂದೆಡೆ ನಟ ದರ್ಶನ್​ ಮನೆಯೂಟಕ್ಕೆ ಅನುಮತಿ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.

ಏನಿದು ಪ್ರಕರಣ?

    ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ.

   ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ.

   ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

   ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.

   ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link