ಶಿರಾ :

ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ಯಾರೂ ಕೂಡ ಮತಗಟ್ಟೆಯನ್ನು ಪ್ರವೇಶಿಸಿ ಮತದಾನ ಮಾಡುವ ಭಾವಚಿತ್ರಗಳನ್ನು ತೆಗೆಯುವಂತಿಲ್ಲ. ಆದರೆ ಶಿರಾ ತಾಲ್ಲೂಕಿನ ಶಾಸಕರು ಮತ ಚಲಾಯಿಸುವ ಭಾವಚಿತ್ರಗಳನ್ನು ತೆಗೆಯಲು ಕೆಲ ಮತಗಟ್ಟೆಗಳಲ್ಲಿ ಅವಕಾಶ ನೀಡಿ ಮತ್ತಲವರ ಫೋಟೋ ತೆಗೆಯಲು ಅವಕಾಶ ನೀಡದೆ ತಾರತಮ್ಯವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿಯ 371ನೇ ಮತಗಟ್ಟೆಯಲ್ಲಿ ನಡೆದಿದೆ.
ಯಾವುದೇ ಜನಪ್ರತಿನಿಧಿಗಳಾಗಲಿ, ನಾಯಕರಾಗಲಿ ಮತ ಚಲಾಯಿಸುವಾಗ ಮತಗಟ್ಟೆಯ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ ಮತಗಟ್ಟೆಯ ಒಳಗೂ ಪ್ರವೇಶ ಮಾಡುವಂತಿಲ್ಲ. ಫೋಟೋಗಳನ್ನು ತೆಗೆಯುವುದು ಕೂಡ ಕಾನೂನು ಬಾಹಿರವೆಂಬುದು ಹಗಲಿನಷ್ಟೇ ಸತ್ಯ.
ಶಿರಾ ಕ್ಷೇತ್ರದ ಶಾಸಕರು ಮತ ಚಲಾಯಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದೇ ದಿನದಂದು ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್ ತಮ್ಮ ಸ್ವ-ಗ್ರಾಮವಾದ ಚಿನ್ನೇನಹಳ್ಳಿಯಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದಾರೆ. ಕೆಲ ಮಾಧ್ಯಮದವರು ಅವರು ಮತ ಚಲಾಯಿಸುವ ಫೋಟೋ ತೆಗೆಯಲು ಮುಂದಾದಾಗ ಮತಗಟ್ಟೆಯ ಅಧಿಕಾರಿ ಫೋಟೋ ತೆಗೆಯಕೂಡದೆಂದು ಅಡ್ಡಿಪಡಿಸಿದ್ದು, ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆದಿದೆ ಎನ್ನಲಾಗಿದೆ.
ಮತದಾನ ಮಾಡುವ ಫೋಟೋಗಳನ್ನು ತೆಗೆಯಲು ಅವಕಾಶ ನೀಡಬೇಕು. ಇಲ್ಲವೇ ಕೆಲ ಮತಗಟ್ಟೆಗಳಲ್ಲಿ ಫೋಟೋ ತೆಗೆಯಲು ಅವಕಾಶ ನೀಡಿದವರ ಮೇಲೆ ಕ್ರ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟಿಗೆ ಕೂತಾಗ ಸುಮಾರು ಅರ್ಧ ತಾಸಿನವರೆಗೂ ಮತದಾನ ಸ್ಥಗಿತಗೊಂಡಿತ್ತು ಎನ್ನಲಾಗಿದೆ.
ಶಾಸಕರು ಮತ ಹಾಕುವಾಗ ಫೋಟೋ ತೆಗೆಯಲು ಮತಗಟ್ಟೆಯ ಅಧಿಕಾರಿಗಳೆ ಚಿರತಹಳ್ಳಿ ಮತಗಟ್ಟೆಯಲ್ಲಿ ಅವಕಾಶ ನೀಡಿದ್ದು, ನಮಗೂ ಅವಕಾಶ ನೀಡಬೇಕೆಂದು ಸಿ.ಆರ್.ಉಮೇಶ್ ಸೇರಿದಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮತಗಟ್ಟೆಯೊಳಗೆ ಫೋಟೋಗಳನ್ನು ತೆಗೆಯಬಾರದೆನ್ನುವ ನಿಯಮವಿದ್ದರೂ ಅದಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಮತಗಟ್ಟೆಯ ಅಧಿಕಾರಿಗಳಿಗೆ ಹಾಗೂ ಚುನಾವಣಾಧಿಕಾರಿ ಮಮತ ಅವರಿಗೆ ಸಿ.ಆರ್.ಉಮೇಶ್ ದೂರನ್ನು ನೀಡಿದ್ದಾರೆ.
ಈ ಬಗ್ಗೆ ಪ್ರಗತಿಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಮಮತಾ ಅವರು ಮತಗಟ್ಟೆಯಲ್ಲಿ ಸಾರ್ವಜನಿಕರು ಫೋಟೋಗಳನ್ನಾಗಲಿ, ವೀಡಿಯೋಗಳನ್ನಾಗಲಿ ತೆಗೆಯುವಂತಿಲ್ಲ. ಚುನಾವಣಾ ಆಯೋಗದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








