ನೆರೆ ಪರಿಹಾರ 10000 ಕೋಟಿಗೆ ಕೇಂದ್ರಕ್ಕೆ ಸಿಎಂ ಬೇಡಿಕೆ..!

ಬೆಂಗಳೂರು

       ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಕಡೆ ಭಾರೀ ಮಳೆ ಹಾಗೂ ಪ್ರವಾಹ ಉಂಟಾಗಿದ್ದು, ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ತಕ್ಷಣವೆ 10,000 ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

      ಪ್ರಧಾನಿ ನರೇಂದ್ರ ಮೋದಿಯವರಿಗೆ ಸುದೀರ್ಘ ಪತ್ರ ಬರೆದಿರುವ ಯಡಿಯೂರಪ್ಪನವರು, ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ರಾಜ್ಯಕ್ಕೆ 21,609 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ವಿವರಿಸಿದ್ದಾರೆ. ಜನ-ಜಾನುವಾರು, ಆಸ್ತಿ-ಪಾಸ್ತಿ, ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ಪರಿಹಾರ ಕೈಗೊಳ್ಳಲು ಆರ್ಥಿಕ ನೆರವು ಅಗತ್ಯವಿದ್ದು, ಕರ್ನಾಟಕಕ್ಕೆ ಕೂಡಲೇ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ಸಂಕಷ್ಟದಲ್ಲಿರುವವರ ರಕ್ಷಣೆಗೆ ಕೇಂದ್ರ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

     ಸ್ವತಃ ನಾನೇ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಮಳೆ ಹಾನಿಯಿಂದ ಉಂಟಾಗಿರುವ ಸ್ಥಿತಿಗತಿಗಳ ಕುರಿತು ಅವಲೋಕಿಸಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾಹಿತಿ ಪಡೆದಿದ್ದೇನೆ. ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಊಹೆಗೂ ಮೀರಿದ ಹಾನಿ ಉಂಟಾಗಿದೆ ಎಂದು ಸಿಎಂ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

    ನೆರೆ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಕುಸಿತ, ನೀರು ನುಗ್ಗಿ ವಸ್ತುಗಳು ಹಾನಿಯಾಗಿರುವ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಸಾವಿರ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿದೆ.

    ಇದಲ್ಲದೆ, ಸಂಪೂರ್ಣ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ ಪ್ರತಿ ಮನೆಗೆ ರೂ.5 ಲಕ್ಷ ಪರಿಹಾರ ಹಾಗೂ ಹೆಚ್ಚಿನ ಹಾನಿ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ ರೂ.3 ಲಕ್ಷ ಭಾಗಶಃ ಹಾನಿಗೊಳಗಾಗಿರುವ ಮನೆಗಳ ದುರಸ್ತಿಗೆ ರೂ.50 ಸಾವಿರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

       ಕಳೆದ ವರ್ಷವೂ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ನಷ್ಟ ಸಂಭವಿಸಿತ್ತು. ಇದೀಗ ಅದೇ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜನತೆ ಆತಂಕದಲ್ಲಿದ್ದಾರೆ. ಕೇಂದ್ರ ಮಾರ್ಗಸೂಚಿಗಳನ್ನು ಬದಿಗೊತ್ತಿ ರಾಜ್ಯಕ್ಕೆ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಇದುವರೆಗೂ ಮೂರು ಹಂತದಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾನಿ ಉಂಟಾಗಿದೆ. ಆಗಸ್ಟ್‍ನಿಂದ ಸೆಪ್ಟೆಂಬರ್ 15ರವರೆಗೆ ಮೊದಲ ಹಂತದಲ್ಲಿ ಕರಾವಳಿ, ಮಲೆನಾಡು ಹಾಗೂ ಉತ್ತಕ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಆದ ಮಳೆ ಹಾನಿಯಿಂದ 9,441 ಕೋಟಿ ರೂ. ನಷ್ಟವಾಗಿದೆ.

    ಸೆಪ್ಟಂಬರ್‍ನಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಂಟಾದ 2ನೇ ಹಂತದ ನೆರೆಯಿಂದ 5,668 ಕೋಟಿ ರೂ. ಹಾಗೂ ಪ್ರಸ್ತುತ ಅಕ್ಟೋಬರ್ 10ರಿಂದ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವೆಡೆ ಉಂಟಾಗಿರುವ 3ನೇ ಹಂತದ ಪ್ರವಾಹ ಪರಿಸ್ಥಿತಿಯಿಂದ ಅಂದಾಜು 6,500 ಕೋಟಿ ರೂ.ನಷ್ಟು ಹಾನಿ ಉಂಟಾಗಿದೆ.

    ಒಟ್ಟಾರೆ ಈ ಮೂರೂ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, 6 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ರಸ್ತೆ, ಕಾಲುವೆಗಳು, ಮೇಲ್ಸೇತುವೆ, ಶಾಲೆ, ಅಂಗನವಾಡಿ ಕಟ್ಟಡ, ವಿದ್ಯುತ್ ಸಂಪರ್ಕ ಸೇರಿದಂತೆ ಮತ್ತಿತರ ಮೂಲ ಸೌಕರ್ಯ ವ್ಯವಸ್ಥೆ ಹಾಳಾಗಿದೆ ಎಂದು ಪ್ರಧಾನಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

      ಸೆ.15ರ ನಂತರ ಉಂಟಾಗಿರುವ ಮಳೆ ಹಾನಿ ಹಾಗೂ ನಷ್ಟಕ್ಕೆ ಸಂಬಂಧಿಸಿದ ಹೆಚ್ಚುವರಿ ವರದಿಯನ್ನು ಅಕ್ಟೋಬರ್ ಮಾಸಾಂತ್ಯದ ವೇಳೆಗೆ ಸಲ್ಲಿಸಲಾಗುವುದು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್ ನಿಂದಾಗಿ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಎಸ್‍ಡಿಆರ್ ಎಫ್ ಅಡಿಯ ಭಾಗಶಃ ಅನುದಾನ ಹಾಗೂ ರಾಜ್ಯ ಬಜೆಟ್ ನ ಸಾಕಷ್ಟು ಅನುದಾನವನ್ನು ಬಳಸಲಾಗಿದೆ. ಹೀಗಾಗಿ ರಾಜ್ಯ ಅತ್ಯಂತ ಕಠಿಣ ಆರ್ಥಿಕ ಪರಿಸ್ಥಿತ ಎದುರಿಸುತ್ತಿದೆ. ಹೀಗಾಗಿ ರೂ.10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. 

     ಮೋದಿ ಅವರು ಅ.16ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ, ಮಳೆ ಹಾನಿ ಕುರಿತು ಚರ್ಚೆ ನಡೆಸಿ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದರು.

    ಇದಾದ ಮರುದಿನವೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿಯನ್ನು ಪರಿಗಣಿಸಿ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳು, ರೈತರು, ಪರಿಹಾರ, ಪುನರ್ವಸತಿ ನಿರ್ಮಾಣ ಕಾರ್ಯ ಕೈಗೊಳ್ಳಲು ರಾಜ್ಯಕ್ಕೆ 10,000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದರು. ಅದರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಪ್ರಧಾನಿಗೆ ಪತ್ರ ಬರೆದು, ಕರ್ನಾಟಕ ರಾಜ್ಯಕ್ಕೆ 10 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link