ನವದೆಹಲಿ:
ಭಾರತ ಮತ್ತು ಚೀನಾ ಮಧ್ಯೆ 8ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಈ ವಾರ ಏರ್ಪಡುವ ಸಾಧ್ಯತೆಯಿದ್ದು ಪೂರ್ವ ಲಡಾಕ್ ನಲ್ಲಿ ಎರಡೂ ದೇಶಗಳ ಸೇನೆ ಹಿಂಪಡೆಯುವ ಕುರಿತು ಮಾತುಕತೆ ಮುಂದುವರಿಸುವ ಸಾಧ್ಯತೆಯಿದೆ.ಇನ್ನೊಂದು ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತಿದ್ದು ಈ ಸಮಯದಲ್ಲಿ ಸೇನೆ ನಿಯೋಜನೆ ಕಷ್ಟವಾಗುವುದರಿಂದ ಹಿಂಪಡೆಯುವುದು ಸೂಕ್ತ ಎಂಬ ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ. ಕಳೆದ ಅಕ್ಟೋಬರ್ 12ರಂದು ನಡೆದಿದ್ದ ಏಳನೇ ಸುತ್ತಿನ ಮಾತುಕತೆಯಲ್ಲಿ ಯಾವುದೇ ಫಲಪ್ರದ ಕಾಣಲಿಲ್ಲ.
ಮಾತುಕತೆ ಮುಗಿದ ನಂತರ ರಚನಾತ್ಮಕವಾಗಿ ಧನಾತ್ಮಕವಾಗಿ ಮುಗಿಯಿತು ಎಂದಷ್ಟೇ ಸೇನಾ ಮೂಲಗಳು ತಿಳಿಸಿದ್ದು, ಏನು ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಲಿಲ್ಲ. ಕಳೆದ ಬಾರಿ ಮಾತುಕತೆ ಮುಗಿದ ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಭಾರತ ಮತ್ತು ಚೀನಾ ಸೇನೆ, ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ, ಸಂವಹನ ನಡೆಸಲು ಎರಡೂ ದೇಶಗಳು ಒಪ್ಪಿಗೆ ನೀಡಿದ್ದು, ಸೇನೆ ಹಿಂಪಡೆಯಲು ಪರಸ್ಪರ ಸಹಮತಿಯ ಪರಿಹಾರವನ್ನು ಆದಷ್ಟು ಶೀಘ್ರ ಕಂಡುಹಿಡಿಯಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದೆ.8ನೇ ಸುತ್ತಿನ ಮಾತುಕತೆ ಈ ವಾರ ನಡೆಯುವ ಸಾಧ್ಯತೆಯಿದ್ದು ಇನ್ನೂ ದಿನಾಂಕ ನಿಗದಿಯಾಗಿಲ್ಲ.