ಕುರುಬ ಸಮುದಾಯದ ಬೃಹತ್ ಸಭೆ :ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ

ಬೆಂಗಳೂರು:

     ಹಾಲುಮತ ಕುರುಬ ಸಮುದಾಯ ಮೂಲತಃ ಬುಡಕಟ್ಟು ಜೀವನ ಸಾಗಿಸಿಕೊಂಡು ಬಂದವರು. ಎಸ್.ಟಿ ಮೀಸಲಾತಿ ಹೋರಾಟ ನಮ್ಮ ಹಕ್ಕು. 2021ರ ಜನವರಿ 15 ರಂದು ಮಕರ ಸಂಕ್ರಾಂತಿಯಂದು ಸೂರ್ಯ ದಿಕ್ಕು ಬದಲಿಸುವ ಸಮಯ, ಅಂದು ನಾಲ್ವರು ಕನಕ ಗುರುಪೀಠದ ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಫೆಬ್ರವರಿ 7 ಕ್ಕೆ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಘೋಷಿಸಿದರು.

    ಕುರುಬರ ಎಸ್.ಟಿ ಮೀಸಲಾತಿ ಹೋರಾಟ ಸಮಿತಿ, ಕಾಗಿನೆಲೆ ಕನಕ ಗುರುಪೀಠ, ಕರ್ನಾಟಕ ಪ್ರದೇಶ ಕುರುಬ ಸಂಘದ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾಯಿತ ಪ್ರತಿನಿಧಿಗಳ ಚಿಂತನಾ ಸಭೆ, ಎಸ್.ಟಿ ಮೀಸಲಾತಿಯ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

   ಹೋರಾಟ ಸಂಬಂಧ ವಿಭಾಗ ಮಟ್ಟದ ಸಮಾವೇಶ ಆಯೋಜನೆ ಮಾಡಲಾಗುವುದು. ನವೆಂಬರ್ 22 ರಂದು ಬೆಳಗಾವಿ ವಿಭಾಗದಲ್ಲಿ ಸಮಾವೇಶ, ಮೈಸೂರು ವಿಭಾಗದಲ್ಲಿ ಡಿ.6 ರಂದು ಸಮಾವೇಶ, ಡಿ.20 ರಂದು ಕಲಬುರ್ಗಿ ವಿಭಾಗದ ಸಮಾವೇಶ, ಜನವರಿ 3 ರಂದು ಬೆಂಗಳೂರು ವಿಭಾಗದ ಸಮಾವೇಶ ವಿಭಾಗವಾರು ಸಮಾವೇಶಗಳ ನಡುವೆಯೇ ಈಶ್ವರಪ್ಪ ನೇತೃತ್ವದಲ್ಲಿ ದೆಹಲಿಗೆ ಪ್ರಮುಖರ ನಿಯೋಗ ತೆರಳಲಿದೆ ಎಂದರು.ಡೊಳ್ಳು ಬಾರಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಮಾತನಾಡಿ,

    ಕುರುಬ ಸಮುದಾಯಕ್ಕೆ ಎಸ್ .ಟಿ. ಮೀಸಲಾತಿ ಸಿಗುವವರೆಗೆ ಹೋರಾಟ ಮಾಡೋಣ, 1935 ರಿಂದ ಸತತ ಹೋರಾಟ ನಡೆದರೂ ಕೂಡ ಇದುವರೆಗೆ ಮೀಸಲಾತಿ ಸಿಕ್ಕಿಲ್ಲ, ರಾಜ್ಯದಿಂದ ಕೇಂದ್ರ, ಕೇಂದ್ರದಿಂದ ರಾಜ್ಯಕ್ಕೆ ಫೈಲ್ ಹೋಗ್ತಿತ್ತು ಅಷ್ಟೇ , ಈಗ ನಾನು ಕೇಂದ್ರ ಸಚಿವರು, ಗೃಹ ಸಚಿವ ಅಮಿತ್ ಶಾ ಎಲ್ಲರನ್ನೂ ಬಳಸಿಕೊಂಡು ಎಸ್.ಟಿ. ಮೀಸಲಾತಿ ಸಿಗುವವರೆಗೆ ಹೋರಾಟ ಮಾಡ್ತೇನೆ ಎಂದು ತಿಳಿಸಿದರು.

      ಇಲ್ಲಿ ಮಂತ್ರಿ ಆಗೋರು ಬಂದಿದ್ದಾರೆ ಅಂದ ಈಶ್ವರಪ್ಪ ಎಲ್ರೂ ಹೋರಾಟಕ್ಕೆ ಕೈಜೋಡಿಸ್ತಿದ್ದಾರೆ. ಸಭೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಕುರುಬ ಸಮಾಜದ ಜನಪ್ರತಿನಿಧಿಗಳು  ಸಮುದಾಯದ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದು ಎಲ್ಲರೂ ಹೋರಾಟ ಮಾಡೋಣ ಎಂದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದಾಯದ ಹೋರಾಟಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದಾರೆ. ಕುರುಬ ಸಮುದಾಯದ ನಾಲ್ವರು ಸ್ವಾಮಿಜಿಗಳ ನೇತೃತ್ವದಲ್ಲಿ ಎಸ್.ಟಿ ಹೋರಾಟ ಮುಂದುವರೆಯುತ್ತದೆ. ಮುದಾಯ ವಿಷಯ ಬಂದಾಗ ಮೂರು ಪಕ್ಷಗಳ ನಾಯಕರು ಒಂದಾಗಬೇಕು.

   ಇಲ್ಲಿ ಹಾಲಿ ಮಾಜಿ ಸಚಿವರು ಇದ್ದಾರೆ. ಮುಂದೆ ಸಚಿವರು ಆಗುವಂತಹವರು ಬಂದಿದ್ದಾರೆ. ಎಂದಾಗ ಆರ್. ಶಂಕರ್ ಮತ್ತು ಎಂ.ಟಿ.ಬಿ ನಾಗರಾಜ್ ಅವರ ಕೈ ಎತ್ತಿದ ರಘುನಾಥ್ ರಾವ್ ಮಲ್ಕಪುರೆ ಸಮುದಾಯದ ಹೋರಾಟ ಅಂದ್ರೆ ಎಲ್ರೂ ಒಗ್ಗಟ್ಟಾಗಬೇಕು ಎಂದರು.

   ಸಮುದಾಯದ ಹೋರಾಟದ ನೇತೃತ್ವ ವಹಿಸಿರೋದು ಪೂಜ್ಯ ಸ್ವಾಮೀಜಿಗಳು. ರಾಜಕೀಯ ನಾಯಕರುಗಳು ನೇತೃತ್ವ ವಹಿಸಿಲ್ಲ. ಸಮುದಾಯದ ಹೋರಾಟ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣವನ್ನು ಚಪ್ಪಲಿ ಬಿಡೋ ಜಾಗದಲ್ಲಿ ಬಿಟ್ಟು ಬನ್ನಿಎಂದು ಈಶ್ವರಪ್ಪ ಖಡಕ್ ಸಂದೇಶ ರವಾನಿಸಿದರು. ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ, ಹಿರಿಯ ಮುಖಂಡ ಮುಕಡಪ್ಪ ಮಾತನಾಡಿ, ಕುರುಬ ಸಮುದಾಯದ ನಾಲ್ವರು ಸ್ವಾಮಿಜಿಗಳ ನೇತೃತ್ವದಲ್ಲಿ ಎಸ್ಟಿ ಹೋರಾಟ ಮುಂದುವರೆಯುತ್ತದೆ.ಕುರುಬರು ಇದ್ದ ನಾಡೇ ಕರ್ನಾಟಕ ಅಂತ ಆಯ್ತು. ದೇವರಾಜು ಅರಸು ಕಾಲದಲ್ಲಿ ಎಸ್ಟಿ ಮಾಡಲು ಶಿಫಾರಸು ಮಾಡಿದ್ರು.

   ಕೇಂದ್ರಕ್ಕೆ ಶಿಫಾರಸು ಮಾಡಿದ್ರು..ಆದ್ರೆ ಅಂದು ಈಶ್ವರಪ್ಪ, ಎಚ್. ಎಂ. ರೇವಣ್ಣ,ಎಂಟಿಬಿ ನಾಗರಾಜ್ ಅಂಥವರು ಇದ್ದಿರಲಿಲ್ಲ. ಇದ್ದಿದ್ದರೆ ಅಂದೇ ಎಸ್ಟಿ ಗೆ ಸೇರ್ಪಡೆ ಆಗುತ್ತಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎಂದರು.ಬೆಂಗಳೂರು ವಿಭಾಗದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬರು ಒಟ್ಟಾಗಿ ಸೇರಿದಾಗ ಯಾವತ್ತು ಅನ್ಯಾಯ ಆಗಿಲ್ಲ. ಹಿಂದೆ ನಾವೆಲ್ಲರೂ ಒಟ್ಟಾಗಿ ಸೇರಿದಕ್ಕೆ ಸಿದ್ದರಾಮಯ್ಯ ಸಿಎಂ ಆದರು. ಈಗ ನಾವೆಲ್ಲರೂ ಒಟ್ಟಾಗಿದ್ದೇವೆ.

   ನಮಗೆ ಎಸ್ಟಿಗೆ ಹೋರಾಟಕ್ಕೆ ಎಲ್ಲರದ್ದು ಒಂದೇ ಧ್ವನಿ ಇರಬೇಕು. ಎಲ್ಲಿಯೂ ಭಿನ್ನಾಭಿಪ್ರಾಯ ಬೇಡ ಎಲ್ಲಿಯೂ ಅಪಸ್ವರ ಬೇಡ. ಇದು ಸಂವಿಧಾನ ಬದ್ದವಾಗಿ ಸಿಗುವ ಹಕ್ಕು, ನಾವು ಈ ಹೋರಾಟ ರೂಪಿಸಬೇಕು ಅಂತ ಸಿದ್ದರಾಮಯ್ಯ ಗೆ ಹೇಳಿದ್ವಿ. ಸಿದ್ದರಾಮಯ್ಯ ನನ್ನ ಸಂಪೂರ್ಣ ಸಹಕಾರ ಇದೆ. ನೀವು ಮುಂದೂವರೆಯಿರಿ ಅಂತ ಹೇಳಿದ್ದಾರೆ.

   ನಾವು ಒಗ್ಗಟ್ಟಾಗಿ ಹೋದ್ರೆ ಯಶಸ್ವಿಯಾಗ್ತೀವಿ ಎಂದರು.ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷೂ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಮಾತನಾಡಿ, ನಾವು ಸರ್ಕಾರದ ಮುಂದೆ ಮನವಿ ಮಾಡ್ತೀವಿ. ಸರ್ಕಾರ ಒಲ್ಲೆ ಅಂದ್ರೆ ಮುಂದಿನ ಹೋರಾಟ ಅನಿವಾರ್ಯ. ಸರ್ಕಾರದಲ್ಲಿ ಸಚಿವರಾಗಿದ್ರು ಈಶ್ವರಪ್ಪ ಬೀದಿಗೆ ಬಂದು ಸಮುದಾಯ ಪರ ನಿಂತಿದ್ದಾರೆ. ಮಠ, ಮುಖ್ಯಮಂತ್ರಿ ಆಗಲು ಸಮುದಾಯ ಒಂದಾಗಿದ್ದು ಕಾರಣ. ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಎಸ್ಟಿ ಹೋರಾಟ ಅಗತ್ಯ. ಈ ಹೋರಾಟ ನಮ್ಮ ಹಕ್ಕು ಪಡೆಯಲು.. ಬೇರೆಯವರ ಹಕ್ಕುಗಳ ವಿರುದ್ಧ ಹೋರಾಟ ಅಲ್ಲ. ಹಿಂದುಳಿದ ವರ್ಗಗಳಿಗೆ ಧ್ವನಿ ಕೊಟ್ಟ ಸಿಎಂ ಇದ್ರೆ ಅದು ದೇವರಾಜು ಅರಸು ಮಾತ್ರ ಎಂದರು.

       ಕನಕ ಗುರುಪೀಠದ ತಿಂಥಣಿ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ,ಗೊಂಡ ಸರ್ಟಿಫಿಕೇಟ್ ಪಡೆಯಲು ಬಂದವರನ್ನ ಹೊರಗೆ ಹಾಕಿದ ಮಂತ್ರಿಗಳ ಬಗ್ಗೆಯೂ ನನಗೆ ಗೊತ್ತು. ಕುರುಬರ ನ್ಯಾಯಕ್ಕೆ ಯಾರಿಗೂ ಅವಕಾಶ ಮಾಡಿಕೊಡುವುದು ಬೇಡ. ಪರೋಕ್ಷವಾಗಿ ನಮ್ಮ ಸಮುದಾಯದಿಂದ ಬೇರೆ ಸಮುದಾಯದವರು ಲಾಭ ಮಾಡಿಕೊಂಡರು. ಎಸ್ಟಿ ಹೋರಾಟದಲ್ಲಿ ಅದು ಆಗದಿರಲಿ. ಮಠದ ಕುರಿಗಳು ಸೇರಿ ರಾಜ್ಯದಲ್ಲಿ ಕುರಿಗಾರರು ಮಳೆಯಿಂದ ಬಹಳ ನಷ್ಟ ಉಂಟಾಗಿದೆ. ಇಲ್ಲಿಯೇ ಕುರುಗಾಯಿಗಳಿಗೆ ಪರಿಹಾರ ವಿಚಾರದಲ್ಲಿ ಘೋಷಣೆ ಮಾಡಬೇಕು ಅಂತ ಒತ್ತಾಯ ಮಾಡಿದರು.

     ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು. ಯಡಿಯೂರಪ್ಪ ಸಿಎಂ ಆಗೋದಕ್ಕೆ. ಈಶ್ವರಪ್ಪ ಸಚಿವರಾಗುವುದಕ್ಕೆ ನಾನು, ಎಚ್ ವಿಶ್ವನಾಥ್, ಬೈರತಿ ಬಸವರಾಜ್, ಶಂಕರ್ ಕಂಬಳಿ ಬೀಸಿದ್ದರಿಂದಲೇ ಮತ್ತು ನಮ್ಮ ತ್ಯಾಗದ ಫಲವಾಗಿ ಸರ್ಕಾರ ರಚನೆ ಆಗಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಎಸ್ಟಿ ಒತ್ತಾಯ ಪರಿಗಣಿಸಬೇಕು ಎಂದು ಆಗ್ರಹ ಮಾಡಿದರು. ಸಮಾರಂಭದಲ್ಲಿ ಕುರುಬರ ಎಸ್ ಟಿ ಹೋರಾಟ ಸಮಿತಿ ಅಧ್ಯಕ್ಷರು, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಹೋರಾಟ ಸಮಿತಿಯ ಖಜಾಂಚಿ ಕಾಂತೇಶ್, ಶಾಸಕ ಬಂಡೆಪ್ಪ ಖಾಶ್ಯಂಪೂರ ಶ್ರೀ ಅಮರೇಶ್ವರ ಮಹಾರಾಜರು, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಶಾಸಕ ಆರ್.ಶಂಕರ್, ಮಾಜಿ ಸಚಿವ ರಘುನಾಥ್ ರಾವ್ ಮಲಕಾಪೂರೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ನಿರ್ದೇಶಕ ಶಾಂತಪ್ಪ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವೀರಣ್ಣ ಹಳೇಗೌಡರ, ಡಾ.ಬಿ,ಕೆ.ರವಿ, ರಾಮಚಂದ್ರಪ್ಪ, ಟಿಬಿ ಬೆಳಗಾವಿ, ಹೋರಾಟ ಸಮಿತಿಯ ಕಾರ್ಯದರ್ಶಿ ಆನೇಕಲ್ ದೊಡ್ಡಯ್ಯ, ಪ್ರದೇಶ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ ಬಿ.ಟಿ. ಜಗದೀಶ್, ವಿವಿಧ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ರಾಜ್ಯಾದ್ಯಂತ ಕುರುಬ ಸಮಾಜ ವಿವಿಧ ಮಠದ ಮಠಾಧೀಶರುಗಳು ಉಪಸ್ಥಿತರಿದ್ದರು.

   ಇದೇ ಸಂದರ್ಭದಲ್ಲಿ ಹಾಲುಮತ ಮಹಾಕಾವ್ಯ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಅಷ್ಟೇ ಅಲ್ಲ ಸಮಾರಂಭದ ಹೊರಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ 19 ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link