ತುಮಕೂರು :
ಇಲ್ಲಿನ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಚ ಸರ್ವೇಕ್ಷಣ್-2021ರ ಅಂಗವಾಗಿ ನಮ್ಮ ತುಮಕೂರು ಸ್ವಚ್ಚ ತುಮಕೂರು ಎಂಬ ಘೋಷವಾಕ್ಯದಡಿ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು 5 ಕಿ.ಮೀ. ವಾಕ್‍ಥಾನ್ ನಡೆಸಲಾಯಿತು.
ಮಹಾನಗರ ಪಾಲಿಕೆ ಆವರಣದಲ್ಲಿಂದು ಬೆಳಿಗ್ಗೆ ಹೊರಟ ವಾಕಥಾನ್‍ಗೆ ಮೇಯರ್ ಫರೀದಾಬೇಗಂ ಹಾಗೂ ಆಯುಕ್ತ ರೇಣುಕಾ ಅವರು ಹಸಿರು ನಿಶಾನೆ ತೋರಿದರು.
ನಂತರ ಮಾತನಾಡಿದ ಮೇಯರ್ ಫರೀದಾಬೇಗಂ ಅವರು, ನಗರದ ನಾಗರಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವಾಕ್‍ಥಾನ್ ನಡೆಸಲಾಗುತ್ತಿದೆ. ಈ ಹಿಂದೆ ನಗರದ ಸ್ವಚ್ಚತೆ ಕಾಪಾಡುವಲ್ಲಿ ತುಮಕೂರು ಮಹಾನಗರ ಪಾಲಿಕೆ 2ನೇ ರ್ಯಾಂಕ್ ಮತ್ತು 48ನೇ ರ್ಯಾಂಕಿಂಗ್ ಪಡೆದಿತ್ತು. ಇನ್ನು ಮುಂದೆಯೂ ಇದೇ ರೀತಿ ಅತ್ಯುತ್ತಮವಾಗಿ ನಗರದಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚಿನ ರ್ಯಾಂಕಿಂಗ್ ಪಟ್ಟಿಗೆ ತುಮಕೂರು ಪಾಲಿಕೆ ಸೇರ್ಪಡೆಯಾಗಬೇಕು ಎಂಬುದು ನಮ್ಮೆಲ್ಲ ಆಶಯ ಎಂದರು.
ಉತ್ತಮ ರ್ಯಾಂಕಿಂಗ್ ಪಡೆಯಲು ನಗರದ ನಾಗರಿಕರ ಸಹಕಾರ ಅತಿ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ಸ್ವಚ್ಚತೆ ಕಡೆ ಗಮನ ಹರಿಸಬೇಕು ಎಂದರು.
ಸ್ವಚ್ಚ ಸರ್ವೇಕ್ಷಣೆ 2020-21ನೇ ಸಾಲಿಗೆ ಸ್ವಚ್ಚತೆ ಆಂದೋಲನದ ಬಗ್ಗೆ ನಾಗರಿಕಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಪಾಲಿಕೆ ಆವರಣದಿಂದ ಹೊರಟ ವಾಕ್‍ಥಾನ್‍ನಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್‍ಎಸ್‍ಎಸ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಜಾಥಾವು ಸುಮಾರು 5 ಕಿ.ಮೀ. ದೂರ ಕ್ರಮಿಸಿ ಸ್ವಚ್ಚತೆ ಬಗ್ಗೆ ನಗರದ ನಾಗರಿಕರಲ್ಲಿ ಅರಿವು ಮೂಡಿಸಿತು.
ಪಾಲಿಕೆ ಮುಂಭಾಗದಿಂದ ಹೊರಟ ವಾಕ್‍ಥಾನ್ ಬಿ.ಹೆಚ್. ರಸ್ತೆ ಮುಖೇನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಹಾದು ಎಸ್‍ಎಸ್‍ಐಟಿ, ಎಸ್‍ಎಸ್‍ಪುರಂ ಮೂಲಕ ಮತ್ತೆ ಪಾಲಿಕೆ ಆವರಣಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ ಪಾಲಿಕೆ ಸದಸ್ಯರುಗಳಾದ ನರಸಿಂಹಮೂರ್ತಿ, ಮಲ್ಲಿಕಾರ್ಜುನಯ್ಯ, ರಮೇಶ್, ಶ್ರೀನಿವಾಸ್, ಪಾಲಿಕೆ ಆರೋಗ್ಯಾಧಿಕಾರಿ ಡಾ ನಾಗೇಶ್‍ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
