ನಕಲಿ ವೋಟರ್ ಐಡಿ ಸೃಷ್ಟಿ : ಆರೋಪಿ ವಶಕ್ಕೆ

ಹಾವೇರಿ

     ಮತದಾರರ ವೋಟರ್ ಐಡಿಗಳನ್ನು ನಕಲಿಯಾಗಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಸುಳಿವಿನ ಹಿನ್ನೆಲೆಯಲ್ಲಿ ಹಾವೇರಿ ನಗರದ ಸಾಮಾನ್ಯ ಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಕೆಲ ದಾಖಲೆ, ಯಂತ್ರೋಪಕರಣ ಹಾಗೂ ಹಾರ್ಡ್‍ಡಿಸ್ಕ್ ವಶಕ್ಕೆಪಡಿಸಿಕೊಂಡಿದೆ. ಅಂಗಡಿಯ ಮಾಲಿಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

    ಹಾವೇರಿ ನಗರದ ಹುಕ್ಕೇರಿ ಮಠದ ಎದುರಿನ ಕಾಂಪ್ಲೇಕ್ಸನಲ್ಲಿರುವ ಸೇವಾಸಿಂಧು ಸಾಮಾನ್ಯ ಸೇವಾ ಕೇಂದ್ರದಲ್ಲಿ(ಕಾಮನ್ ಸರ್ವಿಸ್ ಸೆಂಟರ್) ಭಾರತ ಚುನಾವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಆಧರಿಸಿ ಅಪರಜಿಲ್ಲಾಧಿಕಾರಿ ಎಸ್ ಯೋಗೇಶ್ವರ ಅವರು ತಹಶೀಲ್ದಾರ್ ಶಂಕರ, ಉಪ ವಿಭಾಗಾಧಿಕಾರಿ ಡಾ.ದೀಲಿಷ್ ಶಶಿ ಹಾಗೂ ಸಿಪಿಐ ಸಂತೋಷ ಪವಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಜೊತೆಗೂಡಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲ ದಾಖಲೆಗಳನ್ನು ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ನಕಲಿ ವೋಟರ್ ಐಡಿ ಸೃಷ್ಟಿಸುತ್ತಿರುವ ಕುರಿತ ಮಾಹಿತಿ ಆಧಾರದ ಮೇಲೆ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ, ಎಷ್ಟು ಐಡಿಗಳನ್ನು ಸೃಷ್ಟಿಸಿದ್ದಾನೆ, ಇದರ ಮೂಲ ಕುರಿತಂತೆ ತನಿಖೆಯಿಂದ ಹೆಚ್ಚಿನ ವಿವರ ದೊರೆಯಲಿದೆ, ಈ ಕುರಿತಂತೆ ಹೆಚ್ಚಿನ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿವೆ, ನಕಲಿ ಐಡಿ ಕಾರ್ಡ್ ಪತ್ತೆ ಕುರಿತಂತೆ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು, ಅಂಗಡಿವನು ನೀಡಿದ ಮಾಹಿತಿಯಂತೆ ಹರಿಯಾಣ ಮೂಲದವರಿಂದ ಖರೀದಿಸಿದ ಸಾಪ್ಟ್‍ವೇರ್‍ನಿಂದ ಮುದ್ರಣ ಮಾಡುತ್ತಿರುವುದಾಗಿ ತಿಳಿಸಿದ್ದಾನೆ, ಹೆಚ್ಚಿನ ತನಿಖೆಯಿಂದ ವಿವರ ಲಭ್ಯವಾಗಲಿದೆ ಎಂದು ತಿಳಿಸಿದರು.

     ದಾಳಿ ಕುರಿತಂತೆ ವಿವರ ನೀಡಿದ ಅಪರ ಜಿಲ್ಲಾಧಿಕಾರಿ ಎಸ್ ಯೋಗೇಶ್ವರ ಅವರು, ಒರ್ವ ಪುರುಷ ಹಾಗೂ ಮಹಿಳೆಯ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ ಸೃಷ್ಟಿಸಿದ ಕುರಿತಂತೆ ದಾಖಲೆ ಸಹಿತ ನನ್ನ ಕಚೇರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಕ್ಷಣವೇ ಅಧಿಕಾರಿಗಳ ತಂಡ ರಚಿಸಿಕೊಳ್ಳಲಾಯಿತು, ಸಂಬಂಧಿಸಿದ ಸಿಎಸ್‍ಸಿ ಕೇಂದ್ರಕ್ಕೆ ಸ್ವತಹ ತೆರಳುವ ಮುನ್ನ ತಮ್ಮ ಕಾರು ಚಾಲಕ ಅಭಿಷೇಕ ಹಾಗೂ ಪೊಲೀಸ್ ಕಾನ್ಸ್‍ಟೇಬಲ್ ವಿನಾಯಕ ಮಳವಳ್ಳಿ(ಸಾಮಾನ್ಯ ಡ್ರೇಸ್‍ನಲ್ಲಿ) ಎಂಬುವರಿಗೆ ನಕಲಿ ಕಾರ್ಡ್ ಮಾಡಿಸಲು ಹಣ ನೀಡಿ ಪರೀಕ್ಷೆಗಾಗಿ ಅಂಗಡಿಗೆ ಕಳಿಸಿಕೊಡಲಾಯಿತು, ಈ ಪೈಕಿ ಕಾರು ಚಾಲಕ ಹಣ ನೀಡಿ ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡು ಬಂದ ತಕ್ಷಣವೇ ದಾಳಿ ಮಾಡಲಾಯಿತು ಎಂದು ವಿವರಿಸಿದರು.

     ಪರಿಶೀಲಿಸಲಾಗಿ ಅಂಗಡಿಯಲ್ಲಿ ಮತ್ತೊಂದು ನಕಲಿ ಮತದಾರರ ಐಡಿ ಕಾರ್ಡ್ ದೊರೆತಿದೆ, ಒಟ್ಟಾರೆ ಮೂರು ನಕಲಿ ಮತದಾರರ ಐಡಿ ದೊರೆಕಿವೆ, ಇದಲ್ಲದೇ ವಿವಿಧ ಯೋಜನೆಗಳ ಕಾರ್ಡ್‍ಗಳು ದೊರೆತಿವೆ, ಎಷ್ಟು ದಿನದಿಂದ ನಕಲಿ ಕಾರ್ಡ್ ಸೃಷ್ಟಿಸಿದ್ದಾನೆ, ಎಷ್ಟು ಕಾರ್ಡ್ ಸೃಷ್ಟಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ತಿಳಿಯಲಿದೆ, ಸೇವಾ ಕೇಂದ್ರದ ಜೀವನ್ ನರಸಿಂಹ ರಜಪೂತ್ ಹಾಗೂ ನವೀನ್ ಬಸವರಾಜ ಉಪ್ಪಾರ ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ, ಅಂಗಡಿಯಿಂದ ಒಂದು ಲ್ಯಾಪ್‍ಟಾಪ್, ಒಂದು ಕಂಪ್ಯೂಟರ್, ಒಂದು ಹಾರ್ಡ್‍ಡಿಸ್ಕ್, ಒಂದು ಪ್ರಿಂಟರ್, ಒಂದು ಲ್ಯಾಮಿನೇಷನ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ದಾಖಲೆಗಳು, ಬ್ಯಾಂಕ್ ಪಾಸ್‍ಪುಸ್ತಕಗಳು, ಬೇರೆ ಬೇರೆ ಐಡಿ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ, ಪೊಲೀಸ್ ತನಿಖೆ ಜೋತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್.ಐ.ಸಿ) ಅಧಿಕಾರಿಗಳ ನೇತೃತ್ವದ ತಾಂತ್ರಿಕ ತಂಡ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

    ಸಿಎಸ್‍ಸಿ ಕೇಂದ್ರದ ಜೀವನ್ ನರಸಿಂಹ ರಜಪೂತ ಎಂಬಾತ ಈ ಸಂದರ್ಭದಲ್ಲಿ ಮಾತನಾಡಿ, ಹರಿಯಾಣ ಮೂಲದ ಪ್ರಿಂಟ್ ಪೋರ್ಟಲ್ ಎಕ್ಸ್ ವಾಯ್ ಝಡ್ ಡಾಟ್ ಕಾಂ ಎಂಬ ಸಾಪ್ಟವೇರ್‍ನ್ನು ಆನಲೈನ್ ಮೂಲಕ ಖರಿದಿ ಮಾಡಿದ್ದು ಕಾರ್ಡ್ ಮುದ್ರಣ ಮಾಡಿದ್ದೇನೆ, ಯಾರಿಗೂ ಕಾರ್ಡ್ ಕೊಟ್ಟಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ದೀಲಿಷ್ ಶಶಿ, ತಹಶೀಲ್ದಾರ್ ಶಂಕರ, ಪೊಲಿಸ್ ಅಧಿಕಾರಿಗಳಾದ ಸಂತೋಷ ಪವಾರ, ಶ್ರೀಮತಿ ಪ್ರಭಾವತಿ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link