ಜಿಲ್ಲಾ ಜಲಬಿಕ್ಕಟ್ಟು : ಪಾವಗಡ, ಶಿರಾ, ಮಧುಗಿರಿ ಮರುಭೂಮಿಯಾದೀತು.!!

ತುಮಕೂರು

   “ಬೆಟ್ಟಗುಡ್ಡಗಳ ನಾಶ, ಅರಣ್ಯ ಪ್ರದೇಶಗಳ ವಿನಾಶ ಹಾಗೂ ಹವಾಮಾನ ವೈಪರಿತ್ಯಗಳ ಕಾರಣಗಳಿಂದ ತುಮಕೂರು ಜಿಲ್ಲೆಯ ಪಾವಗಡ, ಶಿರಾ ಮತ್ತು ಮಧುಗಿರಿ ತಾಲ್ಲೂಕುಗಳು 2030 ರ ಹೊತ್ತಿಗೆ ಮರುಭೂಮಿಯಾದೀತು ಎಂಬ ತಜ್ಞರ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸುವಂತಿಲ್ಲ” ಎಂಬ ಗಂಭೀರ ಸಂಗತಿಯತ್ತ ತುಮಕೂರಿನ ಸಹಜ ಬೇಸಾಯ ಶಾಲೆಯ ಕೃಷಿ ತಜ್ಞ ಡಾ. ಎಚ್.ಮಂಜುನಾಥ್ ಅವರು ಜಿಲ್ಲೆಯ ಜನರ ಗಮನ ಸೆಳೆದಿದ್ದಾರೆ.

     ಅವರು ಶನಿವಾರ ಬೆಳಗ್ಗೆ ತುಮಕೂರು ನಗರದ ಗಾರ್ಡನ್ ರಸ್ತೆಯ ಕಲ್ಪತರು ವನದ ದಾರಿಯಲ್ಲಿರುವ ತುಮಕೂರು ವಿಜ್ಞಾನ ಕೇಂದ್ರದ ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಲಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆ, ಜೀವನಾಡಿ ಯುವಬಳಗ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಟ್ಟಿರುವ ಎರಡು ದಿನಗಳ

“ತುಮಕೂರು ಜಿಲ್ಲಾ ಜಲ ಬಿಕ್ಕಟ್ಟು:

       ಕಾರಣಗಳು- ಪರಿಹಾರಗಳು” ಕುರಿತ ಕಾರ್ಯಾಗಾರದಲ್ಲಿ “ಪ್ರಮುಖ ಜಲಮೂಲ-ಮಳೆ ನೀರು” ಎಂಬ ಬಗ್ಗೆ ವಿಷಯ ಮಂಡಿಸಿ ಮಾತನಾಡುತ್ತಿದ್ದರು.“ಪ್ರಾಕೃತಿಕವಾಗಿ ಸೃಷ್ಟಿಯಾಗಿರುವ ಬೆಟ್ಟವನ್ನು ನಾವು ಹೊಸದಾಗಿ ಸೃಷ್ಟಿಸಲು ಸಾಧ್ಯವೇ?” ಎಂಬ ಪ್ರಶ್ನೆಯೊಡನೆ ಚರ್ಚೆ ಆರಂಭಿಸಿದ ಅವರು, “ತುಮಕೂರು ಜಿಲ್ಲೆಯಲ್ಲಿ ಮಳೆ ಬೀಳಲು ಮೂಲ ಕಾರಣವಾಗುವ ಬೆಟ್ಟಗುಡ್ಡಗಳು ಗಣಿಗಾರಿಕೆಯ ಕಾರಣದಿಂದ ನಾಶವಾಗುತ್ತಿವೆ. ಅದೇ ರೀತಿ ಕಾಡನ್ನು ಕಡಿದು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಅರಣ್ಯ ಪ್ರದೇಶಗಳೂ ಕ್ಷೀಣಗೊಳ್ಳುತ್ತಿವೆ. ಹೀಗಾದರೆ ಮಳೆ ಬರುವುದು ಹೇಗೆ? ತುಮಕೂರು ಜಿಲ್ಲೆಯ ಸುಮಾರು 30 ಲಕ್ಷ ಜನಸಂಖ್ಯೆಗೆ ಹಾಗೂ ಅದಕ್ಕಿಂತ ದುಪ್ಪಟ್ಟು ಸಂಖ್ಯೆಯಲ್ಲಿರುವ ಜಾನುವಾರು-ಪ್ರಾಣಿಪಕ್ಷಿಗಳಿಗೆ ಕುಡಿಯುವ ನೀರು ಎಲ್ಲಿಂದ ಲಭಿಸಬೇಕು?” ಎಂಬ ಮೂಲಭೂತ ಪ್ರಶ್ನೆಯನ್ನು ಸಭಿಕರ ಮುಂದಿಡುತ್ತ ಮೇಲಿನಂತೆ ಹೇಳಿದರು.

    “ಅಂಕಿ ಅಂಶಗಳ ಪ್ರಕಾರ 2018 ರಲ್ಲಿ ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.21 ರಷ್ಟು ಹೆಚ್ಚು ಮಳೆ ಬಂದಿದೆ. ಆದರೆ ಆ ಮಳೆ ನೀರು ಎಲ್ಲಿ ಹೋಯಿತು? ಆ ಮಳೆ ನೀರಿನಿಂದ ಎಷ್ಟು ಕೆರೆಗಳು ತುಂಬಿದವು? ಅಷ್ಟೊಂದು ಮಳೆಯಿಂದ ಕೃಷಿ ಉತ್ಪಾದನೆ ಅಧಿಕಗೊಂಡಿತೇ ?” ಎಂದು ಡಾ. ಮಂಜುನಾಥ್ ಅವರು ಕೇಳಿದರು.

   “1931ರಿಂದ 1970 ರವರೆಗಿನ ಮಳೆ ನೀರಿನ ಅಂಕಿಅಂಶಗಳನ್ನು ಗಮನಿಸಿದರೆ, ತುಮಕೂರು ಜಿಲ್ಲೆಯಲ್ಲಿ ಆಗ ವಾರ್ಷಿಕ ಮಳೆ ಪ್ರಮಾಣ ಸರಾಸರಿ 867 ಮಿಲಿ ಮೀಟರ್ ಇದ್ದುದು ಕಂಡುಬರುತ್ತದೆ. ಆದರೆ ಇತ್ತೀಚಿನ ಅಂಕಿ ಅಂಶದ ಪ್ರಕಾರ ವಾರ್ಷಿಕ ಮಳೆ ಪ್ರಮಾಣ 780 ಮಿಲಿ ಮೀಟರ್‍ಗೆ ಇಳಿಮುಖವಾಗಿದೆ. ಅದೇ ಹೊತ್ತಿಗೆ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತ, ಉಷ್ಣಾಂಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

     ಎಲ್ಲರೂ ಕೊಳವೆಬಾವಿಗಳನ್ನು ಆಶ್ರಯಿಸಿದ್ದರಿಂದ ಅಂತರ್ಜಲದ ಪ್ರಮಾಣವೂ ವಾರ್ಷಿಕವಾಗಿ ಇಳಿಕೆಯಾಗುತ್ತಿದೆ. ಮಳೆಯ ಬಗ್ಗೆ ವಿವರಗಳು ಲಭಿಸುತ್ತವೆ. ಆದರೆ `ಕೃಷಿ ಮಳೆ’ಯ ಬಗ್ಗೆ ಎಲ್ಲೂ ಮಾಹಿತಿಗಳಿರುವುದಿಲ್ಲ ಹಾಗೂ ಚರ್ಚೆಯೂ ಆಗುವುದಿಲ್ಲ. ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದ ಕಾಲದ ಮಾಹಿತಿ ಪ್ರಕಾರ ಆಗಿನ ಬರಗಾಲದಲ್ಲೂ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ 270 ಕೆ.ಜಿ. ಆಹಾರಧಾನ್ಯಗಳನ್ನು ಉಪಯೋಗಿಸುತ್ತಿದ್ದನೆಂದು ಅಂದಾಜು ಮಾಡಲಾಗಿದೆ.

     ಆದರೆ ಈಗ ಒಬ್ಬ ವ್ಯಕ್ತಿ ಸಾಮಾನ್ಯ ಕಾಲದಲ್ಲೂ ವಾರ್ಷಿಕ 230 ಕೆ.ಜಿ. ಆಹಾರ ಧಾನ್ಯವನ್ನು ಬಳಕೆ ಮಾಡುತ್ತಾನೆಂದು ಹೇಳಲಾಗುತ್ತಿದೆ. ಅಂದರೆ ಆಹಾರ ಬಳಕೆಯ ಪ್ರಮಾಣದಲ್ಲೂ ಇಳಿಮುಖವಾಗಿದೆ. ಆದರೂ ನಾವು ಆಹಾರಧಾನ್ಯ ಉತ್ಪಾದನೆಯಲ್ಲಿ ಮುನ್ನಡೆದಿದ್ದೇವೆಂದು ಹೇಳಿಕೊಳ್ಳುತ್ತೇವೆ” ಎಂದು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.

      “ಮನೆ ಬಳಕೆಗಿರಲಿ, ಕೃಷಿ ಬಳಕೆಗಿರಲಿ, ಕೈಗಾರಿಕೆಗಳ ಬಳಕೆಗಿರಲಿ, ಮೊದಲು ನೀರನ ಉಪಯೋಗಕ್ಕೆ ಸಂಬಂಧಿಸಿದಂತೆ ಜಲಸಾಕ್ಷರತೆ ಇರಬೇಕಾದುದು ಈ ಹೊತ್ತಿನ ಅನಿವಾರ್ಯವಾಗಿದೆ. ಮಳೆ ನೀರನ್ನು ಉಪಯೋಗಿಸಿಕೊಂಡು ಬೆಳೆ ಪದ್ಥತಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಚರ್ಚೆ ಆಗಬೇಕು. ಜಲಾನಯನ ಪ್ರದೇಶಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಬೇಕು. ಸೂರ್ಯನ ಕಿರಣಗಳಿಂದಾಗಿ ಉಷ್ಣಾಂಶ ಅಧಿಕಗೊಂಡು, ನೀರು ಆವಿಯಾಗುವುದು ಹೆಚ್ಚುತ್ತಿದ್ದು ಹರಿಯುವ ನೀರು ನಡು-ನಡುವೆಯೇ ಭೂಮಿಗೆ ಇಂಗುವಂತೆ ಮಾಡುವ ವಿಧಾನವೂ ಬರಬೇಕು. ಕಾಲುವೆಗಳ ಅಕ್ಕಪಕ್ಕ ಹಿಂದಿನ ಕಾಲದಲ್ಲಿ ನೇರಳೆ ಮೊದಲಾದ ಮರಗಳಿದ್ದು, ಅವು ಕಾಲುವೆಗಳಿಗೆ ನೆರಳು ಒದಗಿಸುತ್ತಿದ್ದವು. ಆದರೆ ಈಗ ಆ ಜಾಗವೂ ಒತ್ತುವರಿಗೊಂಡಿದ್ದು ಆ ಬಗ್ಗೆ ಗಮನಿಸಬೇಕು.

       ಜಾನುವಾರುಗಳಿಗಾಗಿಯೇ ಮೀಸಲಿದ್ದ ಗೋಮಾಳಗಳನ್ನು ಸಂರಕ್ಷಿಸಬೇಕು. ಮಹಾತ್ಮ ಗಾಂಧೀಜಿಯವರ `ಗ್ರಾಮಸ್ವರಾಜ್ಯ’ ಪರಿಕಲ್ಪನೆಯಂತೆ ಜಲಾನಯನ ಪ್ರದೇಶಗಳ ಅಭಿವೃದ್ಧಿ ಆಗಬೇಕು. ಅಂತಿಮವಾಗಿ ಪ್ರತಿಯೊಬ್ಬರೂ ಹನಿ-ಹನಿ ನೀರಿನ ಬಳಕೆಯಲ್ಲೂ ಎಚ್ಚರ ವಹಿಸಬೇಕು” ಎಂದು ಡಾ. ಮಂಜುನಾಥ್ ಕಳಕಳಿಯಿಂದ ಹೇಳಿದರು.

ಚರ್ಚೆಯೇ ಆಗುತ್ತಿಲ್ಲ

       ಇದಕ್ಕೂ ಮೊದಲು ಸಹಜ ಬೇಸಾಯ ಶಾಲೆಯ ಸಿ.ಯತಿರಾಜು ಅವರು “ತುಮಕೂರು ಜಿಲ್ಲೆಯ ಜಲಬಿಕ್ಕಟ್ಟು: ಸವಾಲುಗಳು-ಅವಕಾಶಗಳು” ಎಂಬ ವಿಷಯವಾಗಿ ವಿಷಯ ಮಂಡಿಸಿ ಸುದೀರ್ಘವಾಗಿ ಮಾತನಾಡಿದರು. “ಜಿಲ್ಲೆಯ ಜಲಮೂಲಗಳ ಬಗೆಗಿನ ಯಾವುದೇ ಸರ್ಕಾರಿ ದಾಖಲಾತಿಗಳಲ್ಲೂ ಸಹ ಜೀವಪರಿಸರಾತ್ಮಕ ಅಂಶ (ಎಕಾಲಜಿ) ಗಳತ್ತ ಚರ್ಚೆಯೇ ಆಗುತ್ತಿಲ್ಲ” ಎಂದು ವಿಷಾದಿಸಿದರು.

        ತುಮಕೂರು ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವ್ಯವಸ್ಥಿತ ಮೌಲ್ಯಮಾಪನ ಆಗುತ್ತಿಲ್ಲ. ಜಿಲ್ಲೆಗೆ ಹೇಮಾವತಿ ನೀರಿನ ಲಭ್ಯತೆ ಬಗ್ಗೆ ಅಧಿಕೃತವಾಗಿ ಮಾಹಿತಿಗಳನ್ನು ಇಲಾಖೆ ಬಹಿರಂಗಪಡಿಸುತ್ತಿಲ್ಲ. ಹೇಮಾವತಿ ನಾಲೆಯ ನಿರ್ವಹಣೆ ವೈಜ್ಞಾನಿಕವಾಗಿ ಆಗುತ್ತಿಲ್ಲ. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ನಿಗದಿಯಾದ ಪ್ರಮಾಣದಲ್ಲಿ ಹರಿದು ಬಂದರೆ, ಜಿಲ್ಲೆಯ ಶೇ. 80 ರಷ್ಟು ಕೆರೆಗಳನ್ನು ಭರ್ತಿ ಮಾಡಬಹುದಾದರೂ, ಸದರಿ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯೇ ಇಲ್ಲ.

      ಕೆರೆಗಳ ಅಭಿವೃದ್ಧಿ ಎಂದರೆ ಹೂಳೆತ್ತುವ ಕೆಲಸ ಎಂಬ ಭ್ರಮೆಯನ್ನು ಹುಟ್ಟುಹಾಕಿದ್ದು, ಎಲ್ಲೂ ಸಹ ವೈಜ್ಞಾನಿಕ ವಿಧಾನದಲ್ಲಿ ಕೆರೆಗಳ ಅಭಿವೃದ್ಧಿ ಆಗುತ್ತಿಲ್ಲ. ಕೃಷಿ ಹೊಂಡಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ವ್ಯವಸ್ಥೆಯ ಲೋಪಗಳ ಬಗ್ಗೆ ಅವರು ಸಭೆಯ ಗಮನ ಸೆಳೆದರು.

       “ಸರ್ಕಾರದ ಇಲಾಖೆಗಳಿಂದ ವಿವಿಧ ಯೋಜನೆಗಳ ಹೆಸರಿನಲ್ಲಿ ಹಣವಂತೂ ವೆಚ್ಚವಾಗುತ್ತಿದೆ. ಆದ್ದರಿಂದ ರೈತಸಂಘಗಳು ಮತ್ತು ಇತರ ಸಂಘಟನೆಗಳು ವಿವಿಧ ಉದ್ದೇಶಗಳಿಗಾಗಿ ಹೋರಾಟ ಮಾಡುವುದರ ಜೊತೆಗೆ, ಸರ್ಕಾರಿ ಕಾರ್ಯಕ್ರಮಗಳು ವೈಜ್ಞಾನಿಕವಾಗಿ ಜಾರಿಗೊಳ್ಳುವಂತೆ ಮಾಡಲು ಸಹ ರಚನಾತ್ಮಕವಾಗಿ ಶ್ರಮಿಸುವ ಅಗತ್ಯವಿದೆ” ಎಂದು ಯತಿರಾಜು ಅವರು ಒತ್ತಿ ಹೇಳಿದರು.

ಬಳಕೆಯ ಅರಿವು ಅಗತ್ಯ

       ತುಮಕೂರಿನ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೆಕ್ನೋಕಾನ್‍ನ ಎನ್.ವೈ.ರಾಮಮೂರ್ತಿ ಅವರು ಮಾತನಾಡಿ, “ನೀರು ಲಭಿಸುತ್ತಿದೆ. ಆದರೆ ಲಭಿಸುವ ನೀರನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬುದು ಗೊತ್ತಾಗದೆ ಸಮಸ್ಯೆ ಉಂಟಾಗುತ್ತಿದೆ. ಆದಕಾರಣ ನೀರಿನ ಉಪಯೋಗದ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ. ಬುದ್ಧಿವಂತ ವ್ಯಕ್ತಿಗಳು ಇಂದು ಕೃಷಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಬೇಕಾದ ಕಾಲ ಬಂದಿದೆ. ಮಳೆ ಬಂದಾಗ ಅದನ್ನು ಸಂಗ್ರಹಿಸಿಟ್ಟು, ಕೃಷಿಗೆ ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕಾಗಿದೆ” ಎನ್ನುತ್ತ, ಇಸ್ರೇಲ್ ದೇಶದಲ್ಲಿ ತ್ಯಾಜ್ಯ ನೀರನ್ನು ಕೃಷಿ ಕಾರ್ಯಕ್ಕಾಗಿ ಪುನರ್‍ಬಳಕೆ ಮಾಡಿಕೊಂಡು ಇಡೀ ಜಗತ್ತಿನ ಗಮನ ಸೆಳೆದಿರುವುದನ್ನು ಪ್ರಸ್ತಾಪಿಸಿದರು.

      “ನಮ್ಮ ಪೂರ್ವಜರಿಂದ ಅಂತರ್ಜಲ ವೃದ್ಧಿಗಾಗಿ ನಿರ್ಮಾಣಗೊಂಡಿರುವ ಕೆರೆಗಳು ಇಂದು ಬರೀ ಕೆರೆಗಳಾಗಿ ಉಳಿದಿಲ್ಲ. ಬದಲಾಗಿ ರಾಜಕೀಯ ಕೆರೆಗಳಾಗಿ ಪರಿವರ್ತಿತವಾಗಿಬಿಟ್ಟಿವೆ. ಕೆರೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ರಾಜಗಾಲುವೆಗಳು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತಸಂಘಗಳು ಹೋರಾಟ ಮಾಡಬೇಕು” ಎಂದು ಅವರು ಕೋರಿದರು.

      ತುಮಕೂರಿನ ಸ್ಪೆಕ್ಟ್ರಾ ಅಸೋಸಿಯೇಟ್ಸ್‍ನ ಸತ್ಯಾನಂದ್ ಅವರು ವಿಷಯ ಮಂಡಿಸುತ್ತ, ತುಮಕೂರು ಜಿಲ್ಲೆಯಲ್ಲಿ 2,357 ಗ್ರಾಮಗಳಿದ್ದು, 2,022 ಕೆರೆಗಳಿವೆ. ಇವೆಲ್ಲ ಕೆರೆಗಳ ಬಗ್ಗೆ ಸಮರ್ಪಕವಾದ ದಾಖಲೆಗಳು ದೊರಕುವಂತಾಗಬೇಕು. ಇವುಗಳ ಅಭಿವೃದ್ಧಿಗೆ ಆದ್ಯತೆ ಏನೆಂಬುದೂ ಚರ್ಚೆಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

      ಆರಂಭದಲ್ಲಿ ಸಾಂಕೇತಿಕವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯ ಸ್ಥಾಪಕ ವಿಶೇಷ ನಿರ್ದೇಶಕ (ನಿವೃತ್ತ) ಡಾ.ವಿ.ಎಸ್. ಪ್ರಕಾಶ್ ಅವರು ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು. ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅರಣ್ಯಾಧಿಕಾರಿ ನಾಗೇಂದ್ರ ರಾವ್, ರೈತ ಸಂಘದ ಗೋವಿಂದರಾಜು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಂತರ ವಿವಿಧ ಗೋಷ್ಠಿಗಳು ನಡೆದವು. ಭಾನುವಾರ ಸಹ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ವಿವಿಧ ಗೋಷ್ಠಿಗಳು, ಚರ್ಚೆಗಳು ಏರ್ಪಟ್ಟಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link