ತುಮಕೂರು
2012 ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಇಡೀ ಭಾರತೀಯರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಅಂತಹ ಕ್ರೂರ ಮತ್ತು ಭೀಭತ್ಸ ಘಟನೆ ಅದು. ಘಟನೆ ನಡೆದು 8 ವರ್ಷಗಳ ನಂತರ 2020ರ ಮಾರ್ಚ್ 20 ರಂದು ಪ್ರಕರಣದ ನಾಲ್ಕು ಆರೋಪಿಗಳು ಗಲ್ಲು ಶಿಕ್ಷೆಗೆ ಒಳಗಾಗುವುದರೊಂದಿಗೆ ಈ ಪ್ರಕರಣ ಒಂದು ನ್ಯಾಯಿಕ ಗೆಲುವಿನ ಹಂತ ಪಡೆಯಿತು. ಈ ನಡುವೆ ಇಂತಹುದೇ ಮತ್ತೆರಡು ಪ್ರಕರಣಗಳು ರಾಷ್ಟ್ರಾದ್ಯಂತ ಸುದ್ದಿಗೆ ಗ್ರಾಸವಾದವು.
2019 ರಲ್ಲಿ ಹೈದರಾಬಾದ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ. ಈ ಪ್ರಕರಣದಲ್ಲಿ ಪೊಲೀಸರೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಬಿಟ್ಟರು. ಈ ಪ್ರಕರಣ ಮರೆಯಾಗುತ್ತಲೇ ಈಗ ರಾಷ್ಟ್ರಾದ್ಯಂತ ಸುದ್ದಿಯಾಗುತ್ತಿರುವುದು ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣ.
ವರ್ಷದಲ್ಲಿ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲವಷ್ಟೇ ಪ್ರಕರಣಗಳು ರಾಷ್ಟ್ರವ್ಯಾಪಿ ಸುದ್ದಿಯಾದರೆ ಇನ್ನು ಕೆಲವು ಹಾಗೆಯೇ ಒಂದೆರಡು ದಿನ ವರದಿಯಾಗಿ ಕ್ರಮೇಣ ಜನಮಾನಸದಿಂದ ಮರೆಯಾಗುತ್ತಿವೆ. ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ನಿರ್ಭಯ ಪ್ರಕರಣದಲ್ಲಿ ಇಡೀ ರಾಷ್ಟ್ರದ ಜನತೆ, ಸಂಘಟನೆಗಳು ವ್ಯಕ್ತಪಡಿಸಿದ ಆಕ್ರೋಶ, ಪ್ರತಿಭಟನೆ ಹಿಂದೆಂದೂ ಕಾಣದ ರೀತಿಯಂತಿತ್ತು. ಆ ಮಟ್ಟಿಗೆ ರಾಷ್ಟ್ರವ್ಯಾಪಿ ಸಂಚಲನವನ್ನು ಉಂಟು ಮಾಡಿತ್ತು ಆ ಪ್ರಕರಣ.
ಆ ನಿರ್ಭಯ ಪ್ರಕರಣವೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಿಗೂ ಕಾರಣವಾಯಿತು. ಕ್ರಿಮಿನಲ್ ಕಾನೂನಿನಲ್ಲಿ ತಿದ್ದುಪಡಿಯೂ ಆಯಿತು. ತುರ್ತು ಸಹಾಯವಾಣಿ, ಸಿ.ಸಿ. ಟಿ.ವಿ. ಅಳವಡಿಕೆಯಂತಹ ಸುರಕ್ಷಿತಾ ಕ್ರಮಗಳಿಗೆ ಸರ್ಕಾರಗಳು ಮುಂದಾದವು. ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತಂದು ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು 7 ವರ್ಷದಿಂದ ಜೀವಾವಧಿ ಶಿಕ್ಷೆಗೆ ಏರಿಕೆ ಮಾಡಲಾಯಿತು. 2018 ರಲ್ಲಿ ಕ್ರಿಮಿನಲ್ ಕಾನೂನು ಕಾಯ್ದೆಯಲ್ಲಿ ಈ ಬದಲಾವಣೆ ಸೇರಿಸಲಾಯಿತು.
12 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಇದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯ್ದೆ ಕಾನೂನು ಇದ್ದು, ಅದಕ್ಕೂ ಸಹ ತಿದ್ದುಪಡಿ ತರಲಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ಕೋರ್ಟ್ಗಳನ್ನು ಸ್ಥಾಪನೆ ಮಾಡಲಾಗಿದೆ. ಅತ್ಯಾಚಾರ ಪ್ರಕರಣಗಳ ನಿರ್ವಹಣೆಗೆ ತ್ವರಿತ ವಿಲೇವಾರಿ ನ್ಯಾಯಾಲಯಗಳು ತಲೆ ಎತ್ತಿವೆ. 2015 ರಿಂದ 2020ರ ಒಳಗಾಗಿ ಕನಿಷ್ಠ 1800 ಶೀಘ್ರ ವಿಚಾರಣಾ ನ್ಯಾಯಾಲಯಗಳ ನಿರ್ಮಾಣಕ್ಕೆ 2013 ರಲ್ಲಿಯೇ ಕೇಂದ್ರ ಸರ್ಕಾರ ಸೂಚಿಸಿತ್ತು. ಹಲವು ರಾಜ್ಯಗಳಲ್ಲಿ ಮಹಿಳೆಯರ ಸಲುವಾಗಿಯೇ ಕೆಲವು ಸಹಾಯ ವಾಣಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
ನಿರ್ಭಯಾ ಪ್ರಕರಣದ ಬಳಿಕ 2013 ರಲ್ಲಿ ಕೇಂದ್ರ ಸರ್ಕಾರವು ಮಹಿಳೆಯರ ಸುರಕ್ಷಿತ ಮತ್ತು ಭದ್ರತೆಗೆ ಸಂಬಂಧಪಟ್ಟ ಯೋಜನೆಗಳ ಅನುಷ್ಠಾನಕ್ಕೆ ನಿರ್ಭಯಾ ನಿಧಿ ಸ್ಥಾಪಿಸಿ ಅದಕ್ಕಾಗಿ 1813 ಕೋಟಿ ರೂ.ಗಳನ್ನು ಮೀಸಲಿರಿಸಿತ್ತು. ಆದರೆ ಈ ಹಣ ಯಾವುದಕ್ಕೆ ಬಳಕೆಯಾಗಬೇಕಿತ್ತೋ ಅದಕ್ಕೆ ಬಳಕೆ ಮಾಡಲೇ ಇಲ್ಲ. ಬಹುತೇಕ ರಾಜ್ಯಗಳು ಸುರಕ್ಷತಾ ಕ್ರಮಗಳ ಜಾರಿಯಲ್ಲಿ ಹಿಂದೆ ಬಿದ್ದವು. ಸಂತ್ರಸ್ತ ಮಹಿಳೆಯರಿಗೆ ಪರಿಹಾರ ನೀಡಬೇಕಾದ ಈ ಯೋಜನೆಯೂ ಸಾರ್ಥಕತೆ ಪಡೆದುಕೊಳ್ಳಲಿಲ್ಲ. ಯೋಜನೆಗಳೇನೋ ತುಂಬಾ ಆಕರ್ಷಣೀಯವಾಗಿ ರೂಪುಗೊಳ್ಳುತ್ತವೆ. ಆದರೆ ಅದರ ಅನುಷ್ಠಾನ ಮಾತ್ರ ವಿಫಲತೆಗೊಳ್ಳುತ್ತಿರುವುದು ಭಾರತದ ಒಟ್ಟಾರೆ ವ್ಯವಸ್ಥೆಯ ಒಂದು ದುರಂತ.
ಏನೆಲ್ಲಾ ಕಾಯಿದೆಗಳು ಬದಲಾವಣೆಯಾಗಿ ಹೊಸ ಹೊಸ ಯೋಜನೆಗಳು ರೂಪುಗೊಂಡರೂ ಸಹ ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. ಪ್ರತಿವರ್ಷದ ವರದಿಗಳನ್ನು ಗಮನಿಸುತ್ತಾ ಹೋದರೆ ವಾಸ್ತವ ಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ಇಡೀ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಉತ್ತರ ಪ್ರದೇಶದಲ್ಲಿ. ಆ ರಾಜ್ಯದಲ್ಲಿ ಒಂದಲ್ಲ ಒಂದು ಕಡೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಕಾರಣಕ್ಕಾಗಿಯೇ ಕೆಲವರು ಉತ್ತರ ಪ್ರದೇಶವು ಅತ್ಯಾಚಾರಗಳ ರಾಜಧಾನಿ ಎಂದೇ ವರ್ಣಿಸುತ್ತಿದ್ದಾರೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳಾ ಶೋಷಣೆ, ಮಕ್ಕಳ ಮೇಲೆ ದೌರ್ಜನ್ಯ ಇತ್ಯಾದಿ ಯಾವುದೇ ರೀತಿಯ ಪ್ರಕರಣಗಳು ಕಂಡು ಬಂದರೂ ಅವುಗಳನ್ನು ನಿಭಾಯಿಸುವ ಪ್ರಕ್ರಿಯೆಯ ಮೇಲೆ ನ್ಯಾಯ ಪರಿಹಾರದ ನಿಲುವು ಅಡಗಿರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತ ನಡವಳಿಕೆಗಳು ಕಂಡಾಗ ಸಹಜವಾಗಿಯೇ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವು ರಾಜ್ಯ ಹಾಗೂ ಕೆಲವು ಠಾಣೆಗಳ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿದರೆ ಕೆಲವರು ನಡುಗುತ್ತಾರೆ. ಅಂತಹ ಕಡೆಗಳಲ್ಲಿ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತವೆ. ನಮ್ಮ ವ್ಯವಸ್ಥೆಯಲ್ಲಿ ಬೇಕಾಗಿರುವುದು ಇದೇ. ಪ್ರಕರಣಗಳು ಘಟಿಸಿದಾಗ ಕೂಡಲೇ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕು.
ಆರೋಪಿಗಳಿಗೆ ಶಿಕ್ಷೆಯಾಗುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು. ಆದರೆ ವ್ಯವಸ್ಥೆಯಲ್ಲಿಯೇ ಲೋಪ ಉಂಟಾದಾಗ ತನಿಖೆ ಮತ್ತು ನ್ಯಾಯ ಎಂಬುದು ಕೇವಲ ಪುಸ್ತಕದ ಕಾನೂನಾಗಿ ಉಳಿಯುತ್ತದೆ ಅಷ್ಟೆ. ಜನರ ಮನಸ್ಸುಗಳು ಆತಂಕಕ್ಕೆ ಒಳಗಾಗಲು ಬಿಡದೆ ಸರ್ಕಾರ ಯಾವುದೇ ಇರಲಿ, ಆಡಳಿತ ಯಾರ ಕೈಲಾದರೂ ಇರಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವ, ಆರೋಪಿಗಳಿಗೆ ಶಿಕ್ಷೆಯಾಗುವಂತಹ ಕಠಿಣ ಕ್ರಮಗಳತ್ತ ಮುಂದಾಗುವ ಅನಿವಾರ್ಯತೆ ಈಗಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ. ಇಲ್ಲದೆ ಹೋದರೆ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಹೋಗುತ್ತವೆ. ಕಾನೂನು ತಿದ್ದುಪಡಿ, ಹೊಸ ಹೊಸ ಯೋಜನೆಗಳನ್ನು ಮಾಡಿ ಅವುಗಳನ್ನು ಜಾರಿಗೆ ತರುವ ಇಚ್ಛಾಶಕ್ತಿ ಇಲ್ಲದೆ ಹೋದರೆ ಪ್ರಯೋಜನವೇನು?
ವಿಶೇಷ ಲೇಖನ :-ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ