ತುಮಕೂರು :
ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿ ಹಾಗೂ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಕೊಠಡಿಗಳನ್ನು ಸ್ಯಾನಿಟೈಸಿಂಗ್ ಮಾಡಿ ಸಿದ್ಧಗೊಳಿಸಲಾಗಿದೆ.
ತಳಿರುತೋರಣ ಕಟ್ಟಿ ಶಾಲೆ, ಕಾಲೇಜು ಆರಂಭವನ್ನು ಹಬ್ಬದ ರೀತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವರ್ಷವಿಡೀ ಶಾಲೆ, ಕಾಲೇಜು ಆರಂಭವಾಗದೆ ಶೈಕ್ಷಣಿಕ ಚಟುವಟಿಕೆ ಅಸ್ತವ್ಯಸ್ಥವಾಗಿತ್ತು. ಅದನ್ನು ಸಗಮಗೊಳಿಸುವ ಪ್ರಯತ್ನವಾಗಿ ಸರ್ಕಾರ ಈಗ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯೂಸಿ ತರಗತಿಗಳನ್ನು ಆರಂಭ ಮಾಡಲು ಅನುಮತಿ ನೀಡಿದೆ.
ಮಕ್ಕಳು ಮತ್ತು ಶಿಕ್ಷಕರ ಆರೋಗ್ಯದ ದೃಷ್ಠಿಯಿಂದ ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ದಿ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಎಲ್ಲಾ ಶಾಲಾ ಕಟ್ಟಡ, ಶೌಚಾಲಯ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ತರಗತಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡಿಲ್ಲ, ಹಾಜರಾಗಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಪರ್ಯಾಯವಾಗಿ ಆನ್‍ಲೈನ್ ತರಗತಿಯಲ್ಲಿಯೂ ಪಾಠ ಕೇಳಬಹುದಾಗಿದೆ. ಶಾಲೆಗೆ ಬರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕುಡಿಯುವ ನೀರನ್ನು ಮನೆಯಿಂದಲೇ ತರಬೇಕು. ಶಾಲೆಯಲ್ಲಿ ಬಿಸಿಯೂಟ ನೀಡುವುದಿಲ್ಲ. ಬದಲಿಗೆ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಮನೆಗೆ ನೀಡಲಾಗುತ್ತದೆ.
ತರಗತಿಯಲ್ಲಿ 15 ವಿದ್ಯಾರ್ಥಿಗಳಂತೆ ತಂಡ ರಚಿಸಲು ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ತಿಳಿಸಲಾಗಿದೆ. ಕೋವಿಡ್-19 ನಿಯಮದನ್ವಯ ಅಂತರ ಕಾಯ್ದುಕೊಂಡು ಒಂದು ತಂಡಕ್ಕೆ ಪ್ರಥಮ ಭಾಷೆ ಬೋಧನೆ ಮಾಡಿದಲ್ಲಿ ಅದೇ ಸಮಯದಲ್ಲಿ ಮತ್ತೊಂದು ತಂಡಕ್ಕೆ ದ್ವಿತೀಯ ಭಾಷೆ ಬೋಧಿಸಲಾಗುತ್ತದೆ. ಈ ರೀತಿ ರೊಟೇಷನ್ ಆಧಾರದಲ್ಲಿ ಎಲ್ಲಾ ತಂಡಗಳಿಗೂ ಬೋಧನಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತುಮಕೂರು ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ಸಂಖ್ಯೆಯನ್ನಾಧರಿಸಿ ಬೋಧನಾ ಕೊಠಡಿಗಳು ಕೊರತೆಯಾದಲ್ಲಿ ಗಣಕ ಯಂತ್ರ, ಪ್ರಯೋಗಾಲಯ, ಸಭಾ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ನಾಡಗೀತೆ, ರಾಷ್ಟ್ರಗೀತೆ ಇತ್ಯಾದಿ ಪ್ರಾರ್ಥನೆಗೆ ಅವಕಾಶ ನಿಡದೇ ನೇರವಾಗಿ ತರಗತಿ ಪ್ರಾರಂಭಿಸಬೇಕೆಂದು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ವಿದ್ಯಾರ್ಥಿಯೂ ತರಗತಿಗೆ ಬರುವಾಗ ಪ್ರಾರಂಭದಲ್ಲಿ ಪೋಷಕರ ಒಪ್ಪಿಗೆ ತರಬೇಕು. ಶಾಲೆಯಲ್ಲಿಯೂ ಅಕ್ಷರ ದಾಸೋಹದ ಅಡಿಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಾರಂಭದ ದಿನದಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು ಶಾಲೆ ಪ್ರಾರಂಭದ 3 ದಿನದೊಳಗೆ ಕೋವಿಡ್-19 ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿಯನ್ನು ಪಡೆದು ಕಡ್ಡಾಯವಾಗಿ ಮುಖ್ಯ ಶಿಕ್ಷಕರಿಗೆ ಸಲ್ಲಿಸಬೇಕು ಎಂದು ಸೂಚನೆ ನಿಡಲಾಗಿತ್ತು.
ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಕಾರ್ಯಚಟುವಟಿಕೆಗಳ ನಿಗಾ ಇಡಲು ಪ್ರತಿ ಶಾಲೆಯಲ್ಲಿಯೂ ಮಾರ್ಗದರ್ಶಕ ಶಿಕ್ಷಕರನ್ನು ನೇಮಿಸಲಾಗಿದೆ. ತರಗತಿಗಳನ್ನು ಬೆಳಿಗ್ಗೆ 10 ಗಂಟೆಯಿಂದ 45 ನಿಮಿಷಗಳ ಕಾಲ 03 ಅವಧಿಗೆ ನಡೆಸಲಾಗುತ್ತದೆ.
ಶಾಲೆ ಪ್ರಾರಂಭಕ್ಕೆ ಮುಂಚೆ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಮಾರ್ಗಸೂಚಿ ನೀಡಲಾಗಿದೆ ಹಾಗೂ ಎಲ್ಲಾ ಎಸ್‍ಡಿಎಂಸಿಗಳು ಮತ್ತು ಪೋಷಕರ ಸಭೆಯನ್ನು ನಡೆಸಿ ತರಗತಿಗಳು ನಡೆಯುವ ಬಗ್ಗೆ ಮಾಹಿತಿ ನೀಡಲು ಎಲ್ಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ಹೇಳಿದರು.
ತರಗತಿ ನಡೆಸುವ ಬಗ್ಗೆ ಇಲಾಖೆಯು ಎಸ್.ಓ.ಪಿ.ಯನ್ನು ನೀಡಿದ್ದು, ಅದರಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಅನುಪಾಲಿಸಲು ಕ್ರಮಕೈಗೊಳ್ಳಲಾಗಿದೆ. ಸೋಂಕಿತ ಶಿಕ್ಷಕರು/ ವಿದ್ಯಾರ್ಥಿಗಳು ಕಂಡುಬದಲ್ಲಿ ತಕ್ಷಣ ಆರೋಗ್ಯ ಇಲಾಖೆ ಸಹಾಯಕರನ್ನು ಕರೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವರಿಗಾಗಿ ಪ್ರತಿ ಶಾಲೆಯಲ್ಲಿ ಒಂದು ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿದೆ.
ಖಾಸಗಿ ಶಾಲೆಯವರು ವಿದ್ಯಾರ್ಥಿಗಳನ್ನು ಕರೆತರಲು ಬಸ್ ಬಳಸುವ ಪೂರ್ವದಲ್ಲಿ ಬಸ್ಸನ್ನು ಸ್ಯಾನಿಟೈಸ್ ಮಾಡಿಸುವುದು ಕಡ್ಡಾಯ ಹಾಗೂ ವಿದ್ಯಾರ್ಥಿಗಳು ಬಸ್ ಹತ್ತುವಾಗ, ಇಳಿಯುವಾಗ ಸಾಮಾಜಿಕ ಅಂತರ ಕಾಪಾಡುವುದು, ಬಸ್‍ನಲ್ಲಿ ಶೇಕಡ 50ರಷ್ಟು ವಿದ್ಯಾರ್ಥಿಗಳನ್ನು ಕರೆತರಲು ಸೂಚಿಸಲಾಗಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರ ಕೋವಿಡ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಿಇಓಗಳು, ತಾಲ್ಲೂಕಿನ ಆರೋಗ್ಯಾಧಿಕಾರಿಗಳು ಭೇಟಿ ಮಾಡಿ ಕೋವಿಡ್ ಟೆಸ್ಟ್ ಮಾಡಿಸಲು ನಿಗಧಿತ ಸ್ಥಳ ಗುರ್ತಿಸುವಂತೆ ಕೋರಲಾಗಿದೆ.
ಕೊರೋನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ :
ಜನವರಿ 1ರಿಂದ ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದ್ದು, ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ/ಖಾಸಗಿ ಪದವಿಪೂರ್ವ ಕಾಲೇಜುಗಳು ಕಡ್ಡಾಯವಾಗಿ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಬೇಕು. ಬನ್ನಿ ಮಹಾಮಾರಿ ಕೊರೋನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ ಮತ್ತು ಸೋಂಕು ಉಂಟು ಮಾಡುವುದಿಲ್ಲ-ಸೋಂಕು ಹರಡುವುದಿಲ್ಲ ಎಂಬ ಇಲಾಖೆಯ ಘೋಷವಾಕ್ಯವನ್ನು ಎಲ್ಲಾ ಕಾಲೇಜಿನ ಫಲಕದಲ್ಲಿ ಬರೆಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಕೆ. ನರಸಿಂಹಮೂರ್ತಿ ಸೂಚನೆ ನೀಡಿದ್ದಾರೆ.
ಪ್ರಾಚಾರ್ಯರು ತಮ್ಮ ಕಾಲೇಜಿನಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಅಗತ್ಯ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಪ್ರತಿ ಕೊಠಡಿಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್‍ಗೊಳಿಸಬೇಕಲ್ಲದೆ, ಥರ್ಮಲ್ ಸ್ಕ್ಯಾನರ್‍ಅನ್ನು ತಪ್ಪದೇ ಬಳಸಬೇಕು. ಉಪನ್ಯಾಸಕರಿಗೆ ಕಡ್ಡಾಯವಾಗಿ ಆರ್.ಟಿ.ಪಿ.ಎಸ್. ತಪಾಸಣೆ ಮಾಡಿಸಬೇಕು. ಪ್ರತಿ ವಿದ್ಯಾರ್ಥಿಯು ಮನೆಯಿಂದ ಬಿಸಿನೀರನ್ನು ತರಬೇಕು ಎಂದು ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಬೋಧಕ/ಬೋಧಕೇತರ ಸಿಬ್ಬಂದಿಗಳು ತಪ್ಪದೆ ಮಾಸ್ಕ್ ಧರಿಸಿರಬೇಕು. ಕಾಲೇಜು ಆವರಣದಲ್ಲಿ ಗುಂಪು ಸೇರುವುದು ಹಾಗೂ ಪ್ರಾರ್ಥನೆ, ಸಭೆ, ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡೆಗಳನ್ನು ನಡೆಸಲು ಸದ್ಯಕ್ಕೆ ಅವಕಾಶ ನೀಡಿಲ್ಲ. ಪ್ರತಿ ತರಗತಿಯಲ್ಲಿ ಗರಿಷ್ಟ 15 ವಿದ್ಯಾರ್ಥಿಗಳಿಗೆ ಮಾತ್ರ ಆರು ಅಡಿ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪ್ರಾಚಾರ್ಯರಿಗೆ ನೀಡಬೇಕು.
ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಂಡು ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ತಿಳಿಸಿದರಲ್ಲದೆ, ಕಾಲೇಜುಗಳನ್ನು ಪ್ರಾರಂಭಿಸಲು ತಳಿರು-ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳನ್ನು ಆಹ್ವಾನಿಸಬೇಕು. ಪ್ರತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೈತೊಳೆಯಲು ಲಿಕ್ವಿಡ್ ಸೋಪ್ ವ್ಯವಸ್ಥೆ ಮಾಡಬೇಕು. ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ನಿಟ್ಟಿನಲ್ಲಿ ಪ್ರಾಂಶುಪಾಲರು ಸ್ಥಳೀಯ ಆರೋಗ್ಯ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಬೇಕು. ಕಾಲೇಜಿನಲ್ಲಿರುವ ಶೌಚಾಲಯಗಳನ್ನು ಸ್ವಚ್ಛವಾಗಿಡಬೇಕು ಎಂದು ನಿರ್ದೇಶನ ನೀಡಿದರು.
ಎಸೆಸ್‍ಎಲ್‍ಸಿ ಮತ್ತು ದ್ವಿತೀಯ ಪಿಯೂಸಿ ತರಗತಿಗಳು ಆರಂಭಗೊಂಡ ನಂತರ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ, ಇತರೆ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಶಾಲಾ ಆವರಣದಲ್ಲಿಯೇ ವಿದ್ಯಾಗಮ ಕಾರ್ಯಕ್ರಮ :
6 ರಿಂದ 9ನೇ ತರಗತಿಯ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮವೂ ಜನವರಿ 1ರಿಂದ ಆರಂಭವಾಗುತ್ತಿದೆ. ಈ ಬಾರಿ ವಿದ್ಯಾಗಮ ಕಾರ್ಯಕ್ರಮ ಕೋವಿಡ್-19 ಮಾರ್ಗಸೂಚಿಯ ಪ್ರಕಾರವೇ ಶಾಲೆಗಳ ಆವರಣದಲ್ಲಿ ನಡೆಯುತ್ತದೆ. ಇಲಾಖೆ ನೀಡಿರುವ ಮಾದರಿಯಲ್ಲಿ ತಂಡವಾರು ವಿದ್ಯಾರ್ಥಿಗಳನ್ನು ರಚಿಸಿಕೊಂಡು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ವಾಸಸ್ಥಳದ ಸಮೀಪದಲ್ಲಿನ ಯಾವುದೇ ಸರ್ಕಾರಿ ಶಾಲೆಯಲ್ಲಿಯೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ತರಗತಿಯಲ್ಲಿ 15 ವಿದ್ಯಾರ್ಥಿಗಳಂತೆ ತಂಡ ರಚಿಸಲು ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ತಿಳಿಸಲಾಗಿದೆ. ಕೋವಿಡ್-19 ನಿಯಮದನ್ವಯ ಅಂತರ ಕಾಯ್ದುಕೊಂಡು ಒಂದು ತಂಡಕ್ಕೆ ಪ್ರಥಮ ಭಾಷೆ ಬೋಧನೆ ಮಾಡಿದಲ್ಲಿ ಅದೇ ಸಮಯದಲ್ಲಿ ಮತ್ತೊಂದು ತಂಡಕ್ಕೆ ದ್ವಿತೀಯ ಭಾಷೆ ಬೋಧಿಸಲಾಗುತ್ತದೆ. ಈ ರೀತಿ ರೊಟೇಷನ್ ಆಧಾರದಲ್ಲಿ ಎಲ್ಲಾ ತಂಡಗಳಿಗೂ ಬೋಧನಾ ಪ್ರಕ್ರಿಯೆ ನಡೆಸಲಾಗುತ್ತದೆ.
-ಸಿ.ನಂಜಯ್ಯ, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ.
ಕಾಲೇಜು ಆವರಣದಲ್ಲಿ ಗುಂಪು ಸೇರುವುದು ಹಾಗೂ ಪ್ರಾರ್ಥನೆ, ಸಭೆ, ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡೆಗಳನ್ನು ನಡೆಸಲು ಸದ್ಯಕ್ಕೆ ಅವಕಾಶ ನೀಡಿಲ್ಲ. ಪ್ರತಿ ತರಗತಿಯಲ್ಲಿ ಗರಿಷ್ಟ 15 ವಿದ್ಯಾರ್ಥಿಗಳಿಗೆ ಮಾತ್ರ ಆರು ಅಡಿ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪ್ರಾಚಾರ್ಯರಿಗೆ ನೀಡಬೇಕು.
-ಹೆಚ್.ಕೆ. ನರಸಿಂಹಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ.