ತುಮಕೂರು:

ನವೆಂಬರ್ ತಿಂಗಳು ಬಂತೆಂದರೆ ಸಾಕು ಪಿಂಚಣಿ ಪಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಿ ನಿವೃತ್ತ ನೌಕರರು, ಸ್ಥಳೀಯ ಸಂಸ್ಥೆ ನಿವೃತ್ತ ಸಿಬ್ಬಂದಿ, ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು, ನಿವೃತ್ತ ಪತ್ರಕರ್ತರು ತಮ್ಮ ಜೀವಿತಾವಧಿ ಪ್ರಮಾಣ ಪತ್ರವನ್ನು ತಿಂಗಳಾಂತ್ಯದೊಳಗೆ ಸಂಬಂಧಪಟ್ಟ ಬ್ಯಾಂಕ್, ಇಲಾಖೆ, ಖಜಾನೆಗೆ ಸಲ್ಲಿಸಬೇಕಿರುವುದು ಹಿಂದಿನಿಂದ ಜಾರಿಯಲ್ಲಿರುವ ನಿಯಮ. ಆದರೆ ಪ್ರಸಕ್ತ ಕೋವಿಡ್ ಕಾಲಘಟ್ಟದಲ್ಲಿ ಯೋಜನೇತರ ಶೀರ್ಷಿಕೆಯಡಿ ಬರುವ ಪಿಂಚಣಿದಾರರಿಗೆ ಈ ನಿಯಮ ಸಮಸ್ಯೆಯಾಗಿ ಪರಿಣಮಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಿ ನಿವೃತ್ತ ನೌಕರರು, ಮಾಜಿ ಸೈನಿಕರಿಗಾದರೂ “ಜೀವನ್ ಪ್ರಮಾಣ್ ‘’ಆನ್‍ಲೈನ್ ಪೋರ್ಟಲ್‍ನಲ್ಲಿ ನೋಂದಾಯಿಸಿ ಬಯೋಮೆಟ್ರಿಕ್ ಮೂಲಕ ಡಿಜಿಟಲ್ ಜೀವಿತಾವಧಿ ಪ್ರಮಾಣಪತ್ರ ಪಡೆದು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಅವರಿಗೆ ಬ್ಯಾಂಕ್‍ಶಾಖೆಗಳಿಗೆ ಖುದ್ದು ತೆರಳಿ ಅರ್ಜಿ ಭರ್ತಿ ಮಾಡಿಸಲ್ಲಿಸಲು ಸಹ ಅವಕಾಶವಿದೆ. ಆದರೆ ಈ ಆನ್ಲೈನ್ ಅವಕಾಶ ಯೋಜನೇತರ ವಿಭಾಗಕ್ಕೆ ಬರುವಅತೀ ಹಿರಿಯ ಜೀವಿಗಳಾಗಿರುವ ಸ್ವಾತಂತ್ರ್ಯ ಹೋರಾಟಗಾರರು, ರಂಗಭೂಮಿ, ಶಿಲ್ಪ, ಚಿತ್ರ ಕಲಾವಿದರು, ಯಕ್ಷಗಾನ, ಜನಪದ, ಕಲಾವಿದರು, ನಿವೃತ ್ತಪತ್ರಕರ್ತರು ಹಾಗೂ ಅವರ ಕುಟುಂಬ ಪಿಂಚಣಿದಾರರಿಗಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಇವರು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಗೆಜೆಟೆಡ್ ಅಧಿಕಾರಿ ದೃಢೀಕರಿಸಿದ ಜೀವಿತಾವಧಿ ಪ್ರಮಾಣಪತ್ರವನ್ನು ಖುದ್ದು ಸಲ್ಲಿಕೆ ಮಾಡಬೇಕಿರುವುದು ಕೋವಿಡ್ ಕಾಲಘಟ್ಟದಲ್ಲಿ ಹಿರಿಯ ಜೀವಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸರಕಾರದ ನಿಲುವಿಗೆ ಸರಕಾರದ ನೀತಿಯೇ ವಿರುದ್ಧ :
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೋವಿಡ್ ಕಾಲಘಟ್ಟದಲ್ಲಿ ಹೊರಗಡೆ ಹೆಚ್ಚು ತಿರುಗಾಡಬಾರದು, ಮನೆಯಲ್ಲೇಇರಿ ಎಂದು ಸರಕಾರವೇ ನಿಯಮ ರೂಪಿಸಿರುವಾಗ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಕೆಯ ಹೆಸರಲ್ಲಿ ಪ್ರಮಾಣಪತ್ರಕ್ಕೆ ಗೆಜೆಟೆಡ್ ಅಧಿಕಾರಿ ಸಹಿಹಾಕಿಸಲು ಒಮ್ಮೆ ತೆರಳಬೇಕು, ಮತ್ತೊಮ್ಮೆ ಇಲಾಖೆ ಮುಖ್ಯಸ್ಥರಿಗೆ ಸಲ್ಲಿಸಲು ಖುದ್ದು ತೆರಳಬೇಕಿರುವುದನ್ನು ನೋಡಿದರೆ, ಸರಕಾರಕ್ಕೆ ತಾನೇ ರೂಪಿಸಿದ ನಿಯಮದ ಬಗ್ಗೆ ಅರಿವಾಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. ಅದರಲ್ಲೂ ಅತೀ ಹಿರಿಯ ನಾಗರಿಕರಾಗಿರುವ 80 ದಾಟಿರುವ ಸ್ವಾತಂತ್ರ್ಯ ಹೋರಾಟಗಾರರು, ಅವರ ಮಡದಿಯರು ಪಿಂಚಣಿ ಸ್ಥಗಿತಗೊಂಡರೆಂಬ ಆತಂಕದಿಂದ ಕಚೇರಿಗೆ ಎಡತಾಕುವ ಅನಿವಾರ್ಯತೆ ಎದುರಾಗಿರುವುದು ಆಡಳಿತ ವ್ಯವಸ್ಥೆಯ ಅವ್ಯವಸ್ಥೆಗೆ ನಿದರ್ಶನವೆನಿಸಿದೆ.
ಜಿಲ್ಲಾ ಕೇಂದ್ರದ ಕಚೇರಿಗೆ ಬಂದು ಸಲ್ಲಿಸಬೇಕು:
ಕನ್ನಡ ಮತ್ತು ಸಂಸ್ಕøತಿಯ ಪಿಂಚಣಿ ಪಡೆಯುತ್ತಿರುವ ಕಲಾವಿದರು, ಅವರ ಕುಟುಂಬದವರು ತಾಲೂಕು ಮಟ್ಟದಲ್ಲಿ ಕಚೇರಿ ಇಲ್ಲದ ಕಾರಣಕ್ಕೆ ಜಿಲ್ಲಾ ಕೇಂದ್ರದ ಕಚೇರಿಗೆ ಬಂದು ಸಲ್ಲಿಸಬೇಕು. ಇದೇ ರೀತಿ ನಿವೃತ್ತ ಪತ್ರಕರ್ತರು, ಅವರ ಕುಟುಂಬದವರು ವಾರ್ತಾ ಇಲಾಖೆಗೆ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದವರು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಈ ಪೈಕಿ ಜಿಲ್ಲೆಯಲ್ಲಿ 374 ಸಂಖ್ಯೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಆಯಾ ತಾಲೂಕು ತಹಸೀಲ್ದಾರ್ ಕಚೇರಿಗೆ ತೆರಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಆದರೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿ ಪ್ರಮಾಣಪತ್ರ ಸಲ್ಲಿಕೆಗೆ ಪರ್ಯಾಯ ವ್ಯವಸ್ಥೆಯ ಅವಕಾಶವಾಗಬೇಕು ಎಂಬುದು ಹಿರಿಯ ಜೀವಗಳ ಬೇಡಿಕೆಯಾಗಿದೆ.
ಖಜಾನೆ 2 ಪಿಂಚಣಿದಾರರ ಪಡಿಪಾಟಲು ಕೇಳೋರಿಲ್ಲ:

ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಜೂನ್ ವೇಳೆಗೆ ರಾಜ್ಯ ಸರಕಾರ ನಿವೃತ್ತ ಸರಕಾರಿ ನೌಕರರ ಪಿಂಚಣಿಯನ್ನು ಹೊರತುಪಡಿಸಿ ಉಳಿದೆಲ್ಲ ಪಿಂಚಣಿಗಳಾದ ಸ್ವಾತಂತ್ರ್ಯ ಹೋರಾಟಗಾರರು, ಕಲಾವಿದರು, ನಿವೃತ್ತ ಪತ್ರಕರ್ತರು ಹಾಗೂ ಅವರ ಕುಟುಂಬದವರು, ವೃದ್ಧಾಪ್ಯವೇತನ , ಸಂಧ್ಯಾಸುರಕ್ಷಾ, ವಿಶೇಷಚೇತನರ ವೇತನ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಮಾಸಾಶನಗಳನ್ನು ಖಜಾನೆ 2 ವ್ಯಾಪ್ತಿಗೆ ಸೇರಿ ಆಯಾ ಇಲಾಖೆಯ ಮೂಲಕ ಬಿಲ್ ಮಾಡಿ ಖಜಾನೆಗೆ ಸಲ್ಲಿಸಿ ಬಿಡುಗಡೆ ಮಾಡಿಸುವ ಪದ್ದತಿ ಜಾರಿಗೆ ತಂದಿದೆ. ಇದರಲ್ಲಿ ಹಲವು ಎಡವಟ್ಟುಗಳಾಗಿ ಹೊಸದಾಗಿ ಮಾಸಾಶನ ಮಂಜೂರಾದವರಿಗೆ ಹಿಂದಿನ ಬಾಕಿ ಬಿಡುಗಡೆಯಾಗದಿರುವುದು ಒಂದೆಡೆಯಾದರೆ, ತಿಂಗಳಿಗೆ ಸರಿಯಾಗಿ ಪಿಂಚಣೆ ಖಾತೆಗೆ ಜಮೆ ಆಗದಿರುವುದು ಕಂಡು ಬಂದಿದೆ. ಎಷ್ಟೋ ಮಂದಿ ಪಿಂಚಣಿಯೇ ಆಧಾರ್, ಬ್ಯಾಂಕ್ ಖಾತೆ ಸರಿಯಾಗಿ ಜೋಡಣೆಯಾಗದೇ ಜಿಲ್ಲೆಯಲ್ಲಿ 7653 ಸಾಮಾಜಿಕ ಭದ್ರತಾ ಮಾಸಾಶನ ತಾತ್ಕಾಲಿಕ ಸ್ಥಗಿತಗೊಂಡಿದೆ. ಇಲಾಖೆಗಳಲ್ಲಿ ಬಿಲ್ ಮಾಡುವಲ್ಲಿ ವಿಳಂಬ, ಇಲಾಖೆ ಪ್ರಧಾನ ಕಚೇರಿಯ ಅನುದಾನಕ್ಕೆ ಕಾಯುವ ಸ್ಥಿತಿ, ಖಜಾನೆಗೆ ಹೋಗಿ ಮತ್ತೆ ಖಾತೆಗೆ ಜಮೆ ಆಗುವ ಪ್ರಕ್ರಿಯೆಗಳೇ ಹೆಚ್ಚಾಗಿ ಪಿಂಚಣಿದಾರರು ರೋಸಿಹೋಗುವ ಸ್ಥಿತಿ ಎದುರಾಗಿದೆ.
ಗೆಜೆಟೆಡ್ ಅಧಿಕಾರಿ ಸಹಿ ಏಕೆ ಬೇಕು?
ಜೀವಿತಾವಧಿ ಪ್ರಮಾಣಪತ್ರ ಸಲ್ಲಿಸಲು ಖುದ್ದು ಪಿಂಚಣಿದಾರರೇ ಆಯಾ ಇಲಾಖೆ ಮುಖ್ಯಸ್ಥರ ಬಳಿ ಬರುವುದರಿಂದ ಅವರು ಸಲ್ಲಿಸುವ ಪ್ರಮಾಣಪತ್ರವನ್ನು ಗೆಜೆಟೆಡ್ ಅಧಿಕಾರಿ ದೃಢೀಕರಿಸಬೇಕೆಂಬ ನಿಯಮ ಹೊರೆಯೆನಿಸಿದೆ. ಅಂಗೈಯಲ್ಲೇ ಆಡಳಿತ ಎನ್ನುವ ಸರಕಾರದ ಆಶಯಕ್ಕೆ ಇಂತಹ ನಿಯಮಗಳು ವ್ಯತಿರಿಕ್ತವಾಗಿವೆ. ಅದರಲ್ಲೂ ಕೋವಿಡ್ ಕಾಲಘಟ್ಟದಲ್ಲಿ ಗೆಜೆಟೆಡ್ ಅಧಿಕಾರಿ ಸಹಿ, ಪ್ರಮಾಣ ಪತ್ರ ಸಲ್ಲಿಕೆಗೆಂದು ಹಿರಿಯ ನಾಗರಿಕರನ್ನು ಕಚೇರಿಗಳಿಗೆ ಓಡಾಡಿಸಿಕೊಳ್ಳುವುದು ಸಮಂಜಸವಲ್ಲ. ಈ ಬಗ್ಗೆ ಕಂದಾಯ ಸಚಿವರು, ಇಲಾಖೆ ಉನ್ನತಾಧಿಕಾರಿಗಳು ಗಮನಹರಿಸುವುದು ಒಳಿತು ಎಂಬ ಅಭಿಪ್ರಾಯ ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂದಿದೆ.
ಪ್ರಸಕ್ತ ಕೊರೊನಾ ಕಾರಣಕ್ಕೆ 80 ವರ್ಷ ದಾಟಿರುವ ಸ್ವಾತಂತ್ರ್ಯ ಹೋರಾಟಗಾರರು ಖುದ್ದು ಕಚೇರಿಗೆ ಆಗಮಿಸಿ ಜೀವಿತಾವಧಿ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಸಮಸ್ಯೆಯಾಗುವ ಅಂಶವನ್ನು ಜಿಲ್ಲಾಧಿಕಾರಿಗಳು, ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕ್ರಮ ವಹಿಸಲಾಗುವುದು.
-ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ, ತುಮಕೂರು.
ಜಿಲ್ಲೆಯಲ್ಲಿ 714 ಜನ ಕಲಾವಿದರು ಹಾಗೂ ಅವರ ಕುಟುಂಬದವರು ಪಿಂಚಣಿ ಪಡೆಯುತ್ತಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆಯೇ ಇವರಿಂದ ಜೀವಿತಾವಧಿ ಪ್ರಮಾಣ ಪತ್ರ ಪಡೆಯಲಾಗಿದೆ. ಪ್ರತೀ ವರ್ಷದಂತೆ ನವೆಂಬರ್‍ನಲ್ಲೂ ಪಡೆಯಬೇಕೇ? ಅಥವಾ ಈಗ ಪಡೆದಿರುವುದೇ ಸಾಕೇ ಎಂಬ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕ್ರಮ ವಹಿಸಲಾಗುವುದು.
-ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ, ತುಮಕೂರು.
ಎಸ್.ಹರೀಶ್ ಆಚಾರ್ಯ








