ನವದೆಹಲಿ:
ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಸ್ವಯಂ ಸೇವಾ ಸಂಸ್ಥೆಯೊಂದು (ಎನ್‌ಜಿಒ) ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ರೂಪಿಸಲಾದ ಈ ಯೋಜನೆಯನ್ನು ಪ್ರಶ್ನಿಸಿ 2017ರಲ್ಲಿ ತಾನು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ತುರ್ತಾಗಿ ನಡೆಸಬೇಕೆಂದು ಸಂಸ್ಥೆಯು ಮನವಿ ಮಾಡಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೆಸರಿನ ಸ್ವಯಂ ಸೇವಾ ಸಂಸ್ಥೆಯು ಈ ವರ್ಷದ ಜನವರಿಯಲ್ಲಿ ನಡೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯ ವೇಳೆಯೂ ಈ ಯೋಜನೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈ ಯೋಜನೆಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ಆಗ ನ್ಯಾಯಾಲಯವು ತಿಳಿಸಿತ್ತು.ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯು ಜನವರಿ 20ರಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಶೀಘ್ರವೇ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ನಂತರ ಈ ಅರ್ಜಿಯ ವಿಚಾರಣೆಯೇ ನಡೆದಿರಲಿಲ್ಲ. ಈಗ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮುಖಾಂತರ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ