ಬೆಂಗಳೂರು
ದೇಶದ ರಕ್ಷಣಾ ಕ್ಷೇತ್ರದ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ರಕ್ಷಣಾ ವಲಯದ ಉಪ ಉತ್ಪನ್ನಉತ್ಪಾದಿಸುವ ಕಂಪೆನಿಯೊಂದಕ್ಕೆ ಕೈಗಾರಿಕಾ ನಿವೇಶನ ಮಂಜೂರು ಮಾಡದೇ ಕೆ.ಎಸ್.ಎಸ್.ಐ.ಡಿ.ಸಿ ಸತಾಯಿಸುತ್ತಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಪ್ರಧಾನ ಆದ್ಯತೆ ನೀಡಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ತದ್ವಿರುದ್ಧ ಧೋರಣೆ ಅನುಸರಿಸುತ್ತಿದೆ. ಇಲ್ಲಿನ ಅಧಿಕಾರಿಗಳ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದಾಗಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾಗೆ ಕೆಟ್ಟಹೆಸರು ಬರುವಂತಾಗಿದೆ. ಜತೆಗೆ ರಕ್ಷಣಾ ವಲಯದಲ್ಲಿ ಖಾಸಗಿ ಕ್ಷೇತ್ರದ ಸಹಭಾಗಿತ್ವದ ಆಶಯ ಹೊತ್ತವರಿಗೆ ರಾಜ್ಯ ಸರ್ಕಾರದ ಧೋರಣೆ ಭ್ರಮನಿರಸನ ಉಂಟು ಮಾಡಿದೆ.
ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್(ಎಇಸಿಪಿಎಲ್) ಹಲವಾರು ರಕ್ಷಣಾ ಕ್ಷೇತ್ರಗಳಿಗೆ ಹೈ ಎಂಡ್ ಮೆಟಲ್ ಕಟಿಂಗ್ ಟೂಲ್ಸ್ ಗಳನ್ನು ಪೂರೈಕೆ ಮಾಡುತ್ತಿದೆ. ಈ ಸಂಸ್ಥೆ ತನ್ನ ಕೈಗಾರಿಕೆ ಸ್ಥಾಪನೆಗಾಗಿಭೂಮಿ ಪಡೆಯಲು ಎರಡು ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಯಾವುದೇ ಪ್ರತಿಫಲ ದೊರೆತಿಲ್ಲ.
ಸ್ವತಃ ಅಂದಿನ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಮಂಡಳಿ -ಕೆಎಸ್‍ಎಸ್‍ಐಡಿಸಿಗೆ ಪತ್ರ ಬರೆದು ಅರ್ಜಿ ಸಲ್ಲಿಸಿರುವ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಆದ್ಯತೆ ಮೇರೆಗೆ ಕೈಗಾರಿಕಾ ಭೂಮಿ ಮಂಜೂರು ಮಾಡುವಂತೆ ಸೂಚಿಸಿದ್ದರು. ಆದರೆ ಕೆ.ಎಸ್.ಎಸ್.ಐ.ಡಿ.ಸಿ ನಿವೇಶನ ಮಂಜೂರು ಮಾಡುವುದಿರಲಿ, ಈ ಕುರಿತ ಪ್ರಕ್ರಿಯೆಯನ್ನೇ ನಡೆಸಿಲ್ಲ.
ಒಂದೆಡೆ ಭಾರತ ? ಪಾಕಿಸ್ತಾನ ಗಡಿ ಭಾಗದಲ್ಲಿ ಪಾಕ್ ನಿಂದ ನಿರಂತರವಾಗಿ ಕದನವಿರಾಮ ಉಲ್ಲಂಘನೆಯಾಗುತ್ತಿದ್ದು, ಭಾರತ ? ಚೈನಾದ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸನ್ನದ್ಧತೆ ಕಂಡು ಬಂದಿದೆ. ಇಂತಹ ಸವಾಲುಗಳನ್ನು ಎದುರಿಸುವ ಉದ್ದೇಶದಿಂದಲೇ ಮೋದಿ ಸರ್ಕಾರ ಮುಂದಾಲೋಚನೆಯಿಂದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗುವ ಕನಸ್ಸನ್ನು ಖಾಸಗಿ ವಲಯದಲ್ಲಿ ಬಹು ಹಿಂದೆಯೇ ಬಿತ್ತಿದೆ.
ಆದರೆ ಈ ಕನಸು ನನಸು ಮಾಡಲು ಹಿಂದಿನ ಜೆಡಿಎಸ್ ? ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜಕೀಯ ಕಾರಣಕ್ಕಾಗಿ ಸಹಜವಾಗಿಯೇ ಉದಾಸೀನತೆ ತೋರಿತ್ತು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕೂಡ ಇದೇ ಧೋರಣೆ ಮುಂದುವರೆಸಿರುವುದು ಔದ್ಯಮಿಕ ವಲಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಹಿಂದೂಸ್ತಾನ್ ಏರೋನಾಟಿಕಲ್ ಇಂಡಸ್ಟ್ರೀಸ್ ಮತ್ತು ಇತರೆ ರಕ್ಷಣಾ ಕ್ಷೇತ್ರದ ಸಂಸ್ಥೆಗಳು ಯುದ್ಧ ವಿಮಾನಗಳು ಅಥವಾ ಶಸ್ತ್ರಾಸ್ತ್ರಗಳನ್ನು ಕಾಲಮಿತಿಯಲ್ಲಿ ನೀಡುವಲ್ಲಿ ವಿಳಂಬ ಮಾಡುತ್ತಿವೆ ಎಂಬ ನಕಾರಾತ್ಮಕ ವರದಿಗಳು ಬರುತ್ತಿವೆ. ಆದರೆ, ರಾಜ್ಯದ ಅಧಿಕಾರಿಗಳ ಭ್ರಷ್ಟಾಚಾರ ಜತೆಗೆ ನಿಷ್ಕಾಳಜಿ ಸಹಪ್ರಮುಖ ಕಾರಣವೆನ್ನಲಾಗಿದೆ.
ಎಡಿಡಿ ಇಂಜಿನಿಯರಿಂಗ್ ಸಂಸ್ಥೆ ಜಿಎಂಬಿಎಚ್ ಜರ್ಮನಿಯ ಅಂಗಸಂಸ್ಥೆಯಾಗಿದೆ. ಬೆಂಗಳೂರಿನ ಗಿರೀಶ್ ಲಿಂಗಣ್ಣ ಅವರ ಎಇಸಿಪಿಎಲ್ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ. ಇವರು ಭಾರತದಲ್ಲಿ ಕಂಪನಿಯ ನಿರ್ದೇಶಕರಾಗಿದ್ದಾರೆ.
ಈ ಕಂಪನಿ ರಷ್ಯಾದಲ್ಲಿಯೂ ತನ್ನ ವ್ಯವಹಾರ ಹೊಂದಿದೆ. ಕಂಪನಿಯು ಎಚ್‍ಎಎಲ್‍ಗೆ ಎಲ್‍ಸಿಎ ತೇಜಸ್ ಮತ್ತು ಇಂಜಿನ್ ಯೋಜನೆಗೆ ಅಗತ್ಯವಾದ ಮೆಟಲ್ ಕಟಿಂಗ್ ಟೂಲ್ಸ್ ಗಳನ್ನು ಪೂರೈಕೆ ಮಾಡುತ್ತಿತ್ತು. ಇದರ ಜತೆಗೆ ಕಂಪನಿಯು ಡಿಆರ್ಡಿಒ,515 ಆರ್ಮಿ ಬೇಸ್, ನ್ಯಾಷನಲ್ ಏರೋಸ್ಪೇಸ್ ಲ್ಯಾಬರೇಟರೀಸ್ ಮತ್ತು ಏರೋಸ್ಪೇಸ್‍ಗೆ ಸಂಬಂಧಿಸಿದ ಇತರೆ ಕಂಪನಿಗಳೊಂದಿಗೆ ನಿಕಟವಾಗಿ ವ್ಯವಹಾರ ನಡೆಸುತ್ತಾ ಬಂದಿದೆ. ಜೆಎಸ್‍ಡಬ್ಲ್ಯೂ, ಮಿಶ್ರಾ ಧಾತು ನಿಗಮ್ ಲಿಮಿಟೆಡ್, ಬಾಷ್ ಸೇರಿದಂತೆ ಇನ್ನಿತರೆ ದೊಡ್ಡ ಕಂಪನಿಗಳೊಂದಿಗೆ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ `ಮೇಕ್ ಇನ್ ಇಂಡಿಯಾ? ಘೋಷಣೆಯಿಂದ ಪ್ರೇರೇಪಿತವಾಗಿರುವ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ ಪ್ಲಾಟ್ ನಿರ್ಮಾಣಕ್ಕೆ ಭೂಮಿಗಾಗಿ (ಸಂಖ್ಯೆ ಡಿ143) ಅರ್ಜಿ ಸಲ್ಲಿಸಿತ್ತು.
ಆದರೆ, 2018 ರಿಂದ ಈ ಕಂಪನಿಗೆ ನಿರಾಸೆ ಬಿಟ್ಟು ಬೇರೇನು ದೊರೆತಿಲ್ಲ. ಏಕೆಂದರೆ, ಅಂದಿನಿಂದ ಕೆಎಸ್‍ಎಸ್‍ಐಡಿಸಿ ಈ ಕಂಪನಿಯ ಮನವಿ ಬಗ್ಗೆ ಯಾವುದೇ ನಿರ್ಧಾರವನ್ನು ಹೊರ ಹಾಕಿಲ್ಲ. ಕಂಪನಿಯ ಅಧಿಕಾರಿಗಳು ಭೂಮಿ ಪಡೆಯಲು ಕಚೇರಿಗಳ ಕಂಬ ಸುತ್ತುವ ಕೆಲಸದಲ್ಲೇ ನಿರತರಾಗಿದ್ದಾರೆ.
ಕೆಎಸ್‍ಎಸ್‍ಐಡಿಸಿ ಧೋರಣೆ ವಿರುದ್ದ ಎಡಿಡಿ 28 ಆಗಸ್ಟ್ 2018 ರಲ್ಲಿ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ದೂರು ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ 2018ರ ಸೆಪ್ಟಂಬರ್ 6 ರಂದು ಕೆಎಸ್‍ಎಸ್‍ಐಡಿಸಿಗೆ ಪತ್ರ ಬರೆದು ಕಂಪನಿಗೆ ಆದ್ಯತೆ ಮೇಲೆ ಭೂಮಿಯನ್ನು ಮಂಜೂರು ಮಾಡುವಂತೆ ನಿರ್ಮಲಾಸೀತಾರಾಮನ್ ನಿರ್ದೇಶನ ನೀಡಿದ್ದರು. ಆದರೆ, ಈ ನಿರ್ದೇಶನಕ್ಕೆ ಕೆಎಸ್‍ಎಸ್‍ಐಡಿಸಿ ತಲೆಯನ್ನೇ ಕೆಡಿಸಿಕೊಂಡಿಲ್ಲ.
ಬಳಿಕ ರಕ್ಷಣಾ ಇಲಾಖೆ ಕೆಎಸ್‍ಎಸ್‍ಐಡಿಸಿಗೆ ಮತ್ತೊಂದು ಪತ್ರ ಬರೆದು, “ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಕೆಗೆ ಅವಕಾಶ ನೀಡಿ ಮತ್ತು ಹೂಡಿಕೆ ಮಾಡಲು ಆಸಕ್ತಿ ಇರುವವರೊಂದಿಗೆ ಚರ್ಚೆ ನಡೆಸಿ ಎಂದು ಸೂಚಿಸಿತ್ತು. ರಕ್ಷಣಾ ಸಚಿವರು ರಕ್ಷಣಾ ಕೈಗಾರಿಕೆ ಅಭಿವೃದ್ದಿ ಸಭೆಯಲ್ಲಿ ರಕ್ಷಣಾ ಹೂಡಿಕೆದಾರರ ಘಟಕವನ್ನು ಸ್ಥಾಪಿಸುವಂತೆ ಆದೇಶಿಸಿದ್ದರು. ಆ ಪತ್ರವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ಹೇಳಿದೆ. ಆದರೆ ಮುಂದಿನ ಕ್ರಮ ಏನು? ಎನ್ನುವುದು ನಿಗೂಢವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ