ಬಾರುಗೋಲು ಚಳವಳಿಗೆ ತೆರಳುತ್ತಿದ್ದ ರೈತರಿಗೆ ಪೊಲೀಸರ ಅಡ್ಡಿ : ಆಕ್ರೋಶ

 ತುಮಕೂರು :


     ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬಾರುಗೋಲು ಚಳವಳಿ, ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜಿಲ್ಲೆಯ ರೈತ ಸಂಘಟನೆಯ ಕಾರ್ಯಕರ್ತರನ್ನು ನಗರದ ಹೊರವಲಯದ ಜಾಸ್‍ಟೋಲ್ ಗೇಟ್ ಬಳಿ ಪೊಲೀಸರು ತಡೆದ ಘಟನೆ ನಡೆದಿದೆ.

     ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತ್ತು ಹುಳಿಯಾರು ಹೋಬಳಿಯ ರೈತ ಸಂಘಟನೆಗಳ ಕಾರ್ಯಕರ್ತರು ಬಾರ್‍ಕೋಲ್ ಚಳವಳಿಯಲ್ಲಿ ಪಾಲ್ಗೊಳ್ಳಲು ವಾಹನದಲ್ಲಿ ತೆರಳುತ್ತಿದ್ದರು. ಸರ್ಕಾರದ ಆದೇಶದ ಮೇರೆಗೆ ಕಾರ್ಯಪ್ರವೃತ್ತರಾಗಿದ್ದ ಜಿಲ್ಲಾ ಪೊಲೀಸರು ಕ್ಯಾತ್ಸಂದ್ರದ ಜಾಸ್‍ಟೋಲ್ ಗೇಟ್ ಬಳಿ ರೈತರ ವಾಹನವನ್ನು ತಡೆದು ಬೆಂಗಳೂರಿಗೆ ತೆರಳದಂತೆ ಅಡ್ಡಿಪಡಿಸಿದರು.

      ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘಟನೆಯ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

      ನಂತರ ಮಾತನಾಡಿದ ರೈತ ಸಂಘಟನೆ ಮತ್ತು ಹಸಿರು ಸೇನೆಯ ಮುಖಂಡ ಕೆಂಕೆರೆ ಸತೀಶ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧೋರಣೆ ಖಂಡಿಸಿ ಬಾರ್‍ಗೋಲು ಚಳವಳಿ ನಡೆಸುತ್ತಿದ್ದೇವೆ. ಈ ಚಳವಳಿಯಲ್ಲಿ ಪಾಲ್ಗೊಳ್ಳದಂತೆ ರೈತರನ್ನು ಪೆÇಲೀಸರು ಅಲ್ಲಲ್ಲಿ ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

      ಕೇಂದ್ರ ಸರ್ಕಾರ 4 ಕೃಷಿ ಕಾಯ್ದೆಗಳಿಗೆ ಹೊರಡಿಸಿರುವ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪೆನಿಗಳ ಪರವಾಗಿವೆ ಎಂದು ದೂರಿದರು.

     ಸುಮಾರು 15 ದಿನಗಳಿಂದ ದೇಶಾದ್ಯಂತ ರೈತರು ಚಳವಳಿ ನಡೆಸುತ್ತಿದ್ದರೂ ಪ್ರಧಾನಿ ರೈತರನ್ನು ಕರೆದು ಅಹವಾಲು ಆಲಿಸುವ ಸೌಜನ್ಯ ತೋರಿಲ್ಲ. ಅವರಿಗೆ ಪಾಠ ಕಲಿಸುವ ಸಲುವಾಗಿ ಬಾರ್‍ಗೋಲು ಚಳವಳಿ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ತಲೆಯಾಡಿಸಿ ಚಕಾರ ಎತ್ತದೆ ಇರುವ ರಾಜ್ಯದ 224 ಶಾಸಕರಿಗೆ, ದೇಶದ ಎಲ್ಲ ಸಂಸದರಿಗೆ ರೈತರ ಧಿಕ್ಕಾರ. ಇವರೆಲ್ಲಾ ರೈತರನ್ನು ಕಡೆಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಪಾಠ ಕಲಿಸಲಾಗುವುದು ಎಂದರು.

     ರೈತರು ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳುತ್ತಾರೆ. ಹೀಗೆ ಹೇಳಲು ಇವರ್ಯಾರು ಎಂದು ಪ್ರಶ್ನಿಸಿದ ಅವರು, ಎಂದೂ ಸಹ ರೈತರ ಚಳವಳಿಗಳು ವಿಫಲವಾಗಿಲ್ಲ. ಇದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು. ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರೈತರು ತಕ್ಕಪಾಠ ಕಲಿಸುತ್ತಾರೆ ಎಂದ ಅವರು, ಕೇರಳದಲ್ಲಿ 18 ತರಕಾರಿಗಳು, ಪಂಜಾಬ್‍ನಲ್ಲಿ ಕೆಲ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಒಳಗೆ ತಂದು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ರಾಜ್ಯದಲ್ಲೂ ಇದೇ ರೀತಿ ಮಾಡುವ ಹುನ್ನಾರ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

      ಚಿ.ನಾ.ಹಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿದೆ. ಕೃಷಿ ವಲಯ ಸಂಕಷ್ಟದಲ್ಲಿದ್ದರೂ ಬಂಡವಾಳ ಶಾಹಿಗಳ ಪರವಾಗಿ ಪ್ರಧಾನಿ ಮೋದಿ ನಿಲ್ಲುವ ಮೂಲಕ ಇಡೀ ಕೃಷಿ ವಲಯವನ್ನು ಸರ್ವನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

      ಈ ಹಿಂದಿನ ಯುಪಿಎ ಸರ್ಕಾರ ಈ ರೀತಿಯ ಧೋರಣೆ ಅನುಸರಿಸಿ ಲೋಕಸಭೆಯಲ್ಲಿ ಲೋಕಪಾಲ್ ಬಿಲ್ ಮಂಡಿಸಿ ಅಧಿಕಾರ ಕಳೆದುಕೊಂಡಿತು. ಮುಂದೆ ನರೇಂದ್ರ ಮೋದಿ ಸರ್ಕಾರಕ್ಕೂ ಇದೇ ಗತಿ ಕಾದಿದೆ. ಆದ್ದರಿಂದ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

      ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರ್ಯಾರಿಗೂ ಅನ್ನದಾತರ ಬಗ್ಗೆ ಕಾಳಜಿ ಇಲ್ಲ ಎಂದರು.

      ನಂತರ ರೈತ ಸಂಘದ ಪದಾಧಿಕಾರಿಗಳು ಪೊಲೀಸರ ಕಣ್ತಪ್ಪಿಸಿ ಬೆಂಗಳೂರಿನತ್ತ ತೆರಳಿದರು. ಈ ಸಂದರ್ಭದಲ್ಲಿ ಸೀಗೆಬಾಗಿ ಲೋಕೇಶ್, ಕಾಡಿನ ರಾಜ, ಕನ್ನಪ್ಪ, ದಾಸಪ್ಪ, ಬಸವಪ್ಪ, ಚೇತನ್, ಚಂದ್ರಪ್ಪ, ಶಿವಣ್ಣ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link